Advertisement

ಕರ್ನಾಟಕವನ್ನು 5 ವರ್ಷದಲ್ಲಿ ಕಲ್ಯಾಣ ರಾಜ್ಯವಾಗಿಸುವೆ

03:57 PM May 08, 2022 | Team Udayavani |

ಹರಿಹರ: ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನತೆ ಸಂಪೂರ್ಣ ಬಹುಮತದ ಅಧಿಕಾರ ನೀಡಿದರೆ ಐದು ವರ್ಷಗಳಲ್ಲಿ ಕರ್ನಾಟಕವನ್ನು ಕಲ್ಯಾಣ ರಾಜ್ಯವನ್ನಾಗಿ ಮಾಡುತ್ತೇನೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಾಗ್ಧಾನ ಮಾಡಿದರು.

Advertisement

ಜನತಾ ಜಲಧಾರೆ ರಥಯಾತ್ರೆ ನಿಮಿತ್ತ ಶನಿವಾರ ನಗರದಲ್ಲಿ ನಡೆದ ಬೃಹತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಉಚಿತ ಶಿಕ್ಷಣ, ಆರೋಗ್ಯ, ರೈತರ ಉನ್ನತಿ, ಯುವಜನತೆಗೆ ಸ್ವ ಉದ್ಯೋಗ, ಪ್ರತಿ ಕುಟುಂಬಕ್ಕೂ ಸ್ವಂತ ಸೂರು ಒದಗಿಸುವ ಪಂಚರತ್ನ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.

ಯುಕೆಜಿಯಿಂದ ಪಿಯುಸಿವರೆಗೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೆ ಉಚಿತ ಶಿಕ್ಷಣ, ಪ್ರತಿ ಗ್ರಾಪಂನಲ್ಲಿ 24 ಗಂಟೆ ಸೇವೆ ನೀಡುವ 30 ಬೆಡ್‌ಗಳ ಆಸ್ಪತ್ರೆ, ರೈತರ ಸಮಗ್ರ ಅಭಿವೃದ್ಧಿ, ಯುವಜನತೆ ಸ್ವಯಂ ಉದ್ಯೋಗ ಆರಂಭಿಸಿ ಇತರರಿಗೆ ಉದ್ಯೋಗ ನೀಡಲು ಶೇ. 90 ಸಹಾಯಧನದ ಸಾಲ ಸೌಕರ್ಯ ಯೋಜನೆ, ಪ್ರತಿಯೊಂದು ಬಡ ಕುಟುಂಬವೂ ಉಚಿತವಾಗಿ ಸ್ವಂತ ಮನೆ ಹೊಂದುವ ಯೋಜನೆ ರೂಪಿಸಲಾಗಿದೆ. ಸ್ತ್ರೀಶಕ್ತಿ ಸಂಘಗಳ 1 ಸಾವಿರ ಕೋಟಿ ಸಾಲ ಮನ್ನಾ ಸೇರಿದಂತೆ ಉದ್ದೇಶಿತ ಯೋಜನೆ ಜಾರಿಗೊಳಿಸದಿದ್ದರೆ ಮತ್ತೆಂದೂ ಮತ ಕೇಳಲು ಬರುವುದಿಲ್ಲ ಎಂದು ಹೇಳಿದರು.

ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಕಾಮಗಾರಿಯಲ್ಲಿ 40 ಪರ್ಸೆಂಟ್‌ ಕಮಿಷನ್‌ ಕೊಡಬೇಕಿದೆ. ಪಿಎಸ್‌ಐಗೆ, ಅಬಕಾರಿ ಡಿಸಿಗೆ ಬಿಜೆಪಿ ಶಾಸಕರು ಬೆದರಿಸಿದ್ದಾರೆ.

ಅಧಿಕಾರಿಗಳು ಪ್ರಜೆಗಳ ಸೇವಕರೇ ಹೊರತು ಶಾಸಕರ ಗುಲಾಮರಲ್ಲ. ಈ ಸರ್ಕಾರದ ನಡವಳಿಕೆಯೇ ಸರಿಯಿಲ್ಲ ಎಂದು ಟೀಕಿಸಿದರು.

