Advertisement
ಪಟ್ಟಣ ಮತ್ತು ತಾಲೂಕಿನ 346 ಜನವಸತಿಗಳಿಗೆ ಬಹುಗ್ರಾಮ ಯೋಜನೆ ಅಡಿ ಕುಡಿಯುವ ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದ್ದು, 480 ಕೋಟಿ ರೂ.ಗಳ ಮೊದಲ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಹೊಸದುರ್ಗ ಪಟ್ಟಣಕ್ಕೆ ಪ್ರಸ್ತುತ ವೇದಾವತಿ ನೀರನ್ನು ಮೂಲವಾಗಿರಿಸಿಕೊಂಡು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ ವತಿಯಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇದು ದೀರ್ಘಕಾಲಿಕವಲ್ಲದ ಜಲಮೂಲವಾಗಿದೆ. ಹಾಗಾಗಿ ಬೇಸಿಗೆಯಲ್ಲಿ ಕೊಳವೆ ಬಾವಿಗಳನ್ನು ಅವಲಂಬಿಸುವ ಅನಿವಾರ್ಯತೆ ಇದೆ. ಕೊಳವೆ ಬಾವಿ ಮೇಲಿನ ಅವಲಂಬನೆ ತಪ್ಪಿಸಿ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
Related Articles
Advertisement
ಮೊದಲ ಹಂತದ 92 ಹಳ್ಳಿಗಳಿಗೂ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದ್ದು, ಪಟ್ಟಣದ ಪ್ರಥಮದರ್ಜೆ ಕಾಲೇಜು ಹಿಂಭಾಗದಲ್ಲಿ 26 ಲಕ್ಷ ಲೀಟರ್ ಸಂಗ್ರಹದ ಮೇಲ್ಮಟ್ಟದ ಜಲಸಂಗ್ರಹಾಗಾರ ನಿರ್ಮಾಣವಾಗುತ್ತಿದೆ. ಅಹಮದ್ ನಗರದಲ್ಲಿ 2.50 ಲಕ್ಷ ಲೀಟರ್, ಕಬ್ಬಿನಕೆರೆ ಬಳಿ 3 ಲಕ್ಷ ಲೀಟರ್ ಸಂಗ್ರಹದ ಎರಡು ಜಲಸಂಗ್ರಹಾಗಾರ, ಸಿದ್ದಪ್ಪನಬೆಟ್ಟದ ಬಳಿ 3 ಲಕ್ಷ ಲೀಟರ್ ಸಂಗ್ರಹದ ಜಲಸಂಗ್ರಹಗಾರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ಎರಡನೇ ಹಂತದ ಕಾಮಗಾರಿ
145 ಕೋಟಿ ರೂ. ವೆಚ್ಚದ ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಅಡಿ ಇನ್ನುಳಿದ 255 ಜನವಸತಿ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಮೊದಲ ಹಂತ ಪೂರ್ಣಗೊಂಡ ಬಳಿಕ ಎರಡನೇ ಹಂತದ ಕಾಮಗಾರಿ ಕೈಗೊಳ್ಳಲಾಗುವುದು ಎಂಬುದು ಅಧಿಕಾರಿಗಳ ಹೇಳಿಕೆ.
ಹೊಸದುರ್ಗ ತಾಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿ ಅಮೃತ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿರುವ ಹೆಬ್ಬಳ್ಳಿ, ಸಾಣೇಹಳ್ಳಿ, ದೇವಪುರ, ಗುಡ್ಡದನೇರಲಕೆರೆ ಗ್ರಾಮ ಪಂಚಾಯತಿಗಳಿಗೆ ನಳ ಸಂಪರ್ಕ ಕಲ್ಪಿಸಲು ಟೆಂಡರ್ ಕರೆಯಲಾಗಿದೆ. – ಪ್ರಸನ್ನಕುಮಾರ್, ಎಂಜಿನಿಯರ್
ಭದ್ರಾ ಮೇಲ್ದಂಡೆ ಯೋಜನೆ ಅಡಿ ಕುಡಿಯುವ ನೀರು ಸರಬರಾಜಾದರೂ ವಿವಿ ಸಾಗರದ ಹಿನ್ನೀರಿನಿಂದಲೂ ತಾಲೂಕಿನ ಜನತೆಗೆ ಕುಡಿಯುವ ನೀರು ಒದಗಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಒತ್ತಾಯ ಮಾಡಲಾಗಿದೆ. – ಗೂಳಿಹಟ್ಟಿ ಡಿ. ಶೇಖರ್, ಶಾಸಕರು