Advertisement

ರಾಜ್ಯದ ಕೆ.ಎಲ್‌.ರಾಹುಲ್‌ಗೆ ಮತ್ತೂಂದು ಅವಕಾಶ ಸಿಗುತ್ತಾ?

04:57 AM Feb 15, 2019 | |

ಮುಂಬೈ: ವಿಶ್ವಕಪ್‌ ಪಂದ್ಯಾವಳಿಗೂ ಮುನ್ನ ತವರಿನಲ್ಲಿ ಕೊನೆಯ ಅಂತಾರಾಷ್ಟ್ರೀಯ ಸರಣಿ ಆಡಲಿರುವ ಭಾರತ, ಇನ್ನು ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ. ಕಾಂಗರೂ ವಿರುದ್ಧ 2 ಟಿ20 ಮತ್ತು 5 ಏಕದಿನ ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಇದಕ್ಕಾಗಿ ಶುಕ್ರವಾರ ಮುಂಬೈನಲ್ಲಿ ಸಭೆ ಸೇರಲಿರುವ ಆಯ್ಕೆಗಾರರು ತಂಡವನ್ನು ಪ್ರಕಟಿಸಲಿದ್ದಾರೆ.

Advertisement

ತೃತೀಯ ಆರಂಭಿಕನಾಗಿ ಮತ್ತೆ ಕೆ.ಎಲ್‌. ರಾಹುಲ್‌ ಅವರನ್ನು ಆರಿಸುವ ದಟ್ಟ ಸಾಧ್ಯತೆಗಳಿವೆ. ಫಾರ್ಮ್ ಕೊರತೆಯಿಂದ ಇತ್ತೀಚೆಗೆ ತಂಡದಿಂದ ಹೊರಬಿದ್ದಿದ್ದರೂ, ಅವರು ಪ್ರತಿಭಾವಂತನೆನ್ನುವುದು ಹಲವು ಬಾರಿ ಸಾಬೀತಾಗಿದೆ. ಜೊತೆಗೆ ತಂಡದ ವ್ಯವಸ್ಥಾಪಕ ಮಂಡಳಿ, ಮುಖ್ಯವಾಗಿ ನಾಯಕ ಕೊಹ್ಲಿಯ ಭರವಸೆ ವಿಶ್ವಾಸ ಹೊಂದಿದ್ದಾರೆ.

ಆದ್ದರಿಂದ ರಾಹುಲ್‌ಗೆ ಇನ್ನೊಂದು ಅವಕಾಶ ಸಿಗುವುದು ಖಚಿತ. ಇಲ್ಲಿ ರಾಹುಲ್‌ ಮಿಂಚಿದರೆ, ಅವರು ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲವಾದರೆ ಬಹುತೇಕ ಭಾರತ ತಂಡದಲ್ಲಿ ಮತ್ತೆ ಆಡುವ ಆಸೆಯನ್ನು ಕೈಬಿಡಬೇಕಾಗುತ್ತದೆ. ಏಕದಿನ ಸರಣಿಗೂ ಮುನ್ನ ಆಡಲಾಗುವ 2 ಟಿ20 ಪಂದ್ಯಗಳಿಗೆ ರೋಹಿತ್‌ ಶರ್ಮ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇರುವುದರಿಂದ ರಾಹುಲ್‌ ಮರಳುವುದು ಸುಲಭವಾಗಿದೆ. ಅವರು ಧವನ್‌ ಜೊತೆಗೆ ಇನಿಂಗ್ಸ್‌ ಆರಂಭಿಸಬಹುದು.

