Advertisement

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

04:50 PM Dec 28, 2024 | Team Udayavani |

ಕ್ಯಾಲೆಂಡರನ್ನು ಬದಲಾಯಿಸುವ ಸಮಯವಿದು. ಚಳಿಗೆ ಮುದುಡುವ ಹೊತ್ತಿಗೆ ಹೊಸವರ್ಷವೆಂದು ಸಂಭ್ರಮಿಸುವ ಸಮಯ. ಹೊಸವರ್ಷದ ಕಾಲಕ್ಕೆ ವರ್ಷ, ಭರವಸೆ, ಆಶೋತ್ತರಗಳು ಮತ್ತು ಕ್ಯಾಲೆಂಡರ್‌ ಎಲ್ಲವೂ ಹೊಸತು. ಇವೆಲ್ಲವೂ ಕ್ಯಾಲೆಂಡರಿನಿಂದಲೇ ಮುನ್ನುಡಿಯಾಗುವುದು.

Advertisement

ವರ್ಷ ಅಂತ್ಯವಾಗುತ್ತಿದ್ದಂತೆ, ಕ್ಯಾಲೆಂಡರ್‌ ಜತೆಗೆ ಮನಸ್ಸಿನಲ್ಲಿ ಮೂಡುವ ಮತ್ತೂಂದು ನೆನಪು ಎಂದರೆ ಹೊಸ ವರ್ಷದ ಡೈರಿ. ಒಂದು ಕಾಲದಲ್ಲಿ ಕ್ಯಾಲೆಂಡರ್‌ ಮತ್ತು ಡೈರಿಗಳೆರಡೂ ಪ್ರತಿ ಮನೆಯಲ್ಲೂ ವಿಶೇಷ ಸ್ಥಾನವನ್ನು ಹೊಂದಿದ್ದವು. ಹಳ್ಳಿ ಹಳ್ಳಿಗಳಲ್ಲಿ ಪ್ರಮುಖ ಅಂಗಡಿ ಮಾಲಕರು ಅಥವಾ ಸ್ಥಳೀಯ ವ್ಯವಹಾರಸ್ಥರು ತಮ್ಮ ಅಂಗಡಿ ಅಥವಾ ವ್ಯವಹಾರದ ಹೆಸರಿನ ಕ್ಯಾಲೆಂಡರ್‌ ಮತ್ತು ಡೈರಿಗಳನ್ನು ಮುದ್ರಿಸಿ ಗ್ರಾಹಕರಿಗೆ ವಿತರಿಸುತ್ತಿದ್ದರು. ಈ ಕ್ಯಾಲೆಂಡರ್‌ಗಳು ಜಾಹೀರಾತು ಸಾಧನವಾಗಿಯೂ ಮತ್ತು ದೈನಂದಿನ ಬಳಕೆಗೆ ಸಹಾಯಕವಾಗಿಯೂ ಇರುತ್ತಿದ್ದವು. ಹೊಸವರ್ಷದ ಹೊಸ್ತಿಲಿನಲ್ಲಿ ವಿಶ್ವಾಸಾರ್ಹತೆಯನ್ನು ಮುಂದುವರೆಸುವ ಪರಿ ಇದು ಎನ್ನಬಹುದು. ಈಗಲೂ ಸಹ, ಊರಿನ ಮನೆಗಳಿಗೆ ಸ್ಥಳೀಯ ಅಂಗಡಿಗಳಿಂದ ಮುದ್ರಿತ ಕ್ಯಾಲೆಂಡರ್‌ಗಳನ್ನು ತಂದು ನೇತು ಹಾಕಲಾಗುತ್ತದೆ.