Advertisement

ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬಿಜೆಪಿ ಬೆಂಕಿ ಹಚ್ಚಿದರೆ, ಕಾಂಗ್ರೆಸ್‌ ಪೆಟ್ರೋಲ್‌ ಸುರಿಯುತ್ತಿದೆ. ಬಿಜೆಪಿ ಅಧಿಕಾರಕ್ಕಾಗಿ ಅಮಾಯಕ ಯುವಕರಿಗೆ ಧರ್ಮದ ಅಮಲು ಏರಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಪಕ್ಷವನ್ನು ಬಿಜೆಪಿ “ಬಿ’ ಟೀಂ ಎಂದು ಅಪಪ್ರಚಾರ ಮಾಡಿದ್ದು ರಾಜ್ಯದಲ್ಲಿ ಪಕ್ಷದ ಹಾಗೂ ಹರಿಹರದಲ್ಲಿ ಶಿವಶಂಕರ್‌ ಸೋಲಿಗೆ ಕಾರಣವಾಯಿತು. ಹರಿಹರದಲ್ಲಿ ಎಚ್.ಎಸ್. ಶಿವಶಂಕರ್‌, ರಾಜ್ಯದಲ್ಲಿ ತಾವು ಅಧಿಕಾರಕ್ಕೆ ಬಂದರೆ ಹರಿಹರದ ಬೈರನಪಾದ, ಕರೆ ಭರ್ತಿ, ಮೆಡಿಕಲ್‌, ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆ ಇತ್ಯಾದಿ ಯೋಜನೆಗಳಿಗೆ ಪ್ರಮುಖ ಆದ್ಯತೆ ನೀಡಲಾಗುವುದು ಎಂದರು.

ಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, 5 ವರ್ಷ ಜೆಡಿಎಸ್‌ಗೆ ನೀಡಿದರೆ, 25 ವರ್ಷ ಜೆಡಿಎಸ್‌ ಅಧಿಕಾರದಲ್ಲಿರುತ್ತದೆ. ದೇವೇಗೌಡರಂತೆ ಕುಮಾರಸ್ವಾಮಿಯವರನ್ನು ಸಹ ದೆಹಲಿಗೆ ಕರೆಯುತ್ತಾರೆ. ಕೆಂಪುಕೋಟೆ ಮೇಲೆ ಮತ್ತೆ ಕನ್ನಡಿಗರ ಕಹಳೆ ಮೊಳಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಹುಟ್ಟಿದ್ದು ಹರಿಹರ ಸಮೀಪದ ಐರಣಿ ಗ್ರಾಮದಲ್ಲಿ. ವೀರಪ್ಪ, ಎಚ್‌. ಶಿವಪ್ಪ ಕಾಲದಿಂದಲೂ ಹರಿಹರದಲ್ಲಿ ಪ್ರಚಾರ ಮಾಡಿದ್ದೇನೆ. ಕಳೆದ ಚುನಾವಣೆಯಂತೆ ನಿರ್ಧಾರ ತೆಗೆದುಕೊಳ್ಳಬಾರದು. ಸಾಮರಸ್ಯ ಸಾಧಿಸುವ ಪ್ರಾದೇಶಿಕ ಪಕ್ಷಕ್ಕೆ ಮತ ನೀಡಬೇಕು. ಕುಮಾರಣ್ಣ ಎಲ್ಲಾ ಜಾತಿ, ಮತ, ಪಂಥದವರನ್ನು ಒಟ್ಟುಗೂಡಿಸಿ ವಿಧಾನಸೌಧವನ್ನು ಬಸವಣ್ಣನ ಕಾಲದ ಅನುಭವ ಮಂಟಪ ಮಾಡುತ್ತಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಚ್.ಎಸ್. ಶಿವಶಂಕರ್‌, ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಹಾಗೂ ರಾಷ್ಟ್ರೀಯ ಪಕ್ಷಗಳು ಅಸ್ತಿತ್ವ ಕಳೆದುಕೊಂಡಿವೆ. ಜನತಾ ಜಲಧಾರೆ ಕಾರ್ಯಕ್ರಮ ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದ್ದು ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಗೆಲುವು ಸಾಧಿಸಲಿದೆ ಎಂದರು.

