ಹೊಸದಿಲ್ಲಿ: 17ನೇ ಸೀಸನ್ ನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಅವರು ರಿಷಭ್ ಪಂತ್ ಅವರ ಫಿಟ್ನೆಸ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಐಸಿಸಿ ರಿವೀವ್ ನಲ್ಲಿ ಮಾತನಾಡಿದ ಪಾಂಟಿಂಗ್, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ ಸಿಎ)ಯಲ್ಲಿ ರಿಷಭ್ ಪಂತ್ ಅವರು ವಿಕೆಟ್ ಕೀಪಿಂಗ್ ತರಬೇತಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
2022ರ ಡಿಸೆಂಬರ್ ನಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ರಿಷಭ್ ಪಂತ್ ಅವರು ಬಳಿಕ ಕ್ರಿಕೆಟ್ ಆಡಿಲ್ಲ. ಚೇತರಿಕೆ ಕಂಡಿರುವ ಪಂತ್ ಮೈದಾನಕ್ಕಿಳಿಯುವುದನ್ನು ಕಾಣಲು ಕ್ಯಾಪಿಟಲ್ಸ್ ಮತ್ತು ಭಾರತೀಯ ಅಭಿಮಾನಿಗಳು ಕಾತರರಾಗಿದ್ದಾರೆ.
ಐಪಿಎಲ್ 2024 ರಲ್ಲಿ ರಿಷಭ್ ಪಂತ್ ಪೂರ್ಣಾವಧಿಯಲ್ಲಿ ಆಡಲು ಸಾಧ್ಯವಾಗುವ ಬಗ್ಗೆ ಡಿಸಿ ಮ್ಯಾನೇಜ್ ಮೆಂಟ್ ಇನ್ನೂ ಅಂತಿಮ ಕರೆ ಕೈಗೊಂಡಿಲ್ಲ ಎಂದು ಮುಖ್ಯ ಕೋಚ್ ಪಾಂಟಿಂಗ್ ಹೇಳಿದರು. ವಿಕೆಟ್ ಕೀಪರ್ ಬ್ಯಾಟರ್ ಪಂತ್ ತನ್ನ ಚೇತರಿಕೆಯಲ್ಲಿ ಸಾಧಿಸಲು ಅಪಾರ ಪ್ರಮಾಣದ ಪ್ರಯತ್ನವನ್ನು ಮಾಡಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿದರು.
“ನಾವು ದೊಡ್ಡ ನಿರ್ಧಾರವನ್ನು ಕೈಗೊಳ್ಳಬೇಕಿದೆ. ಒಂದು ವೇಳೆ ಅವರು ಆಡಲು ಫಿಟ್ ಆಗಿದ್ದರೆ ಅವರು ನೇರವಾಗಿ ನಾಯಕನ ಜವಾಬ್ದಾರಿ ಪಡೆಯುತ್ತಾರೆ” ಎಂದು ಪಾಂಟಿಂಗ್ ಹೇಳಿದರು.
‘’ಒಂದು ವೇಳೆ ಪಂತ್ ಪೂರ್ಣ ಫಿಟ್ ಆಗಿರದೇ ಇದ್ದರೆ ನಾವು ಅವರನ್ನು ಭಿನ್ನ ಪಾತ್ರದಲ್ಲಿ ಬಳಸಿಕೊಳ್ಳಬೇಕಿದೆ. ಆಗ ನಾವು ಅಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ’’ ಎಂದರು.
ಎನ್ ಸಿಎ ಯಲ್ಲಿ ಕೆಲವು ವಾರಗಳಿಂದ ಪಂತ್ ಅಭ್ಯಾಸ ಪಂದ್ಯಗಳನ್ನು ಆಡುತ್ತಿದ್ದಾರೆ. ಇದು ನಮಗೆ ಉತ್ತಮ ಸಂಕೇತ. ಈ ವರ್ಷ ಐಪಿಎಲ್ ಗೆ ಅವರು ಸಮಯಕ್ಕೆ ಸರಿಯಾಗಿ ತಯಾರಾಗುತ್ತಾರೆಯೇ ಎಂಬ ಚಿಂತೆ ಮತ್ತು ಕಳವಳಗಳನ್ನು ನಾವು ನಿಸ್ಸಂಶಯವಾಗಿ ಹೊಂದಿದ್ದೇವೆ ಎಂದು ಪಾಂಟಿಂಗ್ ಹೇಳಿದರು.
2024ರ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಪಂದ್ಯವನ್ನು ಮಾರ್ಚ್ 23ರಂದು ಆಡಲಿದೆ.