ಈ ಕ್ಯಾಲೆಂಡರ್‌ಗಳಲ್ಲಿ ಸ್ಥಳೀಯ ಹಬ್ಬಗಳು ಮತ್ತು ಪ್ರಮುಖ ಘಟನೆಗಳ ದಿನಾಂಕಗಳನ್ನು ನಮೂದಿಸಿರುವುದು ಮತ್ತೂಂದು ಉಪಯೋಗ. ವರ್ಷ ಪೂರ್ತಿ ಮನೆಯ ಗೋಡೆಯಲ್ಲಿ ಕ್ಯಾಲೆಂಡರ್‌ ಇರುವಿಕೆಯನ್ನು ಕಂಡು, ಆ ಸ್ಥಳವನ್ನು ಅದಿಲ್ಲದೇ ಕಲ್ಪಿಸುವುದು ಸ್ವಲ್ಪ ಕಷ್ಟವೇ ಸರಿ! ಮನಸ್ಸು ಅದಕ್ಕೆ ಹೊಂದಿಕೊಳ್ಳುತ್ತದೆ, ಅಲ್ಲವೇ?

ಈಗ ಚಾಲ್ತಿಯಲ್ಲಿರುವ ತೂಗು ಕ್ಯಾಲೆಂಡರ್‌ಗಳ ಇತಿಹಾಸವು ಬಹಳ ಆಕರ್ಷಕವಿದೆ. ಅದರ ಅನ್ವೇಷಣೆಯ ಪ್ರಯಾಣವೂ ದೀರ್ಘ‌ವಾದುದು. ಆರಂಭಿಕವಾಗಿ ಕಂಡುಕೊಂಡ ಕ್ಯಾಲೆಂಡರ್‌ಗಳು ಚಂದ್ರನನ್ನು ಆಧರಿಸಿದ್ದವು. ಅವು ಸಮಯವನ್ನು ಪತ್ತೆಹಚ್ಚಲು ನಿರ್ಣಾಯಕವಾಗಿದ್ದವು. ಆದರೆ ಋತುಗಳೊಂದಿಗೆ ಹೊಂದಿಸಲು ಅವು ಕಡಿಮೆ ಪರಿಣಾಮಕಾರಿಯಾಗಿದ್ದವು. ನಾಗರಿಕತೆಗಳು ಹೆಚ್ಚು ಕೃಷಿ ಆಧಾರಿತವಾದಂತೆ, ಸೂರ್ಯನ ಆಧಾರಿತ ಮತ್ತು ಸೌರ ವರ್ಷವನ್ನು ಉತ್ತಮವಾಗಿ ಪ್ರತಿಬಿಂಬಿಸುವ ಕ್ಯಾಲೆಂಡರ್‌ಗಳ ಅಗತ್ಯವು ಉದ್ಭವಿಸಿತು. ಅದಕ್ಕಾಗಿ ಈಜಿಪ್ಟಿನವರು, ಬ್ಯಾಬಿಲೋನಿಯವರು ಮತ್ತು ಮಾಯನ್ನರಂತಹ ಪ್ರಾಚೀನ ನಾಗರಿಕತೆಗಳು ಸಂಕೀರ್ಣ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದವು. ಅನಂತರ, ಕ್ಯಾಲೆಂಡರಿನ ಇತಿಹಾಸವು ಧಾರ್ಮಿಕ ನಂಬಿಕೆಗಳು ಮತ್ತು ಖಗೋಳ ವಿಶ್ಲೇಷಣೆಗಳೊಂದಿಗೆ ಬೆರೆತು ಬೆಳೆದುಕೊಂಡು ಹೋಯಿತು.

Advertisement

ಒಂದು ಕಾಲದಲ್ಲಿ ಜೂಲಿಯಸ್‌ ಸೀಸರ್‌ ಪರಿಚಯಿಸಿದ ಜೂಲಿಯನ್‌ ಕ್ಯಾಲೆಂಡರ್‌ ಒಂದು ಪ್ರಮುಖ ಮೈಲಿಗಲ್ಲು ಎಂದೆನೆಸಿಕೊಂಡಿತ್ತು. ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ಅಧಿಕ ವರ್ಷದೊಂದಿಗೆ ಈ 365-ದಿನಗಳ ಕ್ಯಾಲೆಂಡರ್‌ ನಿಖರತೆಯನ್ನು ಸುಧಾರಿಸಿತು. ಆದರೆ ಅದು ಇನ್ನೂ ನ್ಯೂನತೆಗಳನ್ನು ಹೊಂದಿತ್ತು. 16ನೇ ಶತಮಾನದಲ್ಲಿ ಪರಿಚಯಿಸಲಾದ ಗ್ರೆಗೋರಿಯನ್‌ ಕ್ಯಾಲೆಂಡರ್‌ ಈ ನ್ಯೂನತೆಗಳನ್ನು ಸರಿಪಡಿಸಿತು ಮತ್ತು ಇಂದು ನಾವು ಬಳಸುವ ಮಾದರಿಯನ್ನು ರಚಿಸಿತು.