ಎಡಗೈ ವೇಗಿ ಯಾರು?: ಯಾರು ಇತ್ತೀಚಿನ ಆಸ್ಟ್ರೇಲಿಯ, ನ್ಯೂಜಿಲೆಂಡ್‌ ಪ್ರವಾಸದಲ್ಲಿ ಏಕದಿನ ಸರಣಿ ಗೆದ್ದು ಹೊಸ ಭರವಸೆ ಮೂಡಿಸಿದರೂ, ಭಾರತ ತಂಡ ಕೆಲವು ವಿಭಾಗಗಳಲ್ಲಿ ಸಾಕಷ್ಟು ಸುಧಾರಣೆ ಕಾಣಲಿಕ್ಕಿದೆ. ಮುಖ್ಯವಾಗಿ ಎಡಗೈ ವೇಗಿಗಳ ಆಯ್ಕೆಯೊಂದು ಅಂತಿಮಗೊಳ್ಳಬೇಕಿದೆ. ಇತ್ತೀಚೆಗೆ ದೇಶಿ ಕ್ರಿಕೆಟ್‌ನಲ್ಲಿ ಮತ್ತೆ ಮಿಂಚಲಾರಂಭಿಸಿದ ಜೈದೇವ್‌ ಉನಾಡ್ಕತ್‌ ಮತ್ತು ಈಗಾಗಲೇ ತಂಡದಲ್ಲಿರುವ ಖಲೀಲ್‌ ಅಹ್ಮದ್‌ ರೇಸ್‌ನಲ್ಲಿದ್ದಾರೆ. ಇವರಲ್ಲಿ ಯಾರು ಆಯ್ಕೆ ಆಗಬಹುದೆಂಬುದೊಂದು ಕುತೂಹಲ. 2010ರಲ್ಲೇ ಭಾರತ ತಂಡಕ್ಕೆ ಬಂದರೂ ಉನಾಡ್ಕತ್‌ ನಿರಂತರವಾಗಿ ಆಡುವ ಬಳಗದಲ್ಲಿ ಕಾಣಿಸಿಕೊಂಡವರಲ್ಲ. ಈ ಬಾರಿ ರಣಜಿಯಲ್ಲಿ ಉತ್ತಮ ಬೌಲಿಂಗ್‌ ಫಾರ್ಮ್ ಪ್ರದರ್ಶಿಸಿದ ಅವರು ನಾಯಕನಾಗಿ ಸೌರಾಷ್ಟ್ರವನ್ನು ಫೈನಲಿಗೂ ಕೊಂಡೊಯ್ದಿದ್ದರು. ಹೀಗಾಗಿ ತಂಡಕ್ಕೆ ಮರಳಿದರೂ ಅಚ್ಚರಿ ಇಲ್ಲ.

2ನೇ ವಿಕೆಟ್‌ ಕೀಪರ್‌ ಯಾರು?: ತಜ್ಞ ಬ್ಯಾಟ್ಸಮನ್  ಮತ್ತು ದ್ವಿತೀಯ ವಿಕೆಟ್‌ ಕೀಪರ್‌ ಸ್ಥಾನಕ್ಕಾಗಿ ರಿಷಭ್‌ ಪಂತ್‌-ದಿನೇಶ್‌ ಕಾರ್ತಿಕ್‌ ನಡುವೆ ದೊಡ್ಡ ಹೋರಾಟ ಕಂಡುಬರುವುದು ಖಂಡಿತ. ಹಾಗೆಯೇ ವಿಶ್ರಾಂತಿಯಲ್ಲಿದ್ದ ವಿರಾಟ್‌ ಕೊಹ್ಲಿ, ಜಸ್‌ಪ್ರೀತ್‌ ಬುಮ್ರಾ ಮರಳಿರುವುದರಿಂದ ಹಿಂದಿನ ಸರಣಿಯಲ್ಲಿ ಆಡಿದ್ದ ಇಬ್ಬರು ಜಾಗ ಖಾಲಿ ಮಾಡಲೇಬೇಕಿದೆ.

Advertisement

13 ಆಟಗಾರರ ಆಯ್ಕೆ ಅಂತಿಮ: ಒಂದು ಮೂಲದ ಪ್ರಕಾರ ಆಯ್ಕೆಗಾರರು ಈಗಾಗಲೇ ವಿಶ್ವಕಪ್‌ಗಾಗಿ 13 ಆಟಗಾರನ್ನು ಗುರುತಿಸಿ ಇಟ್ಟಿದ್ದಾರೆ. ಇವರೆಂದರೆ ಕೊಹ್ಲಿ, ಧವನ್‌, ರೋಹಿತ್‌, ರಾಯುಡು, ಧೋನಿ, ಜಾಧವ್‌, ಪಾಂಡ್ಯ, ವಿಜಯ್‌ ಶಂಕರ್‌, ಚಹಲ್‌, ಕುಲದೀಪ್‌, ಭುವನೇಶ್ವರ್‌, ಬುಮ್ರಾ ಮತ್ತು ಶಮಿ. ಈ ಪಟ್ಟಿಗೆ ಇನ್ನೂ 3-4 ಆಟಗಾರರನ್ನು ಸೇರಿಸಿ ಅಂತಿಮ ತಂಡವನ್ನು ಐಸಿಸಿಗೆ ರವಾನಿಸಬೇಕಿದೆ. ಹೀಗಾಗಿ ಆಸ್ಟ್ರೇಲಿಯ ಸರಣಿಗಾಗಿ ನಡೆಯುವ ತಂಡದ ಆಯ್ಕೆ ಹೆಚ್ಚು ಸ್ಪರ್ಧಾತ್ಮಕವಾಗಿರುವುದರಲ್ಲಿ ಅನುಮಾನವಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next