Advertisement
ವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಯಾದ ಬೆನ್ನಲ್ಲೇ ನಗರದಲ್ಲಿರುವ ಎಲ್ಲ ಅರ್ಹ ಮತದಾರರು ಮತದಾನ ಮಾಡುವಂತೆ ಪ್ರೇರೇಪಿಸಲು ಆಯೋಗ ನಾನಾ ರೀತಿಯ ಪ್ರಚಾರ ಕಾರ್ಯ ಕೈಗೊಂಡಿದೆ. ಕಾಲೇಜು, ಶಾಪಿಂಗ್ ಮಾಲ್, ವಾಣಿಜ್ಯ ಕಟ್ಟಡಗಳಲ್ಲಿ ಜಾಗೃತಿ ಅಭಿಯಾನವೂ ನಡೆದಿದೆ.
Related Articles
Advertisement
ಚುನಾವಣೆಯಲ್ಲಿ ಇವಿಎಂ ಜತೆಗೆ ವಿವಿ ಪ್ಯಾಟ್ ಬಳಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳು ಸಭೆ ನಡೆಸಿದರು. ವಿವಿ ಪ್ಯಾಟ್ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡುವ ಜತೆಗೆ ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿಯ ಅಕ್ರಮ ನಡೆಸದಂತೆಯೂ ಎಚ್ಚರಿಕೆ ನೀಡಿದರು.
ಶೇ.90 ಜಾಹೀರಾತು ಫಲಕ ತೆರವು: ಮಂಗಳವಾರ ನೀತಿ ಸಂಹಿತೆ ಜಾರಿಗೊಂಡ ಕ್ಷಣದಿಂದಲೇ ನಗರಾದ್ಯಂತ ಜಾಹೀರಾತು ಫಲಕ ತೆರವು ಕಾರ್ಯಾಚರಣೆ ತ್ವರಿತವಾಗಿ ನಡೆಯುತ್ತಿದ್ದು, ಶುಕ್ರವಾರದವರೆಗೆ ಶೇ.90ರಷ್ಟು ಫಲಕ ತೆರವುಗೊಳಿಸಲಾಗಿದೆ.
ಬಾಕಿ ಫಲಕಗಳನ್ನು ಶೀಘ್ರವೇ ತೆರವುಗೊಳಿಸಲಾಗುವುದು. ಪ್ರಮುಖವಾಗಿ ಆರ್.ಆರ್.ನಗರ, ಯಶವಂತಪುರ, ಕೆ.ಆರ್.ಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಆದ್ಯತೆ ಮೇರೆಗೆ ತೆರವು ಕಾರ್ಯಾಚರಣೆಗೆ ಮುಂದಾಗಿದ್ದೇವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥಪ್ರಸಾದ್ ತಿಳಿಸಿದರು.
ಪ್ರಕಾಶಕರ ಹೆಸರು ಕಡ್ಡಾಯ: ನಗರದಲ್ಲಿ ಜಾಹೀರಾತು ಪ್ರಿಂಟಿಂಗ್ ಹಾಗೂ ಪ್ರಕಾಶಕರೊಂದಿಗೆ ಗುರುವಾರ ಸಭೆ ನಡೆಸಿದ ಆಯುಕ್ತರು, ಇನ್ನು ಮುಂದೆ ಯಾವುದೇ ಜಾಹೀರಾತು ಮುದ್ರಣ, ಪ್ರಕಟಣೆ ಮಾಡಿದಾಗ ಜಾಹೀರಾತುಗಳ ಮೇಲೆ ಮುದ್ರಣಕಾರರು ಹಾಗೂ ಅವುಗಳನ್ನು ಅಳವಡಿಸಿದವರ ಹೆಸರನ್ನು ಕಡ್ಡಾಯವಾಗಿ ಮುದ್ರಿಸಬೇಕು ಎಂದು ಸೂಚನೆ ನೀಡಿದ್ದಾರೆ.
ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಜಾಹಿರಾತು ಮುದ್ರಣ ಮಾಡಿದರೂ ಐದು ಜಾಹೀರಾತು ಪ್ರತಿಗಳನ್ನು ಆಯುಕ್ತರಿಗೆ ಕಳುಹಿಸಬೇಕು. ಒಂದೊಮ್ಮೆ ಜಾಹೀರಾತುಗಳ ಮೇಲೆ ಮುದ್ರಕರು, ಪ್ರಕಾಶಕರ ಮಾಹಿತಿ ಪ್ರಕಟಿಸದಿದ್ದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ. ಮುದ್ರಣ ಹಾಗೂ ಪ್ರಕಾಶನ ಸಂಸ್ಥೆಗಳ 100ಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.