Advertisement

Wimbledon 2024: ಕಿರೀಟ ಉಳಿಸಿಕೊಂಡ ಕಾರ್ಲೋಸ್‌ ಅಲ್ಕರಾಜ

10:41 PM Jul 14, 2024 | Team Udayavani |

ಲಂಡನ್‌: ಜಾಗತಿಕ ಟೆನಿಸ್‌ನಲ್ಲಿ ಪ್ರಜ್ವಲಿಸುತ್ತಿರುವ ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌ ವಿಂಬಲ್ಡನ್‌ ಕಿರೀಟ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರವಿವಾರದ ಫೈನಲ್‌ ಹನಾಹಣಿಯಲ್ಲಿ ಅವರು ಸೂಪರ್‌ಸ್ಟಾರ್‌ ನೊವಾಕ್‌ ಜೊಕೋವಿಕ್‌ ಅವರನ್ನು 6-2, 6-2, 7-6 (7-4) ನೇರ ಸೆಟ್‌ಗಳಲ್ಲಿ ಮಣಿಸಿದರು.

Advertisement

ಇದು ಕಳೆದ ವರ್ಷದ ವಿಂಬಲ್ಡನ್‌ ಫೈನಲ್‌ ಪಂದ್ಯದ ಪುನರಾವರ್ತನೆ ಆಗಿತ್ತು. 2023ರಲ್ಲಿ ಜೊಕೋವಿಕ್‌ ವಿರುದ್ಧವೇ 5 ಸೆಟ್‌ಗಳ ಹೋರಾಟ ನಡೆಸಿ ಗೆದ್ದ ಅಲ್ಕರಾಜ್‌ ಮೊದಲ ಬಾರಿಗೆ ವಿಂಬಲ್ಡನ್‌ ರಾಜನಾಗಿ ಪಟ್ಟವೇರಿದ್ದರು. ಅಂದು ಜೊಕೋವಿಕ್‌ 4 ಬಾರಿಯ ಹಾಲಿ ಚಾಂಪಿಯನ್‌ ಆಗಿದ್ದರು.

ಈ ಬಾರಿಯ ಫೈನಲ್‌ ತೀವ್ರ ಪೈಪೋಟಿಯಿಂದ ಕೂಡಿರಲಿದೆ, ಜೊಕೋ ತಿರುಗಿ ಬಿದ್ದು 25ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಎತ್ತುವ ಸಾಧ್ಯತೆ ಇದೆ ಎಂದೆಲ್ಲ ಭಾವಿಸಲಾಗಿತ್ತು. ಆದರೆ ಜೊಕೋವಿಕ್‌ ಸೊಲ್ಲೆತ್ತದೆ ಶರಣಾಗಿ ಅಚ್ಚರಿ, ಆಘಾತ ಮೂಡಿಸಿದರು.
ಸಾಮಾನ್ಯವಾಗಿ ಜೊಕೋ ಇಂಥ ಹೈ ವೋಲ್ಟೆಜ್‌ ಫೈನಲ್‌ನಲ್ಲಿ ಯಾವತ್ತೂ ನೇರ ಸೆಟ್‌ಗಳಲ್ಲಿ ಮುಗ್ಗರಿಸುವವರಲ್ಲ. ಮೊದಲ ಸೆಟ್‌ ಸೋತ ಬಳಿಕ ತಿರುಗಿ ಬಿದ್ದು ಎದುರಾಳಿಯನ್ನು ನರ್ವಸ್‌ ಮಾಡುವುದು ಇವರ ತಂತ್ರಗಾರಿಕೆ. ಆದರೆ ಇಲ್ಲಿ ಅಲ್ಕರಾಜ್‌ ಇಂಥ ಯಾವ ಗೇಮ್‌ಪ್ಲ್ರಾನ್‌ಗೂ ಅವಕಾಶ ಕೊಡಲಿಲ್ಲ. ಜೊಕೋ ಕುಸಿಯುತ್ತಲೇ ಹೋದರು. ಇವರ ಆಟ ಕಂಡಾಗ, “ನನ್ನ ಕಾಲವಿನ್ನು ಮುಗಿಯಿತು’ ಎಂಬ ಸೂಚನೆ ನೀಡಿದಂತಿತ್ತು.

ಸೆಂಟರ್ ಕೋರ್ಟ್ ನಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಮುಂದೆ ನಡೆದ ಫೈನಲ್​ ಪಂದ್ಯವು ಅಲ್ಕರಾಜ್​ಗೆ ಹೆಚ್ಚು ಸರಳವಾಗಿ ಕಾಣಿಸಿತು. ಮೊದಲೆರಡು ಸೆಟ್‌ಗಳನ್ನು ಅಲ್ಕರಾಜ್‌ ಸುಲಭದಲ್ಲಿ ಗೆದ್ದರು. 3ನೇ ಸೆಟ್‌ನಲ್ಲಿ ಜೊಕೋ ಹೋರಾಟ ಮೊದಲ್ಗೊಂಡಾಗ ಅವರ ಅಭಿಮಾನಿಗಳು ಖುಷಿಪಟ್ಟರು. ಆದರೆ ಟೈ ಬ್ರೇಕರ್‌ನಲ್ಲಿ ಅಲ್ಕರಾಜ್‌ ಕೈ ಮೇಲಾಯಿತು. 8ನೇ ವಿಂಬಲ್ಡನ್‌ ಗೆದ್ದು ರೋಜರ್‌ ಫೆಡರರ್‌ ದಾಖಲೆ ಸರಿದೂಗಿಸುವ ಕನಸು ಛಿದ್ರಗೊಂಡಿತು. ಪವರ್‌ಫ‌ುಲ್‌ ಸರ್ವ್‌, ಅತ್ಯಾಕರ್ಷಕ ಬೇಸ್‌ಲೈನ್‌ ಮತ್ತು ಕ್ರಾಸ್‌ಕೋರ್ಟ್‌ ಶಾಟ್ಸ್‌ ಮೂಲಕ ಅಲ್ಕರಾಜ್‌ ಎದುರಾಳಿಯ ಮೇಲೆ ಪ್ರಭುತ್ವ ಸಾಧಿಸಿದರು.

Advertisement

ಅಲ್ಕರಾಜ್ ಕಳೆದ ತಿಂಗಳು ಫ್ರೆಂಚ್ ಓಪನಲ್ಲಿಯೂ ಚಾಂಪಿಯನ್ ಆಗಿದ್ದರು. ಆವೆ ಮಣ್ಣಿನ ಅಂಗಣದಲ್ಲಿ ನಡೆದ ಆ ಟೂರ್ನಿಯಲ್ಲಿ ಟ್ರೋಫಿ ಗೆದ್ದು ಸತತ ಎರಡನೇ ಟ್ರೋಫಿ ಗೆದ್ದು ಸಾಧನೆ ಮಾಡಿದರು. ಈ ಯುವ ಟೆನಿಸ್ ಪಟು 2022ರ ಯುಎಸ್ ಓಪನ್​ ಮೂಲಕ ತನ್ನ ಮೊದಲ ಗ್ರ್ಯಾನ್​ ಸ್ಲಾಮ್ ಪ್ರಶಸ್ತಿ ಗೆದ್ದಿದ್ದರು. ಅದೇ ರೀತಿ ಪ್ರಮುಖ ಫೈನಲ್​ ಪಂದ್ಯಕ್ಕೆ ಪ್ರವೇಶಿಸಿದ ಬಳಿಕ 4 0 ಗೆಲುವು ಸೋಲಿನ ಅಂತರದ ಸಾಧನೆಯೂ ತಮ್ಮದಾಗಿಸಿಕೊಂಡರು.

 4ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ
ಇದು ಕಾರ್ಲೋಸ್‌ ಅಲ್ಕರಾಜ್‌ಗೆ ಒಲಿದ 2ನೇ ವಿಂಬಲ್ಡನ್‌ ಹಾಗೂ 4ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ. ಅವರು ಈ ವರ್ಷದ ಫ್ರೆಂಚ್‌ ಓಪನ್‌ ಚಾಂಪಿಯನ್‌ ಕೂಡ ಹೌದು. 2022ರಲ್ಲಿ ಯುಎಸ್‌ ಓಪನ್‌ ಪ್ರಶಸ್ತಿ ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next