Advertisement

ಗೋವಾದಲ್ಲಿ ಮತ್ತೆ ಕುದುರೆ ವ್ಯಾಪಾರ? ಗದ್ದುಗೆ ಉಳಿಸಿಕೊಳ್ಳಲು ಬಿಜೆಪಿ ರಣತಂತ್ರ

11:30 AM Mar 08, 2022 | Team Udayavani |

ಪಣಜಿ: ಗೋವಾ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಇನ್ನೆರಡು ದಿನಗಳು ಬಾಕಿ ಉಳಿದಿದ್ದು, ಕೇಸರಿ ಪಡೆ ಅಧಿಕಾರದ ಗಾದಿ ಮರಳಿ ಹಿಡಿಯಲು ಸರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಕ್ಷಣ ಕ್ಷಣಕ್ಕೂ ಲೆಕ್ಕಾಚಾರಗಳನ್ನು ಹಾಕುತ್ತಿದೆ.

Advertisement

ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು, ನಮಗೆ ಸಂಖ್ಯಾ ಬಲದ ಕೊರತೆಯಾದರೆ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ (ಎಂಜಿಪಿ) ಬೆಂಬಲ ಪಡೆಯಲು ಕೇಂದ್ರ ಬಿಜೆಪಿ ನಾಯಕತ್ವ ಈಗಾಗಲೇ ಮಾತುಕತೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಪಿಟಿಐ ಜೊತೆ ಮಾತನಾಡಿದ ಸಾವಂತ್, ಬಿಜೆಪಿಯು 22 ಕ್ಕೂ ಹೆಚ್ಚು ಸ್ಥಾನಗಳನ್ನು (ಬಹುಮತಕ್ಕೆ 21 ) ಪಡೆಯುವ ಆಶಾವಾದ ಹೊಂದಿದೆ, ಆದರೆ ಸಂಖ್ಯಾಬಲದ ಕೊರತೆಯಾದರೆ, ಸ್ವತಂತ್ರರು ಮತ್ತು ಎಂಜಿಪಿ ಬೆಂಬಲವನ್ನು ಪಡೆಯುವ ಆಯ್ಕೆಯನ್ನು ಸಹ ಮುಕ್ತವಾಗಿ ಇರಿಸಿದೆ ಎಂದು ಹೇಳಿದ್ದಾರೆ.

2017ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.ಆದರೆ, 13 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ, ದೀಪಕ್ ಧವಳೀಕರ್ ನೇತೃತ್ವದ ಗೋವಾದ ಅತ್ಯಂತ ಹಳೆಯ ಪ್ರಾದೇಶಿಕ ಪಕ್ಷ ಎಂಜಿಪಿ, ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಸ್ವತಂತ್ರರ ಬೆಮಬಲದೊಂದಿಗೆ ಮನೋಹರ್ ಪರ್ರಿಕರ್ ನೇತೃತ್ವದಲ್ಲಿ ಸರ್ಕಾರವನ್ನು ರಚಿಸಿತ್ತು.

ಸಾವಂತ್ ಅವರನ್ನು ಎಂದಿಗೂ ಬೆಂಬಲಿಸುವುದಿಲ್ಲ!

Advertisement

2019 ರಲ್ಲಿ, ಪರ್ರಿಕರ್ ಅವರ ನಿಧನದ ನಂತರ ಸಾವಂತ್ ಸಿಎಂ ಆದಾಗ, ಇಬ್ಬರು ಎಂಜಿಪಿ ಮಂತ್ರಿಗಳನ್ನು ರಾಜ್ಯ ಸಂಪುಟದಿಂದ ಕೈಬಿಡಲಾಗಿತ್ತು. ಈ ಬಾರಿ ಎಂಜಿಪಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಜೊತೆ ಮೈತ್ರಿ ಮಾಡಿಕೊಂಡು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಗೋವಾ ಚುನಾವಣಾ ಫಲಿತಾಂಶದ ನಂತರ ಟಿಎಂಸಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ತಮ್ಮ ಪಕ್ಷವು ತನ್ನ ನಿಲುವನ್ನು ನಿರ್ಧರಿಸುತ್ತದೆ, ಆದರೆ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಅವರನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಎಂಜಿಪಿ ಶಾಸಕ ಸುದಿನ್ ಧವಳೀಕರ್ ಶನಿವಾರ ಹೇಳಿದ್ದಾರೆ.

ಸುದಿನ್ ಧವಳೀಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಾವಂತ್, ಯಾವುದೇ ಪಕ್ಷ ನಮಗೆ ಬೆಂಬಲ ನೀಡಿದರೂ ನಮ್ಮ ನಾಯಕತ್ವದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. 2017 ರ ಗೋವಾ ಚುನಾವಣೆಯಲ್ಲಿ ಮತ್ತು ಈ ವರ್ಷದ ಚುನಾವಣೆಗಳಲ್ಲಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದೇವೆ. 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ನಮ್ಮ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿದ್ದರಿಂದ ಎಂಜಿಪಿಯನ್ನು ಸರ್ಕಾರದಿಂದ ಕೈಬಿಡಲಾಗಿತ್ತು. ಧವಳೀಕರ್ ಸಹೋದರರೊಂದಿಗೆ “ರಾಜಕೀಯ ವ್ಯತ್ಯಾಸಗಳು ” ಇದ್ದರೂ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ ಎಂದು ಸಾವಂತ್ ಹೇಳಿದ್ದಾರೆ.

40 ಸದಸ್ಯ ಬಲದ ಗೋವಾ ವಿಧಾನಸಭೆಗೆ ಫೆಬ್ರವರಿ 14 ರಂದು ಚುನಾವಣೆ ನಡೆದಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next