Advertisement
ಸಣ್ಣ ಜಿಲ್ಲೆಗಳು ಆಡಳಿತ ಹಾಗೂ ಅಭಿವೃದ್ಧಿಗೂ ಪೂರಕ ಎಂಬ ಆಲೋಚನೆಯಲ್ಲೇ 1984ರಲ್ಲಿ ನ್ಯಾಯವಾದಿ ಟಿ.ಎಂ. ಹುಂಡೇಕರ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಪುನರ್ ವಿಂಗಡಣೆ ಸಮಿತಿಯನ್ನು ನೇಮಿಸಿತು. ಸಮಿತಿಯು 1986ರಲ್ಲಿ ವರದಿ ನೀಡಿ ದ್ದರೂ ಜಾರಿಗೆ ಬಂದದ್ದು 11 ವರ್ಷಗಳ ಬಳಿಕ. 1997ರ ಆಗಸ್ಟ್ 25ರಂದು ಉಡುಪಿ ಸಹಿತ ಹೊಸ 7 ಜಿಲ್ಲೆಗಳನ್ನು ಆಗಿನ ಮುಖ್ಯಮಂತ್ರಿ ಜೆ.ಎಚ್. ಪಟೇಲರು ಘೋಷಿಸಿದರು. ಇಂದು (ಆ. 25) ಉಡುಪಿ ಜಿಲ್ಲೆಗೆ 25 ವರ್ಷ. ರಜತ ಕ್ಷಣಗಳಿಂದ ಸುವರ್ಣ ಕಾಲಕ್ಕೆ ಅಭಿವೃದ್ಧಿಯ ಮುನ್ನುಡಿ ಬರೆಯಲೂ ಇದು ಸಕಾಲ.
Related Articles
Advertisement
ಒಂದು ನಗರ, ಜಿಲ್ಲೆಗೆ ಬೇಕಾದ ಪ್ರಾಥಮಿಕ ಸೌಕರ್ಯ ಒಳಚರಂಡಿ ಯೋಜನೆ ಇನ್ನೂ ಶೈಶವಾ ವಸ್ಥೆ ಯಲ್ಲಿದೆ. ಪ್ರವಾಸೋದ್ಯಮದ ಮೂಲ ನೆಲೆಗಳಾದ ನದಿ, ಸಾಗರ, ಪರಿಸರದ ಸುಸ್ಥಿರತೆಯ ಮೌಲ್ಯವನ್ನು ಅರಿತಿಲ್ಲ, ಸ್ಥಳೀಯ ಆರ್ಥಿಕತೆಯ ಬೇರನ್ನು ಗಟ್ಟಿಗೊಳಿಸಲು ವಿಶೇಷ ಆಸಕ್ತಿ ಕಂಡು ಬರುತ್ತಿಲ್ಲ, ಪ್ರವಾ ಸೋದ್ಯಮ, ಉದ್ಯಮಕ್ಕೆ ಪೂರಕ ವಾದ ವಿಮಾನ ನಿಲ್ದಾಣ ಇನ್ನೂ ಈಡೇರ ಬೇಕಾದ ಬೇಡಿಕೆಯ ಪಟ್ಟಿಯಲ್ಲಿದೆ. ಘನ ತ್ಯಾಜ್ಯವನ್ನೂ ಆದಾ ಯವನ್ನಾಗಿಸಿಕೊಳ್ಳುವ ಸಮರ್ಪಕ ವಿಲೇವಾರಿ ವಿಧಾನಕ್ಕೆ ಮುಂದಾಗಿಲ್ಲ. 1980ರಲ್ಲಿ ಶಂಕು ಸ್ಥಾಪನೆ ಗೊಂಡ ವಾರಾಹಿ ಕುಡಿಯುವ ನೀರಿನ ಯೋಜನೆ ಇನ್ನೂ ಪೂರ್ಣಗೊಳ್ಳುವ ಲೆಕ್ಕಾಚಾರದಲ್ಲೇ ಇದೆ.
ವ್ಯವಸ್ಥೆಯ ಶುದ್ಧೀಕರಣದಲ್ಲೂ ಬಹಳ ದೂರ ಸಾಗಬೇಕಿದೆ. ಸರಕಾರಿ ಕಚೇರಿಗಳ ಕಾರ್ಯ ವಿಳಂಬ, ಭ್ರಷ್ಟಾಚಾರದ ಬಗ್ಗೆ ಜನರ ಆಕ್ರೋಶ ಹೆಚ್ಚುತ್ತಿದೆ. ಕೆಲವು ಭ್ರಷ್ಟರು ಕರಾವಳಿ ಭಾಗವನ್ನು “ತಕರಾರಿಲ್ಲದ ವಲಯ’ ಹಾಗೂ ಸುರಕ್ಷಿತ ಪ್ರದೇಶ ಎಂದು ಭಾವಿಸಿದ್ದಾರೆ. ಈ ಸ್ಥಿತಿಗೆ ನಾಗರಿಕರು ಹಾಗೂ ಜನ ಪ್ರತಿನಿಧಿಗಳು ಕಾರಣರು. ಜನರು ದಕ್ಷ ಸೇವೆಗೆ ಪಟ್ಟು ಹಿಡಿಯಬೇಕು. ಜನಪ್ರತಿನಿಧಿಗಳು ಅದನ್ನು ನೀಡಲು ಅಧಿಕಾರಶಾಹಿಯನ್ನು ಹುರಿಗೊಳಿಸಬೇಕು.
ಇನ್ನೇನಿದ್ದರೂ ನಮ್ಮ ಪಯಣ ಸುವರ್ಣಯುಗದ ಕಡೆಗೆ. ಇಲ್ಲಿ ಇಂಧನವೇ ಇಚ್ಛಾಶಕ್ತಿ. ಹಾಗಾಗಿ ಜಿಲ್ಲೆ ಯನ್ನು ಎಲ್ಲ ಪರಿಸ್ಥಿತಿಗೆ ಸಜ್ಜುಗೊಳಿಸಿ ಅಭಿವೃದ್ಧಿ ಸಾಧಿಸುವುದೇ ಗುರುತರ ಸವಾಲು. ಜಿಲ್ಲೆಯ ಪಟ್ಟಣ ಗಳೆಲ್ಲ ನಗರಗಳಾಗುತ್ತಿವೆ. ಅವು ಕೊಂಪೆಗಳಾಗದಂತೆ ಸೂಕ್ತ ಯೋಜನೆಗಳನ್ನು ರೂಪಿಸಬೇಕು. ಜಿಲ್ಲೆಯಲ್ಲಿ ಸಂಪನ್ಮೂಲಗಳಿಗೆ ಕೊರತೆಯಿಲ್ಲ. ಅವುಗಳ ಮೌಲ್ಯವನ್ನು ಅರಿತು ಸದ್ಬಳಕೆಗೆ ಅಣಿ ಯಾಗುವ ದೃಷ್ಟಿ ಮತ್ತು ನಾಯಕತ್ವ ಬೇಕು. ಆಡಳಿತ ಗಾರರ ಕ್ರಿಯಾಶಕ್ತಿ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಪ್ರಗತಿಯ ದಿಸೆಯನ್ನು ನಿರ್ಧರಿಸುತ್ತದೆ. ಪ್ರತಿ ನಾಗರಿಕನ ಸಕ್ರಿಯ ಪಾಲ್ಗೊಳ್ಳುವಿಕೆ ಪ್ರಗತಿಯ ಪರಿಣಾಮವನ್ನು ನಿರ್ಧರಿಸಬಲ್ಲದು. ಹಾಗಾಗಿ ಜಿಲ್ಲೆಯ ಭವಿತವ್ಯದ ಪಯಣದಲ್ಲಿ ನಾಗರಿಕರು ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ಸಾಗುವುದು ತುರ್ತು ಅಗತ್ಯ. ಅದು ಪ್ರಾಮಾಣಿಕವಾಗಿ ಸಾಧ್ಯವಾದರೆ ಅಭಿವೃದ್ಧಿಯ ಪುಟಗಳಲ್ಲಿ ಹೊಸ ಸಾಧ್ಯತೆಗಳನ್ನು ಸಾಧಿಸುವ ಮೂಲಕ ದೇಶಕ್ಕೆ ಮಾದರಿಯಾಗುವ ಅವಕಾಶ ಉಡುಪಿ ಜಿಲ್ಲೆಗಿದೆ. ನಮ್ಮೆಲ್ಲರ ಆ ನಿರೀಕ್ಷೆ ಈಡೇರಲಿ.– ಸಂಪಾದಕ