ಆದ್ದರಿಂದ, ಕ್ಯಾಲೆಂಡರ್‌ಗಳು ಕೇವಲ ದಿನದರ್ಶಿಗಳಾಗದೇ ಕೃಷಿ, ಧರ್ಮ ಮತ್ತು ವೈಜ್ಞಾನಿಕ ಪ್ರಗತಿಯ ಅಗತ್ಯಗಳಿಂದ ಪ್ರೇರಿತವಾದ ಸಮಯವನ್ನು ಅರ್ಥಮಾಡಿಕೊಳ್ಳಲು ಮಾನವಕುಲದ ನಿರಂತರ ಅನ್ವೇಷಣೆಯನ್ನು ಪ್ರತಿನಿಧಿಸುತ್ತವೆ.
ಆದರೆ ಈಗ, ಕ್ಯಾಲೆಂಡರ್‌ಗಳು ಗಮನಾರ್ಹವಾಗಿ ವಿಕಸಿತವಾಗಿವೆ. ನಾವು ಬಳಸುವ ಕ್ಯಾಲೆಂಡರಿನಲ್ಲಿ ಅದೆಷ್ಟೋ ವಿಧಗಳಿವೆ: ಗೋಡೆಯ ಮೇಲೆ ತೂಗು ಹಾಕುವ, ಮೇಜಿನ ಮೇಲೆ ಇಡುವ, ಪ್ಯಾಕೆಟ್‌ ಡೈರಿಯಂತಿರುವ, ಕಿಸೆಯಲ್ಲಿ ಇಟ್ಟುಕೊಳ್ಳಬಹುದಾದ, ಹಾಳೆಯಂತೆ ಕಾಣಬಹುದಾದ ವಿವಿಧ ರೂಪಗಳು. ಇತ್ತೀಚಿನ ದಿನಗಳಲ್ಲಿ, ಪ್ರತಿ ಪುಟದಲ್ಲಿ ಕುಟುಂಬದ ಸದಸ್ಯರ ಅಥವಾ ಪ್ರೀತಿಪಾತ್ರರ ಛಾಯಾಚಿತ್ರಗಳನ್ನು ಹೊಂದಿರುವ ಟೇಬಲ್‌ ಕ್ಯಾಲೆಂಡರ್‌ಗಳು ಜನಪ್ರಿಯತೆಯನ್ನು ಗಳಿಸುತ್ತಿವೆ. ಈ ಕ್ಯಾಲೆಂಡರ್‌ಗಳು ದಿನಾಂಕಗಳನ್ನು ನೋಡುವುದಕ್ಕಿಂತ ಹೆಚ್ಚಾಗಿ ಮೇಜುಗಳನ್ನು ಅಲಂಕರಿಸುವಲ್ಲಿ ಕಾರ್ಯನಿರ್ವಹಿಸುತ್ತಿವೆ.

ಇಂದು ತಂತ್ರಜ್ಞಾನದ ಅಭಿವೃದ್ಧಿಯಿಂದ ಭೌತಿಕ ಕ್ಯಾಲೆಂಡರ್‌ಗಳು ಮತ್ತು ಡೈರಿಗಳ ಬಳಕೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಲ್ಯಾಪ್‌ಟಾಪ್‌ಗಳು ಮತ್ತು ಮೊಬೈಲ್‌ ಸಾಧನಗಳ ಪ್ರಗತಿಯನ್ನು ಗಮನಿಸಿ! ಇಂದು ನಾವು ಸ್ಮಾರ್ಟ್‌ ಕ್ಯಾಲೆಂಡರ್‌ಗಳನ್ನು ಬಳಸುತ್ತೇವೆ. ಅವುಗಳಲ್ಲಿ ಅಷ್ಟು ಸುಲಭವಾಗಿ ನಾವು ನಮ್ಮ ದೈನಂದಿನ ಟಿಪ್ಪಣಿಗಳನ್ನು ಬರೆದು, ರಿಮೈಂಡರ್‌ಗಳನ್ನು ಸೆಟ್‌ ಮಾಡಬಹುದು! ಕಾಗದದ ಕ್ಯಾಲೆಂಡರ್‌ಗಳು ಮತ್ತು ಡೈರಿಗಳ ಅವಶ್ಯಕತೆ ಇನ್ನೇನು ಉಳಿದಿದೆ? ಈ ಡಿಜಿಟಲ್‌ ತಂತ್ರಜ್ಞಾನಗಳು ನಿಸ್ಸಂದೇಹವಾಗಿ ನಮ್ಮ ಜೀವನವನ್ನು ಸುಲಭಗೊಳಿಸಿದ್ದರೂ, ನಾವು ತಿಳಿಯದೆ ಡೈರಿ ಬರೆಯುವ ಕಲೆಯನ್ನು, ದಿನಾಂಕಗಳನ್ನು ನೆನಪಿಟ್ಟುಕೊಳ್ಳುವ ನಮ್ಮ ಸಾಮರ್ಥ್ಯವನ್ನು ಮತ್ತು ದಿನಾಂಕದ ಗೊಂದಲಗಳ ಮೋಜನ್ನು ಸಹ ಕಳೆದುಕೊಂಡಿಲ್ಲವೇ?

ವರ್ಷವು ಕೊನೆಗೊಳ್ಳುತ್ತಿದ್ದಂತೆ, ವಿಶೇಷವಾಗಿ ಕ್ರಿಸ್ಮಸ್‌ ಈವ್‌ನಿಂದ ಹೊಸ ವರ್ಷದವರೆಗೆ ವಾತಾವರಣವು ವಿಶಿಷ್ಟವಾದ ಮೋಡಿಯನ್ನು ಪಡೆಯುತ್ತದೆ. ಭಾರತದಲ್ಲೂ ಸರಿಸುಮಾರು ಇದೇ ಪರಂಪರೆ ಇದೆ. ಚಳಿಗಾಲದ ಶೀತವು ಪ್ರಾರಂಭವಾಗುತ್ತದೆ, ಕಡಿಮೆ ಹಗಲು ಮತ್ತು ದೀರ್ಘ‌ ರಾತ್ರಿಯ ದಿನಗಳು ತಂಪಾದ ವಾತಾವರಣವನ್ನು ಸೃಷ್ಟಿಸುತ್ತವೆ. ಜನರು ವಿರಾಮವನ್ನು ಆನಂದಿಸಲು ಸಿದ್ಧರಾಗುವುದರಿಂದ ಬೀದಿಗಳು ಗಿಜಿಗುಡುತ್ತವೆ. ಈ ಅವಧಿಯಲ್ಲಿ ಒಂದೆಡೆ ರಜಾದಿನಗಳನ್ನು ಯೋಜಿಸುವವರು, ಕುಟುಂಬದೊಂದಿಗೆ ಇರಲು, ಪ್ರಯಾಣಿಸಲು ಅಥವಾ ಹಬ್ಬದ ಉತ್ಸಾಹವನ್ನು ಆನಂದಿಸುವವರಿದ್ದರೆ, ಮತ್ತೊಂದೆಡೆ, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಅರೆಕಾಲಿಕ ಕೆಲಸಗಾರರು, ಸ್ವಲ್ಪ ಹೆಚ್ಚುವರಿ ಹಣವನ್ನು ಸಂಪಾದಿಸಲು ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡುತ್ತಾರೆ, ರಜಾದಿನದ ವೇತನ ಮತ್ತು ಬೋನಸ್‌ಗಳಿಂದ ಪ್ರಯೋಜನ ಪಡೆಯುತ್ತಾರೆ.

