ಮಾನವ ಇನ್ನೂ ಪ್ರಕೃತಿಯಿಂದ ಪಾಠ ಕಲಿತಂತೆ ಕಾಣುತ್ತಿಲ್ಲ. ಮಾನವನ ಹುಟ್ಟು, ಸಾವು, ಬದುಕು, ಸಾಧನೆ ಎಲ್ಲವೂ ಪ್ರಕೃತಿಯ ಪರಿಸರ ಮತ್ತು ಮಾನವ ನಿರ್ಮಿತ ಪರಿಸರದ ಮಧ್ಯೆ ಹಾದು ಹೋಗುತ್ತದೆ. ಪರಿಸರವೇ ನಮ್ಮ ಬದುಕು. ಪರಿಸರದಿಂದಲೇ ಮತ್ತು ಪರಿಸರಕ್ಕಾಗಿ ನಮ್ಮ ಬದುಕು. ಪ್ರಾಕೃತಿಕ ಸಂಪನ್ಮೂಲಗಳಾದ ಅರಣ್ಯ, ನೆಲ, ಜಲ, ವಾಯು ಸೃಷ್ಟಿಯ ನಿಜರೂಪಗಳು. ಪ್ರಕೃತಿ ಇದ್ದರೆ ನಾವು . ಅದನ್ನೆದುರಿಸಿ ಬದುಕಲು ಪ್ರಯತ್ನಿಸಿದರೆ ಪ್ರಕೃತಿ ವಿಕೋಪಗೊಳ್ಳುವುದರಲ್ಲಿ ಎರಡು ಮಾತಿಲ್ಲ. ಪ್ರಕೃತಿ ನಮಗೆದುರಾದರೆ ಅದು ಮನುಕುಲಕ್ಕೆ ಶಾಪವಾಗಿ ಪರಿಗಣಿಸುತ್ತದೆ. ದುರದೃಷ್ಟವೆಂದರೆ ಇದು ತಿಳಿದು ಮಾನವನು ಎಸಗುತ್ತಿರುವ ದುಷ್ಕೃತ್ಯಗಳಿಂದ ಪ್ರಕೃತಿ ತನ್ನ ಸಮತೋಲನವನ್ನು ಕಾಪಾಡುವುದರಲ್ಲಿ ವಿಫಲವಾಗಿ ಪ್ರಕೋಪಗಳಿಗೆ ಕಾರಣವಾಗಿದೆ. ಮರ, ಗಿಡ, ನೆಲ, ಜಲ ಮತ್ತು ವಾತಾವರಣದ ಮೇಲೆ ಮಾಡಿದ ದಾಳಿ ಬಿರುಗಾಳಿ, ಚಂಡಮಾರುತ, ಅತಿವೃಷ್ಟಿ, ಅನಾವೃಷ್ಟಿಗಳೆಲ್ಲವನ್ನು ಎದುರಿಸುವಂತೆ ಮಾಡಿದೆ. ಇನ್ನೊಂದೆಡೆ ಕೆರೆಕುಂಟೆ ಮತ್ತು ನದಿ ನೀರನ್ನು ಮಲೀನಗೊಳಿಸುತ್ತಿದ್ದಾನೆ. ಈ ದುಷ್ಕೃತ್ಯಗಳಿಗೆ ಮಾನವನು ದುಬಾರಿ ಬೆಲೆ ತೆರುತ್ತಿದ್ದಾನೆ ಹಾಗೂ ವಿನಾಶದ ಅಂಚಿಗೂ ತಲುಪುವುದರಲ್ಲಿದ್ದಾನೆ. ಇತ್ತೀಚಿನ ದಿನಗಳಲ್ಲಿ ನಾವು ರಾಜಕೀಯ ವೀಕ್ಷಿಸುವುದರಲ್ಲಿ ಮಗ್ನರಾಗಿದ್ದೇವೆ. ಈ ಮಧ್ಯೆ ಪ್ರಕೃತಿ ಮತ್ತು ಪರಿಸರದ ಬಗ್ಗೆ ಸ್ವಲ್ಪ ಬೆಳಕು ಚೆಲ್ಲುವುದು ಅಗತ್ಯ.
Advertisement
ಕಾರ್ಬನ್ ಉತ್ಪತ್ತಿಯಲ್ಲಿ ವಿಶ್ವದಲ್ಲಿ ಭಾರತಕ್ಕೆ ಎರಡನೇ ಸ್ಥಾನ. ಪ್ರಪಂಚದ 20 ಅತ್ಯಂತ ಮಾಲಿನ್ಯ ನಗರಗಳಲ್ಲಿ 15 ಭಾರತಲ್ಲಿಯೇ ಇದೆ. ದೆಹಲಿಗೆ ಹನ್ನೊಂದನೇ ಸ್ಥಾನವಾದರೆ ರಾಜಧಾನಿ ಪ್ರದೇಶಕ್ಕೆ ಸೇರಿದ ಗುರುಗ್ರಾಮ, ಗಾಜಿಯಾಬಾದ್, ಫರಿದಾಬಾದ್, ನೊಯ್ಡಾ ಕ್ರಮವಾಗಿ ಮೊದಲನೆಯ, ಎರಡನೆಯ, ನಾಲ್ಕನೆಯ ಮತ್ತು ಆರನೇಯ ಸ್ಥಾನದಲ್ಲಿವೆ ಎಂಬುದು ವಿಷಾದದ ವಿಚಾರ. ರಾಜಧಾನಿಯ ಏಳು ಪ್ರದೇಶಗಳಲ್ಲಿನ ಜೀವನವೇ ಅಪಾಯ ಎಂಬಂತಿದೆ. ಪರಿಸರ ಮಾಲಿನ್ಯದಿಂದಾಗಿ ಸಾವನ್ನಪ್ಪುತ್ತಿ ರುವವರು ಭಾರತದಲ್ಲಿ ಅತ್ಯಧಿಕ. ವಾಯು ಮಾಲಿನ್ಯದ ಸಾವುಗಳಲ್ಲಿ ಭಾರತದ ಪಾಲು ಶೇ. 28ರಷ್ಟಿದೆ, ಜನರ ಜೀವಿತಾವಧಿಯ ಮೇಲೆ ಧೂಮಪಾನ, ಭಯೋತ್ಪಾದನೆ, ಏಡ್ಸ್‌ಗಿಂತ ಹೆಚ್ಚು ದುಷ್ಪರಿಣಾಮ ಪರಿಸರ ಮಾಲಿನ್ಯದಿಂದ ಉಂಟಾಗುತ್ತದೆ. ನಿಸರ್ಗ, ಪ್ರಕೃತಿ ಮತ್ತು ಕಾಲದ ಎದುರು ಮಾನವನ ಎಲ್ಲಾ ನಾಟಕಗಳು ಶೂನ್ಯ. ಅರಣ್ಯಗಳ ನಾಶದಿಂದ ನೈಸರ್ಗಿಕ ಮಳೆಯ ಬದಲು ಕೃತಕ ಮಳೆಯನ್ನು ಸೃಷ್ಟಿಸಲು ಹೊರಟಿದ್ದಾನೆ.
Related Articles
Advertisement
ಅಭಯಾರಣ್ಯಗಳ ಉಳಿವಿಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿಗಳು ವಿಶೇಷ ಕಾಳಜಿ ವಹಿಸಬೇಕು. ಮತ್ತು ಬೇಸಿಗೆಯ ಕಾಲದಲ್ಲಿ ಹೆಚ್ಚು ಜಾಗ್ರತರಾಗಬೇಕು. ಸೂಕ್ಷ್ಮ ಪ್ರದೇಶಗಳಾದ ಸಂಡೂರು ಕಾಡು, ಚಾಮುಂಡಿ ಬೆಟ್ಟದ ತಪ್ಪಲು, ನೀಲಗಿರಿ ತೋಪುಗಳ ಬಗ್ಗೆ ಜಾಗ್ರತೆ ವಹಿಸಬೇಕು. ಕಾಡುಗಳ ರಕ್ಷಣೆ ಜಲಮೂಲಗಳ ರಕ್ಷಣೆಯಿಂದ ಹವಾಮಾನ ನಿಯಂತ್ರಣ ಸಾಧ್ಯ. ಅರಣ್ಯ ಒತ್ತುವರಿ ತೆರವುಗೊಳಿಸಿ ಕಾಡು ನಾಶಕ್ಕೆ ತೆರೆ ಎಳೆಯಬೇಕು. ಹಸಿರೀಕರಣ ಯೋಜನೆ, ಅಂತರ್ಜಲ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು.
