ಮೈಸೂರು: ಚಾಮರಾಜನಗರ ಕ್ಷೇತ್ರದ ವಿಚಾರದಲ್ಲಿ ನನ್ನ ಅಭಿಪ್ರಾಯವನ್ನು ವಿಜಯೇಂದ್ರರಿಗೆ ಹೇಳಿದ್ದೇನೆ. ಮಾರ್ಚ್ 17 ರ ನಂತರ ಚುನಾವಣೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಮುಂದಿನ ಚುನಾವಣೆಯಲ್ಲಿ ಬಹಿರಂಗ ಪ್ರಚಾರಕ್ಕೆ ಹೋಗುವುದಿಲ್ಲ. ಆದರೆ ಬಿಜೆಪಿಯನ್ನು ಬೆಂಬಲಿಸಿ ಎಂದು ಎಲ್ಲರನ್ನೂ ಕೇಳಿಕೊಳ್ಳುತ್ತೇನೆ ಎಂದು ಸಂಸದ ವಿ ಶ್ರೀನಿವಾಸ್ ಪ್ರಸಾದ್ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ನನ್ನ ಅಳಿಯ ಡಾ.ಮೋಹನ್ ಆಕಾಂಕ್ಷಿ ಎನ್ನುವುದು ಗೊತ್ತಿತ್ತು. ಈಗ ಹರ್ಷವರ್ಧನ್ ಆಕಾಂಕ್ಷಿ ಎಂಬುದು ಗೊತ್ತಾಗಿದೆ. ಈಗ ನಮ್ಮ ಮನೆಯಲ್ಲಿ ಇಬ್ಬರು ಆಕಾಂಕ್ಷಿಗಳಿದ್ದಾರೆ. ಅವರಿಬ್ಬರೂ ತುಂಬಾ ಅನ್ಯೋನ್ಯವಾಗಿದ್ದಾರೆ. ಯಾರಿಗೆ ಟಿಕೆಟ್ ಕೊಟ್ಟರು ಹೊಂದಾಣಿಕೆಯಿಂದ ಕೆಲಸ ಮಾಡುತ್ತಾರೆ ಎಂದರು.
ಸಿದ್ದರಾಮಯ್ಯ ಬಾವಿಯೊಳಗಿನ ಕಪ್ಪೆ. ಮೋದಿ ಸಮುದ್ರದಲ್ಲಿ ಈಜಿದ ಮನುಷ್ಯ. ಅವರಿಗೂ ಇವರಿಗೂ ಹೋಲಿಕೆ ಎಲ್ಲಿದೆ. ಸುಮ್ಮನೆ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಕಿರುಚಿವುದನ್ನು ಕಲಿತಿದ್ದಾನೆ. ಸಿದ್ದರಾಮಯ್ಯರಿಗೂ ಜಮೀರ್ ಗೂ ಏನು ವ್ಯತ್ಯಾಸವಿದೆ ಹೇಳಿ. ಇಬ್ಬರು ಸುಮ್ಮನೆ ಕೂಗುತ್ತಾರೆ. ಇವರು ಹೆರಿಗೆ ವಾರ್ಡ್ ನಲ್ಲಿ ಕಿರುಚಿದರೆ ಹೆರಿಗೆಯೆ ಆಗಿಬಿಡುತ್ತದೆ. ಆ ರೀತಿಯಲ್ಲಿ ಕೂಗುವುದನ್ನು ಕಲಿತಿದ್ದಾರೆ. ನಿರ್ಮಲಾ ಸೀತರಾಮನ್ ಬಗ್ಗೆ ರಾಷ್ಟ್ರಪತಿ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇಂತಹ ಸಿದ್ದರಾಮಯ್ಯ ಬಗ್ಗೆ ಏನು ಮಾತನಾಡಲಿ. ಗ್ಯಾರಂಟಿಯಿಂದ ಗೆದ್ದು ಅದೇ ಗುಂಗಿನಲ್ಲಿದ್ದಾರೆ. ಮೋದಿ ಸರ್ಕಾರ ಮಾಡಿರುವ ಜನಪರ ಯೋಜನೆಗಳ ಮುಂದೆ ಇದೆಲ್ಲ ನಡೆಯುತ್ತಾ ನೋಡೋಣ ಎಂದರು.
ನಮ್ಮ ಹಕ್ಕು ತೆರಿಗೆ ಎಂದು ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿದ್ದಾರೆ. ನಮ್ಮ ತೆರಿಗೆಯನ್ನು ಕೇಳುವ ರೀತಿಯಲ್ಲಿ ಕೇಳಿದರೆ ನಮ್ಮ ತೆರಿಗೆ ಬರುತ್ತದೆ. ಯಾವ ಸರ್ಕಾರವು ನಮಗೆ ಅನ್ಯಾಯ ಮಾಡುವುದಿಲ್ಲ. ನಾನು ಹಿಂದೆ ಕಂದಾಯ ಸಚಿವನಾಗಿದ್ದಾಗಲು ಹೋಗಿ ಕೇಳಿದ್ದಕ್ಕೆ ನಮ್ಮ ಹಣ ನಮಗೆ ಬಂದಿತ್ತು ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು.