ಲಂಡನ್ : ಪೋಲೆಂಡ್‌ನ ಹ್ಯೂಬರ್ಟ್ ಹುರ್ಕಾಝ್ 2021ರ ವಿಂಬಲ್ಡನ್ ಕೂಟದ ದೊಡ್ಡದೊಂದು ಏರುಪೇರಿನ ಫಲಿತಾಂಶಕ್ಕೆ ಸಾಕ್ಷಿಯಾಗಿದ್ದಾರೆ. ದ್ವಿತೀಯ ಶ್ರೇಯಾಂಕದ ರಶ್ಯನ್ ಟೆನಿಸಿಗ ಡ್ಯಾನಿಲ್ ಮೆಡ್ವೆಡೇವ್ ಅವರನ್ನು 5 ಸೆಟ್‌ಗಳ ಥ್ರಿಲ್ಲರ್‌ನಲ್ಲಿ ಪರಾಭವಗೊಳಿಸಿ ಮೊದಲ ಸಲ ಗ್ರಾನ್‌ಸ್ಲಾಮ್ ಕ್ವಾರ್ಟರ್ ಫೈನಲ್‌ಗೆ ಓಟ ಬೆಳೆಸಿದ್ದಾರೆ.
24 ವರ್ಷದ ಹ್ಯೂಬರ್ಟ್ ಹುರ್ಕಾಝ್ ಕ್ವಾರ್ಟರ್ ಫೈನಲ್‌ನಲ್ಲಿ ತಮ್ಮ ಐಡಲ್ ರೋಜರ್ ಫೆಡರರ್ ಅವರನ್ನು ಎದುರಿಸಲಿರುವುದು ವಿಶೇಷ.
“ಸೆಂಟರ್ ಕೋರ್ಟ್’ನಲ್ಲಿ ನಡೆದ ಮಂಗಳವಾರದ ಮುಖಾಮುಖೀಯಲ್ಲಿ ಹುರ್ಕಾಝ್ 2-6, 7-6 (7-2), 3-6, 6-3, 6-3 ಅಂತರದಿಂದ ಗೆದ್ದು ಬಂದರು. ರೋಜರ್ ಫೆಡರರ್ 7-5, 6-4, 6-2 ಅಂತರದಿಂದ ಇಟಲಿಯ ಲೊರೆಂಜೊ ಸೊನೆಗೊ ಅವರನ್ನು ಮಣಿಸಿದರು. ಫೆಡರರ್ ಆಡುತ್ತಿರುವ 18ನೇ ವಿಂಬಲ್ಡನ್ ಕ್ವಾರ್ಟರ್ ಫೈನಲ್ ಇದಾಗಿದೆ. ಫೆಡರರ್-ಹುರ್ಕಾಜ್ ಇದಕ್ಕೂ ಮುನ್ನ 2019ರ ಇಂಡಿಯಾನ ವೆಲ್ಸ್ ಮಾಸ್ಟರ್ ಕ್ವಾರ್ಟರ್ ಫೈನಲ್‌ನಲ್ಲಿ ಒಮ್ಮೆ ಮುಖಾಮುಖೀಯಾಗಿದ್ದರು. ಇದರಲ್ಲಿ ಸ್ವಿಸ್ ತಾರೆಗೆ ಗೆಲುವು ಒಲಿದಿತ್ತು.
ಪ್ಲಿಸ್ಕೋವಾ, ಸಬಲೆಂಕಾ, ಕೆರ್ಬರ್ ಸೆಮಿಫೈನಲ್ ಪ್ರವೇಶ
ವನಿತೆಯರ ಕ್ವಾರ್ಟರ್ ಫೈನಲ್‌ನಲ್ಲಿ ಕ್ಯಾರೋಲಿನಾ ಪ್ಲಿಸ್ಕೋವಾ, ಅರಿನಾ ಸಬಲೆಂಕಾ ಮತ್ತು ಆ್ಯಂಜೆಲಿಕ್ ಕೆರ್ಬರ್ ಸುಲಭ ಜಯದೊಂದಿಗೆ ಸೆಮಿಫೈನಲ್ ಸೆಣಸಾಟಕ್ಕೆ ಅಣಿಯಾಗಿದ್ದಾರೆ.
ಜೆಕ್ ಆಟಗಾರ್ತಿ ಪ್ಲಿಸ್ಕೋವಾ 6-2, 6-2 ಅಂತರದಿಂದ ಸ್ವಿಜರ್‌ಲ್ಯಾಂಡಿನ ವಿಕ್ಟೋರಿಯಾ ಗೊಲುಬಿಕ್ ಅವರನ್ನು ಮಣಿಸಿದರು. ಬೆಲರೂಸ್‌ನ ಅರಿನಾ ಸಬಲೆಂಕಾ 6-4, 6-3ರಿಂದ ಟ್ಯುನೀಶಿಯಾದ ಓನ್ಸ್ ಜಬೌರ್ ಆಟಕ್ಕೆ ತೆರೆ ಎಳೆದರು. ಜರ್ಮನಿಯ ಕೆರ್ಬರ್‌ಗೆ ಶರಣಾದವರು ಜೆಕ್ ಗಣರಾಜ್ಯದ ಕ್ಯಾರೋಲಿನಾ ಮುಖೋವಾ. ಕೆರ್ಬರ್ 6-2, 6-3 ನೇರ ಸೆಟ್‌ಗಳಿಂದ ಗೆದ್ದು ಬಂದರು.
ಇನ್ನೊಂದು “ಆಲ್ ಆಸ್ಟ್ರೇಲಿಯನ್’ ಕ್ವಾರ್ಟರ್ ಫೈನಲ್‌ನಲ್ಲಿ ಆ್ಯಶ್ಲಿ ಬಾರ್ಟಿ-ಅಜ್ಲಾ ಟೊಮ್ಲಾನೋವಿಕ್ ಮುಖಾಮುಖೀಯಾಗಲಿದ್ದಾರೆ.