Advertisement

ಶಾಸಕ ಸ್ಥಾನಕ್ಕೆ ರಮೇಶ ರಾಜೀನಾಮೆ ಕೊಡ್ತಾರಾ?

06:35 AM Dec 24, 2018 | Karthik A |

ಬೆಳಗಾವಿ: ಸಚಿವ ಸಂಪುಟ ವಿಸ್ತರಣೆ ಆಗುತ್ತಿದ್ದಂತೆ ಮುನಿಸಿಕೊಂಡಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದರೆ, ಇನ್ನೊಂದೆಡೆ ಮನೆಯಲ್ಲಿಯೇ ಮಂತ್ರಿಗಿರಿ ಸಿಕ್ಕಿರುವಾಗ ರಾಜೀನಾಮೆ ಕೊಟ್ಟು ಏನು ಮಾಡೋದು ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

Advertisement

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳಲ್ಲಿಯೇ ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ ಜಾರಕಿಹೊಳಿಗೆ ಸಾರ್ವಜನಿಕವಾಗಿ ಇರಿಸುಮುರಿಸು ಉಂಟಾಗುತ್ತಿದೆ. ಆದರೆ, ಸಹೋದರ ಸತೀಶ ಜಾರಕಿಹೊಳಿಗೆ ಸಚಿವ ಸ್ಥಾನ ಸಿಕ್ಕಿರುವುದರಿಂದ ರಮೇಶ ಇಕ್ಕಟ್ಟಿಗೆ ಸಿಲುಕಿದ್ದಾರೆ. ಸಂಪುಟ ವಿಸ್ತರಣೆ ಪಟ್ಟಿ ಹೊರಬೀಳುತ್ತಿದ್ದಂತೆ ರಮೇಶ ಜಾರಕಿಹೊಳಿ ಯಾರ ಕೈಗೂ ಸಿಕ್ಕಿರಲಿಲ್ಲ. ಆದರೆ, ಭಾನುವಾರ ಬೆಳಗ್ಗೆ ಗೋಕಾಕ್‌ನ ತಮ್ಮ ಫಾರ್ಮಹೌಸ್‌ನಲ್ಲಿ ಬ್ಯಾಡ್ಮಿಂಟನ್‌ ಆಡಿ ಹೊರಬರುವಾಗ ಎದುರಾದ ಟಿವಿ ವಾಹಿನಿಯ ಪ್ರತಿನಿಧಿಯೊಬ್ಬರು ರಾಜೀನಾಮೆ ಕೊಡ್ತೀರಾ ಎಂಬ ಪ್ರಶ್ನೆಗೆ ಗರಂ ಆದ ರಮೇಶ, ‘ಟಿವಿ ಅವರಿಂದಲೇ ನಾನು ಹಾಳಾಗಿದ್ದೇನೆ. ನಾನು ಯಾವುದೇ ಪ್ರತಿಕ್ರಿಯೆ ಕೊಡಲ್ಲ’ ಎಂದು ಸಿಟ್ಟಾಗಿ ಹೊರ ನಡೆದರು.

ರಾಜೀನಾಮೆ ಆಡಿಯೋ ವೈರಲ್‌: ‘ಶಾಸಕ ಸ್ಥಾನಕ್ಕೆ ಇನ್ನೊಂದು ವಾರದಲ್ಲಿ ರಾಜೀನಾಮೆ ಕೊಡುತ್ತೇನೆ. ಸಂಖ್ಯೆ ಎಷ್ಟು ಎಂದು ಹೇಳುವುದಿಲ್ಲ’ ಎಂದು ರಮೇಶ ಜಾರಕಿಹೊಳಿ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿರುವ 14 ಸೆಕೆಂಡುಗಳ ಆಡಿಯೋ ವೈರಲ್‌ ಆಗಿದೆ. ಭಾನುವಾರ ಬೆಳಗ್ಗೆಯಿಂದ ರಿಂಗಣಿಸುತ್ತಿದ್ದ ರಮೇಶ ಅವರ ಮೊಬೈಲ್‌, ಮಧ್ಯಾಹ್ನದ ನಂತರ ನಾಟ್‌ ರಿಚೇಬಲ್‌ ಆಗಿದೆ. ಬೆಂಗಳೂರಿಗೆ ಹೋಗಿದ್ದಾರೆ ಎಂದು ಕೆಲವರು ಹೇಳಿದ್ದರೆ, ನಿಗೂಢ ಸ್ಥಳಕ್ಕೆ ಹೋಗಿದ್ದಾರೆ ಎಂಬ ಮಾತೂ ಕೇಳಿ ಬರುತ್ತಿದೆ.

