ನವದೆಹಲಿ: ಪಶ್ಚಿಮಬಂಗಾಳದಲ್ಲಿ ಫೆಬ್ರವರಿ 27ರಂದು ನಡೆಯಲಿರುವ ನಗರಪಾಲಿಕೆಯ ಚುನಾವಣೆ ಸಂದರ್ಭದಲ್ಲಿ ಒಂದು ವೇಳೆ ಹಿಂಸಾಚಾರ ನಡೆಸಿದರೆ, ಪ್ರತಿಯೊಂದು ಮತಗಟ್ಟೆಯನ್ನೂ ಧ್ವಂಸಗೊಳಿಸುವುದಾಗಿ ಪಶ್ಚಿಮಬಂಗಾಳದ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷ ಅರ್ಜುನ್ ಸಿಂಗ್ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಶಿವಮೊಗ್ಗ ಹರ್ಷ ಹತ್ಯೆ ಕೇಸ್: ಇಬ್ಬರು ಆರೋಪಿಗಳು ವಶಕ್ಕೆ; ಎಡಿಜಿಪಿ ಮುರುಗನ್
ಒಂದು ವೇಳೆ ನಗರಪಾಲಿಕೆ ಚುನಾವಣೆ ಸಂದರ್ಭದಲ್ಲಿ ಟಿಎಂಸಿ ಗೂಂಡಾಗಳು ಹಿಂಸಾಚಾರ ನಡೆಸಿದರೆ ಭಾರತೀಯ ಜನತಾ ಪಕ್ಷ ತಕ್ಕ ಉತ್ತರ ನೀಡಲಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಈ ಬಾರಿ ಹಿಂಸಾಚಾರಕ್ಕೆ ಮುಂದಾದರೆ ಇಟ್ಟಿಗೆ, ಕಲ್ಲುಗಳಿಂದ ಪ್ರತಿಕ್ರಿಯೆ ನೀಡುತ್ತೇವೆ. ಒಂದು ವೇಳೆ ಯಾವುದೇ ಒಂದು ಬೂತ್ ನಲ್ಲಿ ಅಕ್ರಮವಾಗಿ ಮಧ್ಯಪ್ರವೇಶಿಸಿದರೂ ಕೂಡಾ ನಂತರ ಪ್ರಿಸೈಡಿಂಗ್ ಅಧಿಕಾರಿ ತನ್ನ ಕೆಲಸಕ್ಕಾಗಿ ಪ್ರಾರ್ಥಿಸಬೇಕಾಗುತ್ತದೆ. ನಾನು ಪ್ರತಿಯೊಂದು ಬೂತ್ ನಲ್ಲಿರುವ ಯಂತ್ರಗಳನ್ನು ಒಡೆದು ಹಾಕುವೆ ಎಂದು ಸಿಂಗ್ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ಫೆಬ್ರವರಿ 27ರಂದು ಪಶ್ಚಿಮಬಂಗಾಳದ 108 ನಗರಪಾಲಿಕೆ ಚುನಾವಣೆಗೂ ಮುನ್ನ ಸಿಂಗ್ ಈ ವಿವಾದಿತ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ. ಅರ್ಜುನ್ ಸಿಂಗ್ ಬರ್ರಾಕ್ ಪುರ್ ನ ಬಿಜೆಪಿ ಸಂಸದರಾಗಿದ್ದು, ತಮ್ಮ ನೆರೆಯ ಭಾಟ್ಪಾರಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಸಂದರ್ಭದಲ್ಲಿ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ಹೇಳಿದೆ.