ನೆಲ, ಜಲ, ಕಾಡು, ಖನಿಜ ಸಂಪತ್ತು ನಾಶಗೊಳಿಸಬಾರದು. ಇವುಗಳಿಗೆಲ್ಲ ವಿವಿಧ ಯೋಜನೆಗಳಿದ್ದರೂ ಕೇವಲ ಆದೇಶ, ಅಪ್ಪಣೆ, ನಿಯಮಕ್ಕೆ ಸೀಮಿತವಾಗಿರುವುದು ದುರಂತ. ಸ್ಯಾಟಲೈಟ್, ಡ್ರೋನ್, ರೊಬೋಟ್‌ಗಳಂಥ ತಂತ್ರಜ್ಞಾನಗಳನ್ನು ಉಪಯೋಗಿಸಿ ಕಾಡ್ಗಿಚ್ಚನ್ನು ನಂದಿಸಲು ಯಾವತ್ತೂ ಸಜ್ಜಾಗಿರಬೇಕು.
ಇದೀಗ ನಮ್ಮ ರಾಜಕೀಯ ಚಟುವಟಿಕೆಗಳ ಭರಾಟೆಯಲ್ಲಿ ದೇಶದ ಶೇ. 50ರಷ್ಟು ಪ್ರದೇಶ ತೀವ್ರ ಬರಪರಿಸ್ಥಿತಿಯನ್ನು ಎದುರಿಸುವ ಮುನ್ನೆಚ್ಚರಿಕೆಯನ್ನು ಮರೆತಂತೆ ಕಾಣುತ್ತದೆ. ಗಂಭೀರ ಬರಗಾಲದ ಛಾಯೆ ಕವಿದು ಪ್ರಕೃತಿ ವಿಕೋಪ ಸನ್ನಿವೇಶ ಸನ್ನಿಹಿತವಾಗುತ್ತಿದೆ ಎಂಬುದು ವಿಜ್ಞಾನಿಗಳು ನೀಡಿದ ಎಚ್ಚರಿಕೆ. ಈ ಭೂಮಿಗೆ ನಮ್ಮ ಅವಶ್ಯಕತೆ ಇರುವುದಕ್ಕಿಂತಲೂ ಹೆಚ್ಚು ನಮಗೆ ಈ ಭೂಮಿ ಮತ್ತು ಪ್ರಕೃತಿಯ ಅವಶ್ಯಕತೆ ಇದೆ.
ಈ ನಿಟ್ಟಿನಲ್ಲಿ ಅರಣ್ಯ, ಸರೋವರ, ನದಿ ಮತ್ತು ವನ್ಯ ಮೃಗ ಇವುಗಳನ್ನೊಳಗೊಂಡಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು, ಸುಧಾರಣೆ ತರುವುದು ಮತ್ತು ಜೀವಿಗಳ ಬಗ್ಗೆ ಅನುಕಂಪ ತೋರುವುದರೊಂದಿಗೆ ಮಾನವ ಕುಲವನ್ನು ಅವನತಿಯಿಂದ ರಕ್ಷಿಸಬೇಕು. ನಿಸರ್ಗವನ್ನು ರಕ್ಷಿಸದಿದ್ದಲ್ಲಿ ಕಾಡೇಕೆ ಧರೆಯೇ ಹತ್ತಿ ಉರಿಯುವುದು. ಬದುಕಲೆಲ್ಲಿ ಓಡಲಿ?
– ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