ಈ ಮಧ್ಯೆ, ಕೆಲವು ರಾಜ್ಯ ನಾಯಕರು ರಮೇಶ ಅವರನ್ನು ಮಾತನಾಡಿಸಲು ಪ್ರಯತ್ನಿಸಿದ್ದಾರೆ. ಆದರೆ, ಯಾರೊಬ್ಬರ ಕರೆಯನ್ನೂ ಅವರು ಸ್ವೀಕರಿಸಿಲ್ಲ ಎನ್ನಲಾಗಿದೆ. ಒಂದು ವೇಳೆ ಸಚಿವ ಸ್ಥಾನ ಜಾರಕಿಹೊಳಿ ಕುಟುಂಬದ ಬದಲಾಗಿ ಲಕ್ಷ್ಮೀ ಹೆಬ್ಟಾಳಕರ ಪಾಲಾಗಿದ್ದರೆ ಭಿನ್ನಮತ ಸಹಜವಾಗಿರುತ್ತಿತ್ತು.

ರಮೇಶ ಜಾರಕಿಹೊಳಿ ನನಗೆ ಇನ್ನೂ ಸಿಕ್ಕಿಲ್ಲ. ಅವರೊಂದಿಗೆ ಮಾತನಾಡಿ ಎಲ್ಲ ಗೊಂದಲ ಬಗೆಹರಿಸಲಾಗುವುದು. ಸಚಿವ ಸಂಪುಟ ವಿಸ್ತರಣೆ ಆದಾಗ ಸಚಿವರಾಗಬೇಕೆಂಬ ಮಹಾತ್ವಾಕಾಂಕ್ಷೆ ಇರುವವರಿಗೆ ಅಸಮಾಧಾನ ಆಗುವುದು ಸಹಜ. ಹೈಕಮಾಂಡ್‌ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗುತ್ತಾರೆ.
— ಸಿದ್ದರಾಮಯ್ಯ, ಮಾಜಿ ಸಿಎಂ.

Advertisement

ರಮೇಶ ಖಂಡಿತವಾಗಿಯೂ ರಾಜೀನಾಮೆ ಕೊಡುವುದಿಲ್ಲ. ಅವರ ಮನೆಯಲ್ಲಿಯೇ ಮಂತ್ರಿಗಿರಿ ಇರುವಾಗ ರಾಜೀನಾಮೆ ಕೊಡುವ ಪ್ರಶ್ನೆಯೇ ಬರುವುದಿಲ್ಲ. 6 ವರ್ಷಗಳಿಂದ ಅವರ ಕುಟುಂಬಕ್ಕೇ ಸಚಿವ ಸ್ಥಾನ ಇದೆ. ಅಲ್ಪಸ್ವಲ್ಪ ಅಸಮಾಧಾನ ಇದ್ದಾಗ ವರಿಷ್ಠರು ಅದನ್ನು ಬಗೆಹರಿಸುತ್ತಾರೆ.
– ಲಕ್ಷ್ಮೀ ಹೆಬ್ಟಾಳಕರ, ಮೈಸೂರು ಮಿನರಲ್ಸ್‌ ಅಧ್ಯಕ್ಷೆ

ಶಾಸಕರೆಲ್ಲರನ್ನೂ ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಬಿ.ಸಿ.ಪಾಟೀಲ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ರಮೇಶ ಜಾರಕಿಹೊಳಿ ಅವರು ಹೆಚ್ಚು ಸಮಯವನ್ನು ಇಲಾಖೆಗೆ ಹಾಗೂ ಕ್ಷೇತ್ರಕ್ಕೆ ಕೊಟ್ಟಿರಲಿಲ್ಲ. ಹೀಗಾಗಿ. ಅವರನ್ನು ಸಂಪುಟದಿಂದ ಕೈ ಬಿಡಬೇಕಾಯಿತು.
— ದಿನೇಶ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ.

— ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next