ಕೊಪ್ಪಳ: ದಿಲ್ಲಿಯಲ್ಲಿ ಕೆಆರ್ ಪಿಪಿ ಧ್ವನಿ ಕೇಳಿಸುವವರೆಗೂ ನಿದ್ದೆ ಮಾಡುವುದಿಲ್ಲ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷ ಘೋಷಣೆ ಮಾಡಿದಾಗ ಚುನಾವಣೆ ಮೂರು ತಿಂಗಳಿತ್ತು, ಆಗ ನಾನು ಎಲ್ಲಿ ಸ್ಪರ್ಧೆ ಮಾಡುತ್ತೇನೆಂಬ ಚಿಂತೆಯಿತ್ತು. ನಾನು ಎಲ್ಲಿ ಸ್ಪರ್ಧೆ ಮಾಡಿದರೆ ಅಲ್ಲಿ ಯಾರು ಹೆದರುತ್ತಾರೆ ಎನ್ನುವ ಟೆನ್ಶನ್ ಇತ್ತು. ಆಗ ಪಕ್ಷ ಘೋಷಣೆ ಮಾಡಿದಾಗಲೇ ಗಂಗಾವತಿಗೆ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದೆ. ನನ್ನ ವ್ಯಾಪಾರದ ದಿನದಿಂದಲೂ ಈ ಭಾಗದ ಜನರೊಂದಿಗೆ ಒಳ್ಳೆಯ ಬಾಂಧವ್ಯ ಇದೆ ಎಂದರು.
ಜಿಲ್ಲಾ ಕೇಂದ್ರ ಆರಂಭದ ದಿನದಿಂದಲೂ ಕೊಪ್ಪಳದಲ್ಲಿ ಅಭಿವೃದ್ಧಿಯಾಗಿಲ್ಲ ಈ ಭಾಗದ ಯುವಕರಿಗೆ ಕೆಲಸವಿಲ್ಲ. ಸ್ಥಳೀಯ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗಬೇಕು. ಇಲ್ಲವೆಂದರೆ ನಾನು ಫ್ಯಾಕ್ಟರಿ ನಡೆಸಲು ಬಿಡುವುದಿಲ್ಲ. ಸಂಸದ ಕರಡಿ ಸಂಗಣ್ಣ ಆತ್ಮೀಯ ಸಹೋದರರು. ಅವರು ಎಂಪಿ ಆಗಿ 10 ವರ್ಷ ಆಗಿದೆ. ಆದರೂ ಅವರು ಏನೂ ಮಾಡಲು ಆಗಲಿಲ್ಲ. ಅವರು ಅಂಜನಾದ್ರಿ ಅಭಿವೃದ್ಧಿಗಾಗಿ ಏನು ಮಾಡಿದ್ದಾರೆ? ಅವರು ಧ್ವನಿಯತ್ತುವ ಪರಿಸ್ಥಿತಿಯಲ್ಲಿ ಇಲ್ಲ ಎಂದರು.
ಜನಾರ್ದನ ರೆಡ್ಡಿಗೆ ಇರುವ ಧೈರ್ಯ ನಮಗೆ ಇಲ್ಲ ಎಂದು ಶ್ರೀರಾಮುಲು ಹೇಳಿದ್ದಾರೆ ಧೈರ್ಯದಿಂದ ಮಾತನಾಡಿದರೆ ಟಿಕೆಟ್ ಕೊಡುವುದಿಲ್ಲ ಎನ್ನುವ ಭಯ ಅವರಲ್ಲಿದೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೊಪ್ಪಳ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಧ್ವನಿ ಎತ್ತಲು ಸಾಧ್ಯವಾ? ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಹೇಳಿ ರಾಘವೇಂದ್ರ ಹಿಟ್ನಾಳ್ ಧ್ವನಿ ಎತ್ತಿಲ್ಲ ಎಂದರು.
ಲೋಕಸಭಾ ಕ್ಷೇತ್ರದ 7 ಕ್ಷೇತ್ರದಲ್ಲಿ ನಾನು ಕೆಲಸ ಮಾಡುತ್ತೇನೆ. ಸಿರಗುಪ್ಪದಲ್ಲಿ ನನ್ನ ಶ್ರೀಮತಿ, ಪುತ್ರಿ ಪ್ರಚಾರ ಮಾಡುತ್ತಾರೆ. ಅಂಜನಾದ್ರಿ ಅಭಿವೃದ್ಧಿಗೆ ನಾನು ಹಲವು ಯೋಜನೆಗಳ ಹಾಕಿಕೊಂಡಿದ್ದೇನೆ. ಪ್ರಧಾನಿ ಮೋದಿ ಅವರು ಅಂಜನಾದ್ರಿ, ಶ್ರೀರಾಮ್ ಸರ್ಕ್ಯೂಟ್ ಮಾಡುವುದಾಗಿ ಹೇಳಿದ್ದರು. ಆದರೆ ಅದನ್ನು ನೆನಪು ಮಾಡಲು ಎಂಪಿ ಸಂಗಣ್ಣ ವಿಫಲರಾದರಾ? ಅವರು ಏಕೆ ಮರೆತರೆಂದು ಗೊತ್ತಾಗಲಿಲ್ಲ. ಕೊಪ್ಪಳದ ಧ್ವನಿ ದೆಹಲಿಯಲ್ಲಿ ಕೇಳಿಬರಲು ಆಶೀರ್ವಾದ ಮಾಡಬೇಕು. ಕೊಪ್ಪಳ ಲೋಕಸಭೆ ವ್ಯಾಪ್ತಿಯಲ್ಲಿ 100 ಬಹಿರಂಗ ಸಭೆಗಳನ್ನು ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಕೆಆರ್ ಪಿಪಿ 15 ಜಿಲ್ಲೆಗಳಲ್ಲಿ ಪಕ್ಷವನ್ನು ಅಚ್ಚುಕಟ್ಟಾಗಿ ಸಂಘಟನೆ ಮಾಡಿ ಅಧಿಕಾರಕ್ಕೆ ತರುತ್ತೇನೆ ಎಂದು ಜನಾರ್ದನ ರೆಡ್ಡಿ ಹೇಳಿದರು.