Advertisement

6 ತಿಂಗಳ ಬಳಿಕ ಭಕ್ತರಿಗೆ ತೆರೆಯಲಿದೆಯೇ ಶ್ರೀಕೃಷ್ಣಮಠ?

08:03 PM Sep 18, 2020 | mahesh |

ಉಡುಪಿ: ಶ್ರೀಕೃಷ್ಣಮಠ ಆರು ತಿಂಗಳ ಬಳಿಕ ಭಕ್ತರಿಗೆ ತೆರೆದುಕೊಳ್ಳುವ ಸಾಧ್ಯತೆ ಇದೆ. ಮಾ. 22ರಿಂದ ಶ್ರೀಕೃಷ್ಣಮಠದಲ್ಲಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿತ್ತು. ಜೂ. 8ರಿಂದ ಧಾರ್ಮಿಕ ದತ್ತಿ ಇಲಾಖೆಯ ಎಲ್ಲ ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಕೇವಲ ದರ್ಶನ ಮಾತ್ರವಾಗಿತ್ತು, ಸೇವೆಗಳು ಇರಲಿಲ್ಲ. ಇದೀಗ ಸೆ. 1ರಿಂದ ಸೇವೆಗಳನ್ನು ಸ್ವೀಕರಿಸಲೂ ಇಲಾಖೆ ಅವಕಾಶ ಕಲ್ಪಿಸಿಕೊಟ್ಟ ಹಿನ್ನೆಲೆಯಲ್ಲಿ ಎಲ್ಲ ದೇವಸ್ಥಾನಗಳಲ್ಲಿ ಸೇವೆಗಳು ಆರಂಭಗೊಂಡಿವೆ.

Advertisement

ಕೋವಿಡ್ ಸೋಂಕು ವಿಸ್ತರಣೆಯಾಗುತ್ತಲೇ ಇದ್ದ ಕಾರಣ ಶ್ರೀಕೃಷ್ಣಮಠದಲ್ಲಿ ಸಾರ್ವಜನಿಕ ಭಕ್ತರ ಪ್ರವೇಶ ನಿರ್ಬಂಧವನ್ನು ಮುಂದುವರಿಸ ಲಾಗಿತ್ತು. ಶ್ರೀಕೃಷ್ಣ ಜಯಂತಿ, ವಿಟ್ಲಪಿಂಡಿ ಹಬ್ಬಗಳನ್ನೂ ಸಾಂಪ್ರದಾಯಿಕವಾಗಿ ಮಾತ್ರ ನೆರವೇರಿಸಲಾಗಿತ್ತು. ಸೆ. 21ರಿಂದ ಕೇಂದ್ರ ಸರಕಾರ ಹೊಸ ಮಾರ್ಗದರ್ಶಿ ಸೂತ್ರ ಹೊರಡಿಸಲಿದೆ. ಅದರಂತೆ ರಾಜ್ಯವೂ ಪಾಲಿಸಲಿದ್ದು, ಇದು ಜಿಲ್ಲೆಗೂ ಅನ್ವಯವಾಗು ವುದರಿಂದ ಶ್ರೀಕೃಷ್ಣಮಠದಲ್ಲಿ ದೇವರ ದರ್ಶನ ಸೆ. 21ರ ಬಳಿಕ ಆರಂಭವಾಗುವ ಸಾಧ್ಯತೆ ಇದೆ.

ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಜ. 18ರಂದು ಪೂಜಾಧಿಕಾರ ವಹಿಸಿಕೊಂಡ ಬಳಿಕ ದೇವರ ದರ್ಶನ ಮಾಡುವ ಮಾರ್ಗ ಬದಲಾಯಿಸಿದ್ದರು. ಇದೀಗ ಕೊರೊನಾ ಅವಧಿಯಲ್ಲಿ ಸಂಪೂರ್ಣ ಬಂದ್‌ ಮಾಡಿದ್ದರಿಂದ ದರ್ಶನ ಮಾಡುವ
ಮಾರ್ಗೋಪಾಯ ವ್ಯವಸ್ಥಿತಗೊಳಿಸಲಾಗಿದೆ. ಶ್ರೀಕೃಷ್ಣಮಠದ ರಾಜಾಂಗಣ ಬಳಿಯಿಂದ ಭೋಜನ ಶಾಲೆ ಉಪ್ಪರಿಗೆ ಮಾರ್ಗದಿಂದ ತೆರಳಿ ಅಲ್ಲಿಂದ ಶ್ರೀಕೃಷ್ಣಮಠದ ಗರ್ಭಗುಡಿ ಹೊರಾವರಣಕ್ಕೆ ಇಳಿದು ಅಲ್ಲಿಂದಲೇ ದೇವರ ದರ್ಶನ ಮಾಡಿ ಹಿಂದಿರುಗುವ ವ್ಯವಸ್ಥೆ ಮಾಡಲಾಗಿದೆ. ಗರ್ಭಗುಡಿ ಹೊರಾವರಣದಲ್ಲಿ ಗರುಡ ದೇವರ ಗುಡಿ ಸಮೀಪ ಭಕ್ತರು ಇಳಿದರೆ, ನಿರ್ಗಮಿಸುವಾಗ ಗರುಡ ದೇವರ ಗುಡಿ ಎದುರಿಗಿರುವ ಮುಖ್ಯಪ್ರಾಣ ದೇವರ ಗುಡಿ ಸಮೀಪ ಮೆಟ್ಟಿಲು ಹತ್ತಿ ನಿರ್ಗಮಿಸಬೇಕು. ಒಳಬರಲು ಒಂದು ದಾರಿಯಾದರೆ ಹೊರ ಹೋಗಲು ಇನ್ನೊಂದು ದಾರಿ ಇದೆ.

