Advertisement

ನೆಲ-ಜಲ ಜಗಳ ಬದಿಗಿಟ್ಟು ಹೋರಾಟ, ವಿರಸ ಹಿಂದಿಕ್ಕಿ ಒಂದಾಗುವರೇ?

03:25 AM Jul 16, 2017 | Harsha Rao |

ಬೆಂಗಳೂರು: ಕಾವೇರಿ, ಬೆಳಗಾವಿ ವಿಚಾರದಲ್ಲಿ ಕರ್ನಾಟಕದೊಂದಿಗೆ ಸದಾ ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳು, ಭಾಷೆಯ ವಿಚಾರದಲ್ಲಿ ತಮ್ಮ ಗಡಿ-ನೀರಿನ ವಿವಾದ ಬದಿಗೊತ್ತಿ ಒಟ್ಟಾಗಿ ನಿಂತ ಅಪರೂಪದ ಸನ್ನಿವೇಶಕ್ಕೆ ವೇದಿಕೆಯಾಗಿದ್ದು ಬೆಂಗಳೂರು!

Advertisement

ಹೌದು, ಮೆಟ್ರೋದಲ್ಲಿ ಏಕೆ ಹಿಂದಿ ಬಳಕೆ ಮಾಡಲಾಗುತ್ತಿದೆ ಎಂದು ಹೋರಾಟಕ್ಕೆ ನಿಂತ ಕರ್ನಾಟಕದ ಸಂಘಟನೆಗಳಿಗೆ, ನೆರೆಯ ಕೇರಳ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಹಿಂದಿಯೇತರ ರಾಜ್ಯಗಳ ನಾಯಕರು
ಬೆಂಬಲ ನೀಡಿದರು. ಕರವೇ (ನಾರಾಯಣಗೌಡ ಬಣ) ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಈ ದುಂಡು ಮೇಜಿನ ಸಭೆಯಲ್ಲಿ ಈ ರಾಜ್ಯಗಳ ವಿವಿಧ ರಾಜಕೀಯ ಮತ್ತು ರಾಜಕಿಯೇತರ ಸಂಘಟನೆಗಳ ಗಣ್ಯರು
ಪಾಲ್ಗೊಂಡು ಮುಂದಿನ ದಿನಗಳಲ್ಲಿ ಒಗ್ಗೂಡಿ ಹೋರಾಟ ನಡೆಸುವ ಕೈಂಕರ್ಯ ಮಾಡಿದರು. ನಮ್ಮ ನಡುವಿನ ನೆಲ-ಜಲ ವಿಚಾರಗಳ ಕುರಿತ ಒಳಜಗಳ ಬದಿಗೊತ್ತೋಣ. ಹಿಂದಿ ಹೇರಿಕೆ ವಿರುದ್ಧ ಹೋರಾಟ ನಡೆಸೋಣ ಎಂದು ತೀರ್ಮಾನಿಸಿದ ನಾಯಕರೆಲ್ಲರೂ ಇನ್ನು ಮುಂದೆ ಹಿಂದಿಯಷ್ಟೇ ಅಲ್ಲ, ಆಡಳಿತದ ವಿಚಾರದಲ್ಲೂ ಕೇಂದ್ರ ಮೂಗು ತೂರಿಸಲು ಬಿಡಬಾರದು ಎಂದು ನಿರ್ಣಯ ಮಾಡಿದರು.

ದೇಶದ ಮೆಟ್ರೋ ರೈಲು ನಿಗಮಗಳಿಗೆ ಕೇಂದ್ರ ನಗರಾ ಭಿ ವೃದ್ಧಿ ಇಲಾಖೆ, ಹಿಂದಿ ಬಳಕೆಗೆ ಸಂಬಂಧಿಸಿದಂತೆ ತನ್ನ ಕಾರ್ಯವ್ಯಾಪ್ತಿ ಮೀರಿ ಕಾನೂನುಬಾಹಿರವಾಗಿ ಬರೆದಿರುವ ಪತ್ರವನ್ನು ಬೇಷರತ್‌ ಹಿಂಪಡೆಯಬೇಕು. 

“ನಮ್ಮ ಮೆಟ್ರೋ’ದಲ್ಲಿ ಕಂಡುಬರುತ್ತಿರುವ ಹಿಂದಿ ಫ‌ಲಕಗಳು, ಧ್ವನಿ ಆಧಾರಿತ ಪ್ರಕಟಣೆಗಳನ್ನು ಕೈಬಿಟ್ಟು, ರಾಜ್ಯ ಸರ್ಕಾರದ ಆಡಳಿತ ಭಾಷೆಗಳಾದ ಕನ್ನಡ ಮತ್ತು ಇಂಗ್ಲಿಷ್‌ ಮಾತ್ರ ಬಳಸಬೇಕು ಎಂದು ಆಗ್ರಹಿಸಲು ತೀರ್ಮಾನ ಕೈಗೊಳ್ಳಲಾಯಿತು.

