ಕಲಬುರಗಿ: ಪಕ್ಷ ಎಲ್ಲ ಸ್ಥಾನಮಾನದ ಅಧಿಕಾರ ಕೊಟ್ಟರೂ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಿರುವ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಅವರಿಂದ ಬಿಜೆಪಿ ಪಕ್ಷಕ್ಕೆ ಯಾವುದೇ ಹಾನಿ ಇಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ಮಾಜಿ ಸಚಿವ ಮಾಲೀಕಯ್ಯ ವಿ. ಗುತ್ತೇದಾರ ಹೇಳಿದರು.
ಕಾಂಗ್ರೆಸ್ ಪಕ್ಷದಿಂದ ಅನ್ಯಾಯವಾಗಿದೆ ಎಂದು ಅಸಮಾಧಾನಗೊಂಡು ಬಿಜೆಪಿ ಸೇರಿದ ಮೇಲೆ ಹಳೇ ಎತ್ತು ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮನೆಗೆ ಕಳುಹಿಸಿ ಎಂದು ತೊಡೆ ಕಟ್ಟಿ ಎಂಬಿತ್ಯಾದಿ ಟೀಕೆ ಮಾಡಿ ಈಗ ಕಾಂಗ್ರೆಸ್ ಸೇರಿರುವುದಕ್ಕೆ ಯಾವ ನೈತಿಕತೆ ಇದೆ? ಎಂದು ಪತ್ರಿಕಾಗೋಷ್ಠಿಯಲ್ಲಿ ಖಾರವಾಗಿ ಪ್ರಶ್ನಿಸಿದರು.
ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಮಾಧ್ಯಮದ ಮುಂದೆ ತೊಡೆ ತಟ್ಟಿ ಪ್ರಿಯಾಂಕ್ ಖರ್ಗೆ ಸೋಲಿಸುತ್ತೇನೆಂದು ಹೇಳಿದ್ದರು. ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ ಅಂತ ಹೇಳಿ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಖಂಡನೀಯವಾಗಿದೆ. ಚಿಂಚನಸೂರ ಹೋಗುವುದರಿಂದ ಪಕ್ಷಕ್ಕೆ ಕಿಂಚಿತ್ತೂ ಹಾನಿ ಇಲ್ಲ. ಸಮಾಜಕ್ಕೆ ಪೂರಕವಾದ ಕೆಲಸ ಚಿಂಚನಸೂರ ಮಾಡಿಲ್ಲ. ಅಧಿಕಾರಕ್ಕಾಗಿ ಮಾತ್ರ ಸಮಾಜ ಬಳಕೆ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.
ಅವರು ಕೇವಲ ಚುನಾವಣೆ ಸಂದರ್ಭದಲ್ಲಿ ಅಷ್ಟೇ ಸಕ್ರಿಯವಾಗಿರುವ ವ್ಯಕ್ತಿ ಚಿಂಚನಸೂರ. ಬಿಜೆಪಿ ಪಕ್ಷ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ಸಚಿವ ಸಂಪುಟ ಸ್ಥಾನಮಾನದೊಂದಿಗೆ ನೀಡಿರುವ ಜತೆಗೆ ವಿಧಾನ ಪರಿಷತ್ ಸ್ಥಾನ ನೀಡಲಾಗಿದೆ. ಪ್ರಮುಖವಾಗಿ ಕೋಲಿ ಸಮಾಜದ ತಳವಾರ ಎಸ್ಟಿಗೆ ಸೇರಿಸಲಾಗಿದೆ. ಪ್ರಮುಖವಾಗಿ ಸಮಾಜದ ಹೆಸರಿನಲ್ಲಿ ಎಲ್ಲ ಅವರೇ ಪಡೆದಿದ್ದಾರೆ. ಚಿಂಚನಸೂರ ಬಿಜೆಪಿ ಬಿಟ್ಟಿರುವುದಕ್ಕೆ ಅವರದ್ದೇ ಸಮಾಜದ ಪ್ರಮುಖರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಚಿಂಚನಸೂರ ತಮ್ಮ ರಾಜಕೀಯದ ಅಂತ್ಯ ತಾವೇ ಕಂಡುಕೊಂಡಿದ್ದಾರೆ ಎಂದು ಗುತ್ತೇದಾರ ವಾಗ್ದಾಳಿ ನಡೆಸಿದರು.
ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ: ತಾವು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಮಾಧ್ಯಮದಲ್ಲಿ ಅಸತ್ಯದ ಸುದ್ದಿ ಪ್ರಸಾರವಾಗುತ್ತಿದೆ. ಕಳೆದ ಬಾರಿ ನಾನು ಸೋತಿದ್ದರೂ ಲೋಕಸಭೆಯಲ್ಲಿ 35 ಸಾವಿರ ಲೀಡ್ ಕೊಡಲಾಗಿದೆ.ಈ ಬಾರಿಯೂ ಅಫಜಲಪೂರದಲ್ಲಿ ಬಿಜೆಪಿ ನೂರಕ್ಕೆ ನೂರು ಬಿಜೆಪಿ ವಿಜಯ ಪತಾಕೆ ಹಾರಿಸುತ್ತೆ ಅನುಮಾನವೇ ಇಲ್ಲ. ಪ್ರಮುಖವಾಗಿ ಆದರೆ ನಾನು ಬಿಜೆಪಿ ಬಿಡುತ್ತೇನೆ ಎನ್ನುವುದು ಸತ್ಯಕ್ಕೆ ದೂರದ ಸುದ್ದಿ. ನಾನು ಚಿಂಚನಸೂರ ಥರ ಅಲ್ಲ. ಏನು ಹೇಳಿದ್ದೇನೋ ಅದನ್ನೆ ಮಾಡಿದ್ದು.. ಈಗ ಏನು ಹೇಳುತ್ತೇನೋ ಅದನ್ನೇ ಮಾಡುತ್ತೇನೆ.ನನಗೆ ಕಾಂಗ್ರೆಸ್ ನಿಂದ ಯಾರೂ ಸಂಪರ್ಕ ಮಾಡಿಲ್ಲ. ನಾನು ಬೆಂಕಿ ಇದ್ದ ಹಾಗೆ. ನೇರ ನುಡಿ. ನನಗೆ ಸಂಪರ್ಕ ಮಾಡುವ ಧೈರ್ಯ ಕಾಂಗ್ರೆಸ್ ಗೆ ಇಲ್ಲ. ನನ್ನ ಕೊನೆ ಉಸಿರಿರುವವರೆಗೆ ಬಿಜೆಪಿಯಲ್ಲಿಯೇ ಇರುವೆ. ನನಗೆ ಸಿಎಂ ಮಾಡ್ತೆನೆ ಅಂದ್ರೂ ನಾನು ಬೇರೆ ಪಕ್ಷಕ್ಕೆ ಹೋಗಲಾರೆ ಎಂದು ಮಾಲೀಕಯ್ಯ ಸ್ಪಷ್ಟ ಪಡಿಸಿದರು.
ಕೋವಿಡ್ ಸಂದರ್ಭದಲ್ಲಿ ಅಫಜಲಪುರ ಕ್ಷೇತ್ರಕ್ಕೆ ತನ್ನ ಉತ್ತರಾಧಿಕಾರಿ ಸಹೋದರ ನಿತಿನ್ ಗುತ್ತೇದಾರ ಎಂದು ಹೇಳಿದ್ದೇ, ಆದರೆ ಕ್ಷೇತ್ರದಲ್ಲಿ ಜನ ಇದೊಂದು ಸಲ ತಾವೇ ನಿಲ್ಲಿ ಎಂದು ಹೇಳುತ್ತಿರುವುದರಿಂದ ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿ ಬರಲಾಗಿದೆ. ಒಂದು ವೇಳೆ ನಿತಿನ್ ಗುತ್ತೇದಾರಗೆ ಬಿಜೆಪಿ ಟಿಕೆಟ್ ಸಿಕ್ಕರೆ ನಾನು ಕೆಲಸ ಮಾಡುತ್ತೇನೆ. ನನಗೆ ಟಿಕೆಟ್ ಸಿಕ್ಕರೆ ನಿತಿನ್ ಮಾಡ್ತಾನೆ. ಇದರಲ್ಲಿ ಪಕ್ಷ ದೊಡ್ಡದು ಎಂದು ಹೇಳಿದರು.
ಬಿಜೆಪಿಯವರೇ ಸಹೋದರನನ್ನು ಎತ್ತಿ ಕಟ್ಟುತ್ತಿದ್ದಾರೆ. ಇದನ್ನೆಲ್ಲ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ. ತಮಗೂ ಸಹ ಎಂಎಲ್ಸಿ ಆಗದಂತೆ ತಡೆಯೊಡ್ಡಿದರು. ತಾವು ಖಡಕ್. ಯಾರಿಗೂ ಬಗ್ಗೋದಿಲ್ಲ ಎಂಬುದು ಗೊತ್ತು.ಹೀಗಾಗಿ ಸಹೋದರಗೆ ಎತ್ತಿ ಕಟ್ಟುತ್ತಿದ್ದಾರೆ ಎಂದು ಟೀಕಿಸಿದರು.
ಮುಖಂಡರಾದ ಶಿವಕಾಂತ ಮಹಾಜನ್, ಶೋಭಾ ಬಾಣಿ, ವಿಜಯಕುಮಾರ ಹಳಕಟ್ಟಿ ಉಪಸ್ಥಿತರಿದ್ದರು.