ಕ್ಯಾಂಡಿ: ಟೀಂ ಇಂಡಿಯಾವು ಏಷ್ಯಾ ಕಪ್ ಕೂಟದ ಎರಡನೇ ಪಂದ್ಯವನ್ನು ಸೋಮವಾರ ನೇಪಾಳ ವಿರುದ್ಧ ಆಡಲಿದೆ. ಶನಿವಾರದ ಪಾಕಿಸ್ತಾನದ ವಿರುದ್ಧದ ಪಂದ್ಯ ಮಳೆಯ ಕಾರಣದಿಂದ ರದ್ದಾದ ಕಾರಣ ಈ ಮುಖಾಮುಖಿ ಟೀಂ ಇಂಡಿಯಾದ ಪಾಲಿಗೆ ಮುಖ್ಯವಾಗಿದೆ. ಕ್ರಿಕೆಟ್ ಶಿಶು ನೇಪಾಳ ಭಾರತಕ್ಕೆ ಸುಲಭದ ತುತ್ತಾಗುವ ನಿರೀಕ್ಷೆಯಿದ್ದರೂ, ಮತ್ತೆ ವರುಣ ಅಡಚಣೆಯುಂಟು ಮಾಡುವ ಸಾಧ್ಯತೆಯಿದೆ.
ಈ ಪಂದ್ಯವು ಕೂಟದ ಮೇಲೆ ಗಮನಾರ್ಹ ಪರಿಣಾಮ ಹೊಂದಿದೆ. ಯಾಕೆಂದರೆ ಭಾರತಕ್ಕೆ ಒಂದು ಗೆಲುವು ಸೂಪರ್ ಫೋರ್ ನಲ್ಲಿ ಸ್ಥಾನವನ್ನು ಭದ್ರಪಡಿಸುತ್ತದೆ. ಆದರೆ ನೇಪಾಳ ವಿರುದ್ದ ಸೋಲನುಭವಿಸಿದರೆ ಭಾರತವು ಪಂದ್ಯಾವಳಿಯಿಂದ ಹೊರಬೀಳಲಿದೆ.
ಇದನ್ನೂ ಓದಿ:‘Jawan’ ನಮ್ಮ ಸುತ್ತ ಬದಲಾವಣೆ ಹೇಗೆ ಮಾಡಬಹುದು ಎಂಬುದರ ಪ್ರತಿಬಿಂಬ: ಶಾರುಖ್
ಭಾರತ ಮತ್ತು ನೇಪಾಳ ನಡುವಿನ ಹಣಾಹಣಿಯು ವಿಶೇಷ ಮಹತ್ವವನ್ನು ಹೊಂದಿದೆ. ಯಾಕೆಂದರೆ ಇದು ಈ ಎರಡು ತಂಡಗಳ ನಡುವಿನ ಮೊದಲ ಏಕದಿನ ಮುಖಾಮುಖಿಯಾಗಿರಲಿದೆ.
ಭಾರತ-ಪಾಕಿಸ್ತಾನ ಪಂದ್ಯದಂತೆಯೇ, ಭಾರತ ಮತ್ತು ನೇಪಾಳ ಪಂದ್ಯವು ಮಳೆಯ ಅಪಾಯವನ್ನು ಎದುರಿಸುತ್ತಿದೆ. ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿರುವ ಪಂದ್ಯದ ಆರಂಭದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಸೂಚಿಸುತ್ತವೆ. ಮೂರು ಗಂಟೆ ಸಮಯಕ್ಕೆ 20% ಮಳೆಯಾಗುವ ಸಾಧ್ಯತೆಯಿದ್ದರೆ, ಆರು ಗಂಟೆಯ ವೇಳೆ 70% ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ಸೂಚಿಸಿದೆ.
ಏಷ್ಯಾ ಕಪ್ 2023 ರ ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ ಫೋರ್ ಗೆ ಮುನ್ನಡೆಯುತ್ತವೆ. ಪಾಕಿಸ್ತಾನವು ಈಗಾಗಲೇ ಎರಡು ಪಂದ್ಯಗಳಿಂದ ಮೂರು ಅಂಕಗಳೊಂದಿಗೆ ಮುಂದಿನ ಸುತ್ತಿನಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಇನ್ನು ಎ ಗುಂಪಿನಲ್ಲಿ ಭಾರತ ಮತ್ತು ನೇಪಾಳದಿಂದ ಕೇವಲ ಒಂದು ತಂಡ ಮಾತ್ರ ಮುನ್ನಡೆಯಬಹುದು. ಒಂದು ವೇಳೆ ನೇಪಾಳ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದರೆ ಭಾರತ ಮುಂದಿನ ಸುತ್ತಿಗೆ ಲಗ್ಗೆಯಿಡಲಿದೆ.