Advertisement

ಈ ಸಮುದಾಯ ಭವನಕ್ಕೆ ಮುಕ್ತಿ ಎಂದು?

07:31 AM Feb 15, 2019 | |

ಮುಳಬಾಗಿಲು: ಸರ್ಕಾರಗಳು ಸಮುದಾಯಗಳ ಅಭಿವೃದ್ಧಿಗಾಗಿ ಅನುದಾನ ನೀಡುವುದಿಲ್ಲ ಎಂಬುದೇ ಬಹುತೇಕರ ಪ್ರಶ್ನೆ. ಆದರೆ, ಅನುದಾನ ಬಿಡುಗಡೆಯಾಗಿ ಸುಸಜ್ಜಿತ ಕಟ್ಟಡ ನಿರ್ಮಾಣವಾದರೂ ಇನ್ನೂ ಉದ್ಘಾಟನೆಯಾಗದಿರುವುದು ಸೋಜಿಗದ ಸಂಗತಿ. 

Advertisement

ದೇವಾಲಯಗಳ ನಾಡೆಂದೇ ಹೆಸರಾದ ರಾಜ್ಯದ ಗಡಿಭಾಗದಲ್ಲಿರುವ ಮುಳಬಾಗಿಲು ತಾಲೂಕಿನಲ್ಲಿರುವ ಆವಣಿ ಕ್ಷೇತ್ರದಲ್ಲಿ ಸಮುದಾಯ ಭವನವೊಂದು ನಿರ್ಮಾಣವಾಗಿ ಹಲವು ವರ್ಷಗಳು ಕಳೆದಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದಿಗೂ ಉಪಯೋಗಕ್ಕೆ ಬಾರದಂತಾಗಿದೆ. ಅರ್ಥಾತ್‌, ಗಿಡ ಗಂಟಿಗಳು ಬೆಳೆದಿದ್ದು ಹಾವು-ಚೇಳುಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ.

ಗಡಿಭಾಗದ ಮುಳಬಾಗಿಲು ತಾಲೂಕು ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡಿದ್ದರೂ ಇತಿಹಾಸ ಸಾರುವ ನೂರಾರು ದೇವಾಲಗಳ ನಾಡಾಗಿದೆ. ಅದಕ್ಕೆ ಪೂರಕ ಸಾಕ್ಷಿ ಎಂಬಂತೆ ಮುಳಬಾಗಿಲು, ಆಂಜನೇಯಸ್ವಾಮಿ ದೇವಾಲಯ, ಕುರುಡುಮಲೆ ವಿನಾಯಕ ದೇಗುಲ, ಶ್ರೀಪಾದರಾಜಮಠ, ಸೋಮೇಶ್ವರಸ್ವಾಮಿ ದೇವಾಲಯ ಹಾಗೂ ವಿರೂಪಾಕ್ಷಿ ವಿರೂಪಾಕ್ಷೇಶ್ವರ ದೇವಾಲಯಗಳಿವೆ.

ಅವುಗಳಲ್ಲಿ ಮುಖ್ಯವಾಗಿ ರಾಮಾಯಣವನ್ನೇ ಬಿಂಬಿಸುವ ಆವಣಿ ಕ್ಷೇತ್ರದಲ್ಲಿ ಶ್ರೀರಾಮಲಿಂಗೇಶ್ವರಸ್ವಾಮಿ ದೇವಾಲಯ, ಪಂಚಲಿಂಗಗಳು ಹಾಗೂ ಸೀತಾಮಾತೆ ಬೆಟ್ಟವಿದೆ. ಬೆಟ್ಟದ ತಪ್ಪಲಿನಲ್ಲಿ ಒಂದೆಡೆ ಶೃಂಗೇರಿ ಶಾರದಾ ಮಾತೆ ಮಠ, ಮತ್ತೂಂದೆಡೆ ಅಂತರಗಂಗೆ ಹಾಗೂ ಬೆಟ್ಟದ ಮೇಲೆ ಸೀತಾಮಾತೆ ದೇಗುಲ ಒಳಗೊಂಡಿದೆ. ಅಲ್ಲದೇ, ಇಲ್ಲಿ ರಾಮಾಯಣವನ್ನು ಬಿಂಬಿಸುವ ಅನೇಕ ಕುರುಹುಗಳನ್ನು ಇಲ್ಲಿ ಕಾಣಬಹುದು.  

ಧಾರ್ಮಿಕ ಕ್ಷೇತ್ರ: ಇಂತಹ ಐತಿಹಾಸಿಕ ಪ್ರಾಧಾನ್ಯವುಳ್ಳ ಆವಣಿ ಶ್ರೀಕ್ಷೇತ್ರದಲ್ಲಿ ಸಾವಿರಾರು ಮನೆಗಳಿದ್ದು ಸುಮಾರು 2 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ನಿತ್ಯ ಇಲ್ಲಿನ ದೇಗುಲಕ್ಕೆ ನೂರಾರು ಭಕ್ತರು ಬರುತ್ತಾರೆ. ಅದರಲ್ಲೂ ಮುಖ್ಯವಾಗಿ ವರ್ಷಕ್ಕೊಮ್ಮೆ ಶಿವರಾತ್ರಿ ಹಬ್ಬದಂದು ನಡೆಯುವ ರಥೋತ್ಸವಕ್ಕೆ ಲಕ್ಷಾಂತರು ಭಕ್ತರು ಪಾಲ್ಗೊಳ್ಳುತ್ತಿರುತ್ತಾರೆ.

Advertisement

ಅದರೊಂದಿಗೆ ಬೃಹತ್‌ ದನಗಳ ಜಾತ್ರೆಯೂ ನಡೆಯುವುದರಿಂದ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಜಾನುವಾರುಗಳೊಂದಿಗೆ ಜನರೂ ಪಾಲ್ಗೊಂಡು ತಂಗುತ್ತಾರೆ. ಆದರೆ, ವಸತಿ ಸಮುಚ್ಚಯಗಳಿಲ್ಲದೇ ಬಯಲಿನಲ್ಲಿಯೇ ಟೆಂಟ್‌ಗಳನ್ನು ಹಾಕಿಕೊಂಡು ಸಮಯ ಕಳೆಯುತ್ತಾರೆ.

ಇಂತಹ ಸಂದರ್ಭದಲ್ಲಿ ಗ್ರಾಮದ ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ 2007-08ರಲ್ಲಿ ಅಂದಿನ ಪೌರಾಡಳಿತ ಸಚಿವ ಆಲಂಗೂರು ಶ್ರೀನಿವಾಸ್‌ ಅವರು ಪಂಚಾಯತ್‌ ರಾಜ್ಯ ತಾಲೂಕು ಉಪ ವಿಭಾಗದ ಮುಖಾಂತರ ಬೆಟ್ಟದ ತಪ್ಪಲಿನಲ್ಲಿ ಸುವರ್ಣ ಗ್ರಾಮೋದಯ ಯೋಜನೆಯಡಿ 11.07 ಲಕ್ಷ ರೂ.ಗಳ ವೆಚ್ಚದಲ್ಲಿ ಸಮುದಾಯ ಭವನ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಇಂದಿಗೂ ಉದ್ಘಾಟನೆಯೇ ಆಗಿಲ್ಲ.

ಗಮನಹರಿಸಿ: ಸಮುದಾಯ ಭವನ ಕಟ್ಟಡ ನಿರ್ಮಾಣಗೊಂಡು ಹಲವು ವರ್ಷಗಳೇ ಕಳೆದಿದ್ದರೂ ಇದುವರೆಗೂ ಸದರೀ ಕಟ್ಟಡ ಉದ್ಘಾಟನೆ ಮಾಡುವುದಿರಲಿ, ಕನಿಷ್ಠ ಯಾವುದೇ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇತ್ತಕಡೆ ಗಮನಹರಿಸಿಲ್ಲ. ಇದರಿಂದಾಗಿ ಸರ್ಕಾರದ ಬೊಕ್ಕಸದಿಂದ ಲಕ್ಷಾಂತರ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಸಮುದಾಯಭವನ ಗಿಡಗಂಟಿಗಳ ಆಗರವಾಗಿದೆ. ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಜನರ ಉಪಯೋಗಕ್ಕೆ ಸಮರ್ಪಿಸಬೇಕಾಗಿದೆ.

* ಎಂ.ನಾಗರಾಜಯ್ಯ

Advertisement

Udayavani is now on Telegram. Click here to join our channel and stay updated with the latest news.

Next