ಲಂಡನ್: ಸ್ಟಾರ್ ಟೆನಿಸಿಗ ನೊವಾಕ್ ಜೊಕೋವಿಚ್ ಮತ್ತೂಂದು ಮೈಲುಗಲ್ಲು ನೆಟ್ಟಿದ್ದಾರೆ. ವಿಂಬಲ್ಡನ್ ಗೆಲ್ಲುವ ನೆಚ್ಚಿನ ಆಟಗಾರನಾಗಿರುವ ಅವರೀಗ 46ನೇ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್ ಆಡಲಿಳಿಯಲಿದ್ದಾರೆ. ಇದರೊಂದಿಗೆ ಪುರುಷರ ಗ್ರ್ಯಾನ್‌ಸ್ಲಾಮ್ ಇತಿಹಾಸದಲ್ಲಿ ಅತ್ಯಧಿಕ ಸೆಮಿಫೈನಲ್ ಕಂಡ ರೋಜರ್ ಫೆಡರರ್ ದಾಖಲೆಯನ್ನು ಸರಿದೂಗಿಸಿದ್ದಾರೆ. ವನಿತಾ ವಿಭಾಗದಲ್ಲಿ ಸೆರೆನಾ ವಿಲಿಯಮ್ಸ್ ಕೂಡ 46 ಸೆಮಿಫೈನಲ್ ಆಡಿದ ದಾಖಲೆ ಹೊಂದಿರುವುದು ಉಲ್ಲೇಖನೀಯ.
ಮಂಗಳವಾರ ತಡರಾತ್ರಿ ನಡೆದ ವಿಂಬಲ್ಡನ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜೊಕೋವಿಕ್ ರಷ್ಯಾದ ಆ್ಯಂಡ್ರೆ ರುಬ್ಲೇವ್ ಅವರನ್ನು 4-6, 6-1, 6-4, 6-3 ಅಂತರದಿಂದ ಮಣಿಸಿದರು. ಮೊದಲ ಸೆಟ್ ಕಳೆದುಕೊಂಡ ಜೊಕೊ, ಅನಂತರದ ತಿರುಗಿ ಬಿದ್ದರು.
ಜೊಕೋವಿಕ್ ಅವರ ಸೆಮಿಫೈನಲ್ ಎದುರಾಳಿ ಇಟಲಿಯ ಜಾನಿಕ್ ಸಿನ್ನರ್. ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು ರಷ್ಯಾದ ಮತ್ತೋರ್ವ ಆಟಗಾರ ರೊಮಾನ್ ಸಫಿಯುಲಿನ್ ವಿರುದ್ಧ 6-4, 3-6, 6-2, 6-2 ಅಂತರದ ಗೆಲುವು ಸಾಧಿಸಿದರು. ಗ್ರ್ಯಾನ್‌ಸ್ಲಾಮ್‌ನಲ್ಲಿ ಎಂದೂ ಕ್ವಾರ್ಟರ್ ಫೈನಲ್ ಗಡಿ ದಾಟದ ಜಾನಿಕ್ ಸಿನ್ನರ್, ಮೊದಲ ಸಲ ಸೆಮಿಫೈನಲ್‌ನಲ್ಲಿ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ.
ಸೆಮಿಫೈನಲ್‌ಗೆ ಜೆಬೌರ್, ಸಬಲೆಂಕಾ
ಇನ್ನು ಮಹಿಳೆಯರ ಸಿಂಗಲ್ಸ್‌ನಲ್ಲಿ ಟುನೇಶಿಯಾದ ಜೆಬೌರ್ ಮತ್ತು ಸಬಲೆಂಕಾ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಜೆಬೌರ್ ಅವರು ರೈಬಕಿನಾ ಅವರನ್ನು 6-7, 6-4, 6-4 ಸೆಟ್‌ಗಳ ಅಂತರದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು. ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದರೂ, ನಂತರದ ಸೆಟ್‌ಗಳನ್ನು ಆರಾಮಾಗಿ ಗೆದ್ದರು.
ಮತ್ತೂಂದು ಮ್ಯಾಚ್‌ನಲ್ಲಿ ಸಬಲೆಂಕಾ ಅವರು, ಮ್ಯಾಡಿಸನ್ ಕೀಸ್ ಅವರನ್ನು 6-2, 6-4 ಸೆಟ್‌ಗಳ ಅಂತರದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು. ನೇರ ಸೆಟ್‌ಗಳ ಮೂಲಕ ನಿರಾಯಾಸವಾಗಿ ಸೋಲುಣಿಸಿದರು.
ಗುರುವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಜೆಬೌರ್, ಸಬಲೆಂಕಾ ಅವರನ್ನು ಎದುರಿಸಿದರೆ, ಇನ್ನೊಂದು ಪಂದ್ಯದಲ್ಲಿ ಸ್ವಿಟೋಲಿನಾ ಅವರು ವೋಂಡ್ರೋಸೋವಾ ಅವರ ವಿರುದ್ಧ ಸೆಣೆಸಲಿದ್ದಾರೆ.