Advertisement

Election: ರಾಜ್ಯದ ಜಿ.ಪಂ, ತಾ.ಪಂ. ಚುನಾವಣೆಗೆ ಮತಪತ್ರ ಬಳಕೆ: ಚುನಾವಣ ಆಯೋಗ

03:03 AM Jan 14, 2025 | Team Udayavani |

ಬೆಳಗಾವಿ: ರಾಜ್ಯದಲ್ಲಿ ಜಿ.ಪಂ., ತಾ.ಪಂ. ಚುನಾವಣೆಗೆ ಸಿದ್ಧತೆ ನಡೆದಿದ್ದು, ಎಪ್ರಿಲ್‌, ಮೇ ತಿಂಗಳಿನಲ್ಲಿ ಚುನಾವಣೆ ನಡೆಸಲಾಗುವುದು. ಇವಿಎಂ ಹ್ಯಾಕ್‌ ಗೊಂದಲ ಮೂಡಿರುವುದರಿಂದ ಮತಪತ್ರದಲ್ಲಿ ಮತದಾನ ನಡೆಸಲಾಗುವುದು ಎಂದು ರಾಜ್ಯ ಚುನಾವಣ ಆಯೋಗದ ಆಯುಕ್ತ ಜಿ.ಎಸ್‌. ಸಂಗ್ರೇಶಿ ತಿಳಿಸಿದರು.

Advertisement

ರಾಜ್ಯದ 31 ಜಿಲ್ಲೆಗಳ ಜಿ.ಪಂ. ಹಾಗೂ ತಾ.ಪಂ. ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 18 ವರ್ಷ ತುಂಬಿದ ಮತದಾರರನ್ನು ಪಟ್ಟಿಯಲ್ಲಿ ಸೇರಿಸುವ ಕಾರ್ಯ ನಡೆದಿದೆ. ಜಿಲ್ಲಾ ಪುನರ್‌ ವಿಂಗಡಣ ಆಯೋಗದ ವರದಿ ಹಾಗೂ ಇನ್ನಿತರ ಕಾರಣಗಳಿಂದಾಗಿ ಈಗಾಗಲೇ ಚುನಾವಣೆ ಸಾಕಷ್ಟು ವಿಳಂಬವಾಗಿದ್ದು, ಶೀಘ್ರವೇ ಚುನಾವಣೆ ನಡೆಸಲಾಗುವುದು. ಸಂಬಂಧಪಟ್ಟ ಇಲಾಖೆಗಳಿಗೆ ಮೀಸಲಾತಿ ಪಟ್ಟಿ ಕೊಡಲು ತಿಳಿಸಲಾಗಿದ್ದು, ಅವು ಲಭ್ಯವಾದ ಅನಂತರ ಎಪ್ರಿಲ್‌, ಮೇ ತಿಂಗಳಲ್ಲಿ ಚುನಾವಣೆ ನಡೆಸಲಾಗುವುದು ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಚುನಾವಣ ದಿನಾಂಕ ಘೋಷಣೆಯಾಗಿ ಮತಪತ್ರಗಳನ್ನು ಹಿಂಪಡೆಯುವ ದಿನಾಂಕದವರೆಗೆ 18 ವರ್ಷ ತುಂಬಿದವರು ಮತದಾರರಾಗಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಭ್ರಷ್ಟಾಚಾರ ಮುಕ್ತ ಚುನಾವಣೆ ನಡೆಸಲು ಎಲ್ಲರೂ ಸಹಕರಿಸಬೇಕು. ಈ ನಿಟ್ಟಿನಲ್ಲಿ ಆಯೋಗವೂ ಕಟ್ಟುನಿಟ್ಟಿನ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳೇ ಚುನಾವಣ ಅಧಿಕಾರಿ. ತಾಲೂಕುಗಳಲ್ಲಿ ತಹಶೀಲ್ದಾರ್‌ಗಳು ಚುನಾವಣ ಅಧಿಕಾರಿಗಳಾಗಿರುವುದರಿಂದ ಜಿಲ್ಲೆ, ತಾಲೂಕುಗಳಿಗೆ ಭೇಟಿ ನೀಡಿ ಅವರೊಂದಿಗೆ ಚರ್ಚಿಸಿ ಚುನಾವಣೆಗಳು ಸುಗಮವಾಗಿ ಜರುಗುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುವುದು ಎಂದರು.

ಮತಪತ್ರ ಬಳಕೆ
ರಾಜ್ಯ ಚುನಾವಣ ಆಯೋಗ ಸ್ವತಂತ್ರವಾಗಿದ್ದು, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳಂತೆ ಚುನಾವಣೆ ನಡೆಸಲಾಗುವುದು. ವಿದ್ಯುನ್ಮಾನ ಮತಯಂತ್ರಗಳ ಕುರಿತು ಅನೇಕ ಟೀಕೆಗಳು ಕೇಳಿ ಬರುತ್ತಿದ್ದು, ಜನರಲ್ಲಿ ಮೂಡಿರುವ ಸಂಶಯಗಳನ್ನು ಹೊಗಲಾಡಿಸಲು ಜಾಗೃತಿ ಕಾರ್ಯ ನಡೆದಿದೆ. ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಮನವೊಲಿಸಿ ಜಿ.ಪಂ., ತಾ.ಪಂ. ಚುನಾವಣೆಗಳಲ್ಲಿ ಮತಪತ್ರ ಬಳಸಲಾಗುವುದು. ಇವಿಎಂ ಹ್ಯಾಕ್‌ ಮಾಡಲಾಗುತ್ತಿದೆ ಎಂಬ ಸಂಶಯವನ್ನು ತಿರಸ್ಕರಿಸಿ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.