ಇಬ್ರಾಹಿಂ ಜೆಡಿಎಸ್‌ ಸೇರಿದ್ದು ಕುಮಾರಣ್ಣಗೆ ಆನೆ ಬಲ ತಂದಿದೆ. ಜೋಡೆತ್ತಿನಂತೆ ಇಬ್ಬರೂ ರಾಜ್ಯಾದ್ಯಂತ ಸಂಚರಿಸುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಮಿಷನ್‌ 123 ಯಶಸ್ವಿಯಾಗುವುದಲ್ಲಿ ಅನುಮಾನವಿಲ್ಲ. ಮತ್ತೂಮ್ಮೆ ತಮ್ಮನ್ನು ಆಯ್ಕೆ ಮಾಡಿದರೆ ಬೈರನಪಾದ ಯೋಜನೆ, ಅಗಸನಕಟ್ಟೆ ಕರೆ ಅಭಿವೃದ್ಧಿ, ಎಲ್ಲಾ ಕೆರೆಗಳಿಗೆ ನೀರು ತುಂಬಿಸುವುದು, ಸರ್ಕಾರಿ ಮೆಡಿಕಲ್‌, ಇಂಜಿನಿಯರಿಂಗ್‌ ಕಾಲೇಜು ಸೇರಿದಂತೆ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸುತ್ತೇನೆ ಎಂದು ತಿಳಿಸಿದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ, ವಿಧಾನ ಪರಿಷತ್‌ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಮಾಜಿ ಸಚಿವ ನಬಿ ಸಾಬ್‌, ಅಮನುಲ್ಲಾ ಸಾಬ್‌, ಗಣೇಶ್‌ ದಾಸಕರಿಯಪ್ಪ, ಯೋಗೀಶ್‌, ಮನ್ಸೂರ್‌ ಅಲಿ ಖಾನ್‌, ಬೀರೇಶ್‌, ಗಂಗಾಧರಪ್ಪ, ಪಾರ್ವತಿ, ಶಿವಮೂರ್ತಿ, ಕೊಟ್ರೇಶ್‌ ಕೆ., ಸೋಮಶೇಖರ್‌, ಶೃತಿ ತ್ಯಾವಣಗಿ, ಚಂದ್ರಶೇಖರಪ್ಪ, ಬಸವಣ್ಣ ಪೂಜಾರ್‌, ಪರಮೇಶ್ವರಪ್ಪ, ಎಂ. ಮುರುಗೇಶಪ್ಪ, ಹೇಮಾವತಿ, ಲಕ್ಷ್ಮೀ ಆಚಾರ್‌, ವಾಮನಮೂರ್ತಿ, ಹಾಲಸ್ವಾಮಿ, ಮುರುಗೇಶಪ್ಪ ಗೌಡ, ರುದ್ರೇಶ್‌, ಅಬ್ದುಲ್‌ ರೆಹಮಾನ್‌ ಖಾನ್‌, ದಿನೇಶ್‌ ಬಾಬು, ದೇವರಾಜ್‌, ಬಂಡೇರ್‌ ತಿಮ್ಮಣ್ಣ, ಸುರೇಶ್‌, ಎಂ. ಚಂದ್ರಯ್ಯ, ಬಸವರಾಜಪ್ಪ ಜೆ. ಎಂ.ಜಿ. ತಿಮ್ಮಣ್ಣ, ಸಂಜೀವಪ್ಪ, ಚೆನ್ನಯ್ಯ, ಮಹಾಂತೇಶ್‌, ಟಿ.ಆರ್. ರಂಗಪ್ಪ, ವಿಜಯಕುಮಾರ್‌, ಡಿ. ಯಶೋಧರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next