ಈ ಅವಧಿಯಲ್ಲಿ ಅಂಗಡಿಗಳೆಲ್ಲವೂ ರಿಯಾಯಿತಿಗಳು, ಕ್ರಿಸ್ಮಸ್‌ ಮತ್ತು ಹೊಸ ವರ್ಷದ ಮಾರಾಟ ಮತ್ತು ಕ್ಲಿಯರೆನ್ಸ್‌ ಕೊಡುಗೆಗಳನ್ನು ನೀಡುವ ಡೀಲ್‌ಗ‌ಳಿಂದ ತುಂಬಿರುತ್ತವೆ. ಬಟ್ಟೆಗಳಿಂದ ಹಿಡಿದು ಆಹಾರ ಮತ್ತು ಪಾನೀಯಗಳವರೆಗೆ ಎಲ್ಲದರ ಬೆಲೆಗಳು ಇಳೆಕೆಯಾಗುವುದರಿಂದ ಶಾಪಿಂಗ್‌ ಮಾಡಲು ಇದು ಉತ್ತಮ ಸಮಯ ಎನ್ನಬಹುದು.

ಅಲಂಕಾರಗಳು ಬೀದಿಗಳನ್ನು ಬೆಳಗಿಸುವುದರಿಂದ ಮತ್ತು ಹಬ್ಬದ ಸಂಗೀತವು ಗಾಳಿಯನ್ನು ತುಂಬುವುದರಿಂದ ಹೆಚ್ಚಿನ ಯುರೋಪಿಯನ್‌ ಪಟ್ಟಣಗಳೆಲ್ಲವೂ ಈ ಅವಧಿಯಲ್ಲಿ ಉತ್ಸಾಹದಿಂದ ಜೀವಂತವಾಗಿರುತ್ತವೆ. ರಾತ್ರಿಯ ಸಮಯ ವಿಶೇಷವಾಗಿ ಉತ್ಸಾಹಭರಿತವಾಗಿರುತ್ತದೆ.

ಕ್ರಿಸ್ಮಸ್‌ ಮತ್ತು ಹೊಸವರುಷವು ಒಂದು ರೀತಿಯ ಸಂಧಿಕಾಲವೇ. ಅವು ಸ್ವಲ್ಪ ಹೆಚ್ಚಿನ ವಿಶ್ರಾಂತಿಗೆ ಒಳಪಡಿಸುವ ಕಾಲ. ನಮ್ಮ ಮನಸ್ಸು ಮತ್ತು ದೇಹವನ್ನು ಪುನರುಜ್ಜೀವನಗೊಳಿಸಲು ರಜಾದಿನಗಳು, ವಿರಾಮಗಳು ಅತ್ಯಗತ್ಯ. ವರ್ಷವಿಡೀ ಕಷ್ಟಪಟ್ಟು ಕೆಲಸ ಮಾಡಿದ ಅನಂತರ, ನಮ್ಮೊಂದಿಗೆ ಮತ್ತು ನಮ್ಮ ಕುಟುಂಬಗಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಮುಖ್ಯ. ಈ ವರ್ಷವು ಮುಗಿಯುತ್ತಿದಂತೆ, ಕಲಿತ ಪಾಠಗಳನ್ನು ನೆನೆಯೋಣ, ತಪ್ಪುಗಳನ್ನು ಸರಿಪಡಿಸೋಣ ಮತ್ತು ಹೊಸ ಶಕ್ತಿ, ಸಂತೋಷದೊಂದಿಗೆ ಹೊಸ ವರ್ಷವನ್ನು ಭರವಸೆಯಿಂದ ಸ್ವಾಗತಿಸೋಣ. ಎಲ್ಲರೂ ಹೊಸವರ್ಷಕ್ಕೆ ಚೈತನ್ಯಶೀಲರಾಗಲಿ.

*ವಿಟ್ಲ ತನುಜ್‌ ಶೆಣೈ, ಚೆಲ್ಟೆನ್ಹಾಮ್‌

Advertisement

Udayavani is now on Telegram. Click here to join our channel and stay updated with the latest news.

Next