ಮುಂಬಯಿ: ಮಹಾರಾಷ್ಟ್ರ ಭಾರತೀಯ ಜನತಾ ಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಂದ್ರ ಫಡ್ನವೀಸ್ ಅವರು ಇಂದು ಪುನರ್ ಆಯ್ಕೆಯಾಗಿದ್ದಾರೆ. ದ್ವಿತೀಯ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ದೇವೇಂದ್ರ ಫಡ್ನವೀಸ್ ಅವರ ಮೇಲೆ ಶಿವಸೇನೆಯ ಮುನಿಸನ್ನು ತಣಿಸುವ ಮಹತ್ವದ ಹೊಣೆಗಾರಿಕೆ ಇದೆ.
ದಕ್ಷಿಣ ಮುಂಬಯಿಯಲ್ಲಿರುವ ವಿಧಾನ ಭವನದಲ್ಲಿ ನಡೆದ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಎಲ್ಲಾ 105 ಶಾಸಕರು ಹಾಜರಿದ್ದರು.
ಶಾಸಕಾಂಗ ಪಕ್ಷದ ನಾಯಕರಾಗಿ ಪುನರಾಯ್ಕೆಗೊಂಡ ಬೆನ್ನಲ್ಲೇ ಮಾತನಾಡಿದ ದೇವೇಂದ್ರ ಫಡ್ನವೀಸ್ ಅವರು ಮೊದಲಿಗೆ ತನ್ನ ಮೇಲೆ ವಿಶ್ವಾಸವಿರಿಸಿದ ಪಕ್ಷದ ಹೈಕಮಾಂಡ್ ಗೆ ಹಾಗೂ ಎಲ್ಲಾ ಶಾಸಕರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಬಳಿಕ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಬಿಜೆಪಿಯು ತನ್ನ ಮಿತ್ರಪಕ್ಷ ಶಿವಸೇನೆಯ ಜೊತೆಗೂಡಿ ನೂತನ ಸರಕಾರವನ್ನು ರಚಿಸಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.
‘ಇದು ‘ಮಹಾಯುತಿ’ಗೆ (ಬಿಜೆಪಿ-ಶಿವಸೇನಾ ಮೈತ್ರಿ) ಸಿಕ್ಕಿದ ಜನಾದೇಶವಾಗಿದೆ. ಮಹಾರಾಷ್ಟ್ರದಲ್ಲಿ ಮುಂದಿನ ಸರಕಾರ ಮಹಾಯುತಿಯದ್ದಾಗಿರುತ್ತದೆ ಎಂಬ ವಿಚಾರದಲ್ಲಿ ಯಾರಿಗೂ ಸಂದೇಹವಿಲ್ಲ, ಹಾಗಾಗಿ ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ’ ಎಂದು ಫಡ್ನವೀಸ್ ಅವರು ತನ್ನ ಪಕ್ಷದ ನೂತನ ಶಾಸಕರನ್ನುದ್ದೇಶಿಸಿ ಮಾತನಾಡುತ್ತಾ ತಿಳಿಸಿದರು.
ವಿಧಾನಸಭಾ ಚುನಾವಣೆಗೂ ಮುಂಚೆ ಶಿವಸೇನೆಗೆ ಎರಡೂವರೆ ವರ್ಷ ಅವಧಿಗೆ ಮುಖ್ಯಮಂತ್ರಿ ಹುದ್ದೆ ನೀಡುವ ಭರವಸೆಯನ್ನೇನೂ ನೀಡಿರಲಿಲ್ಲ, ಸಂಪೂರ್ಣ ಐದು ವರ್ಷದ ಅವಧಿಗೆ ನಾನೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದೇನೆ ಎಂದು ಫಡ್ನವೀಸ್ ಅವರು ಮಂಗಳವಾರವಷ್ಟೇ ಹೇಳಿಕೆ ನೀಡಿದ್ದರು.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಬಳಿಕ 50-50 ಸೂತ್ರಕ್ಕೆ ಭಾರತೀಯ ಜನತಾ ಪಕ್ಷ ಬದ್ಧವಾಗಿರಬೇಕು ಎಂದು ಶಿವಸೇನಾ ಮುಖ್ಯಸ್ಥ ಉದ್ಭವ್ ಠಾಕ್ರೆ ಅವರು ಬೇಡಿಕೆ ಇರಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.