ನಿಯಮಾವಳಿಗೆ ಬದ್ಧವಾಗಿ ತೆರೆಯುವ ಸಾಧ್ಯತೆ ಕೋವಿಡ್ ಸೋಂಕು ಇನ್ನಷ್ಟು ವ್ಯಾಪಿಸುತ್ತಿರುವುದರಿಂದ,  ಉಡುಪಿಯಲ್ಲಿ ಬಹುತೇಕ ಎಲ್ಲ ಆಸ್ಪತ್ರೆಗಳಲ್ಲಿ ಬೆಡ್‌ಗಳು ಭರ್ತಿ ಯಾಗಿರುವುದರಿಂದ ಸಾರ್ವಜನಿಕ ಪ್ರವೇಶ ನಿರ್ಬಂಧಿಸುವ ಇರಾದೆ ಪರ್ಯಾಯ ಸ್ವಾಮೀಜಿಯವರಿಗೆ ಇದ್ದರೂ ಸರಕಾರದ ನಿಯಮಾವಳಿಗೆ ಬದ್ಧವಾಗಿ ಭಕ್ತರಿಗೆ ತೆರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬಡಗುಮಾಳಿಗೆಯಲ್ಲಿ ನೈಸರ್ಗಿಕ ಬಣ್ಣ
ಕೊರೊನಾ ಅವಧಿಯಲ್ಲಿ ಭೋಜನ ಶಾಲೆ ಮುಖ್ಯಪ್ರಾಣ ದೇವರ ಗುಡಿ ಹೊರಗೆ ಹಳೆಯ ಕಾಲದಂತೆ ಹೆಂಚಿನ ಮಾಡನ್ನು ನಿರ್ಮಿಸಲಾಗಿದೆ. ಭೋಜನ ಶಾಲೆ, ಬಡಗುಮಾಳಿಗೆಯಲ್ಲಿ ನೈಸರ್ಗಿಕ ಬಣ್ಣ ವನ್ನು ಕೊಡಲಾಗಿದೆ. ಮಧ್ವಸರೋವರದಲ್ಲಿ ಮುಳಿಹುಲ್ಲಿನ ಮಾಡು ನಿರ್ಮಿಸಲಾಗಿದೆ.

Advertisement

ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಳಿಗೆ ಸೆ. 1ರಿಂದ ಸೇವೆ ಆರಂಭಿಸಲು ಸೂಚನೆ ನೀಡುವಾಗ ಭೋಜನ ಪ್ರಸಾದದ ಕುರಿತು ಮೌನವಾಗಿತ್ತು. ಆದರೆ ಕೆಲವು ದೇವಸ್ಥಾನಗಳು ಭೋಜನ ಪ್ರಸಾದವನ್ನು ಆರಂಭಿಸಿವೆ. ಶ್ರೀಕೃಷ್ಣಮಠದಲ್ಲಿ ಈಗ ಚಾತುರ್ಮಾಸ್ಯದ ಅವಧಿಯಾಗಿರುವುದರಿಂದ ಉತ್ಥಾನ ದ್ವಾದಶಿವರೆಗೆ (ನ. 27) ರಥೋತ್ಸವ ನಡೆಯುವುದಿಲ್ಲ. ಈಗ ಏನಿದ್ದರೂ ಸಾಮಾನ್ಯ ಸೇವೆಗಳು ಮಾತ್ರ. ಸೆ. 21ರಿಂದ ದರ್ಶನಾವಕಾಶ ಕಲ್ಪಿಸುವುದಾದರೆ ಇತರ ಸೇವೆಗಳನ್ನು ಸಲ್ಲಿಸಲು ಅವಕಾಶವಿದೆಯೇ? ಭೋಜನ ಪ್ರಸಾದ ಆರಂಭವಾಗುವುದೋ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next