ಒಕ್ಕೂಟ ವ್ಯವಸ್ಥೆಯ ಅಸ್ತಿತ್ವದ ಪ್ರಶ್ನೆ: ಮೊದಲಿಗೆ ಮಾತನಾಡಿದ್ದು ತಮಿಳುನಾಡಿ ಡಿಎಂಕೆ ಮುಖಂಡ ಹಾಗೂ ಭಾಷಾ ಸಮಾನತೆ ಹೋರಾಟ ಸಮಿತಿ ಸಂಚಾಲಕ ಸೆಂದಿಲ್‌ ನಾಥನ್‌. ಹಿಂದಿ ಹೇರಿಕೆ ಕೇವಲ ಭಾಷೆಯ ಪ್ರಶ್ನೆಯಷ್ಟೇ ಅಲ್ಲ, ಇದು ಒಕ್ಕೂಟ ವ್ಯವಸ್ಥೆಯ ಅಸ್ತಿತ್ವದ ಪ್ರಶ್ನೆಯಾಗಿದೆ. ಕೇಂದ್ರ ಸರ್ಕಾರ ಹಿಂದಿ ತೂರಿಸಿ, ಉಳಿದ ಪ್ರಾದೇಶಿಕ ಭಾಷೆಗಳನ್ನು ನಾಶ ಮಾಡುವ ಹುನ್ನಾರ ನಡೆಸುವಂತಿದೆ. ತಮಿಳುನಾಡಿನಲ್ಲಿ ದ್ವಿಭಾಷಾ ಸೂತ್ರವಷ್ಟೇ ಇದ್ದು, ತಮಿಳು ಮತ್ತು ಇಂಗ್ಲಿಷ್‌ ಮಾತ್ರ ಆಡಳಿತ ಭಾಷೆಗಳಾಗಿವೆ. ಆದರೂ ಕೇಂದ್ರ ಸರ್ಕಾರ ಹಿಂದಿಯಲ್ಲೇ ಪತ್ರ ವ್ಯವಹಾರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಸಂಸ್ಕೃತಿ ಮೇಲಿನ ಅತಿಕ್ರಮಣ: ಮಹಾರಾಷ್ಟ್ರ ನವನಿರ್ಮಾಣ ಸೇನೆ ಪ್ರಧಾನ ಕಾರ್ಯದರ್ಶಿ ಸಂದೀಪ್‌ ದೇಶಪಾಂಡೆ ಮಾತನಾಡಿ, ಹಿಂದಿ ಹೇರಿಕೆ ಮೂಲಕ ಸಂಸ್ಕೃತಿಯ ಅತಿಕ್ರಮಣವೂ ನಡೆಯುತ್ತಿದೆ. ನೆಲ-ಜಲದ ಬಗ್ಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಅನೇಕ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ಈ ಎರಡೂ ರಾಜ್ಯಗಳ ನಡುವೆ ಸಂಸ್ಕೃತಿಯ ಕೊಡು-ಕೊಳ್ಳುವಿಕೆ ಇದೆ. ಉದಾಹರಣೆಗೆ ಕುಮಾರ ಗಂಧರ್ವ, ಭೀಮಸೇನ ಜೋಷಿ ಹುಟ್ಟಿದ್ದು ಕರ್ನಾಟಕದಲ್ಲಾದರೂ,
ಮಹಾರಾಷ್ಟ್ರದಲ್ಲಿ ಜನಪ್ರಿಯರಾಗಿದ್ದಾರೆ. ಹಿಂದಿ ಹೇರಿಕೆ ಮತ್ತು ಭಾಷಾ ಸಮಾನತೆಗಾಗಿ ನಡೆಸಿರುವ ಹೋರಾಟಕ್ಕೆ
ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದರು. ಹಿಂದಿ ಹೇರಿಕೆ ಹಿಂದೆ ರಾಷ್ಟ್ರೀಯ ರಾಜಕೀಯ ಪಕ್ಷಗಳ ಅಜೆಂಡಾ ಅಡಗಿದೆ. ದಕ್ಷಿಣ ಭಾರತದಲ್ಲಿ ಯಾವುದೇ ರಾಷ್ಟ್ರೀಯ ಪಕ್ಷಗಳಿಗೆ ಬಹುಮತ ಸಿಗುವುದು ಕಡಿಮೆ.

ಈ ಆತಂಕ ಯಾವಾಗಲೂ ಆ ಪಕ್ಷಗಳಲ್ಲಿದೆ. ಇನ್ನೂ ಹಿಂದುಳಿದ ಉತ್ತರ ಭಾರತದವರು ಹೆಚ್ಚಿನ ಸಂಖ್ಯೆಯಲ್ಲಿ
ಮುಂದುವರಿದ ದಕ್ಷಿಣ ಭಾರತದ ಕಡೆಗೆ ವಲಸೆ ಹೋಗುತ್ತಿದ್ದಾರೆ. ಇಲ್ಲಿ ಹಿಂದಿ ವಿಸ್ತರಣೆ ಮಾಡಿ, ಆ ಮೂಲಕ “ಕಂಫ‌ರ್ಟ್‌ ಝೋನ್‌’ ಸೃಷ್ಟಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಆದರೆ, ದಕ್ಷಿಣ ಭಾರತದ ಹೆಬ್ಟಾಗಿಲು ಮಹಾರಾಷ್ಟ್ರವು ಹಿಂದಿ ಹೇರಿಕೆ ವಿರುದ್ಧ ಸದಾ ಕಾವಲು ಇರಲಿದೆ ಎಂದರು.

ವೈವಿಧ್ಯತೆಗೆ ಧಕ್ಕೆ ಬೇಡ: ಕೇರಳ ಸಂಘದ ಪದಾಧಿಕಾರಿ ಮನೋಹರ್‌ ಮಾತನಾಡಿ, ವೈವಿಧ್ಯತೆಗೆ ಧಕ್ಕೆ ತರುವಂತಹ ಯಾವುದೇ ಪ್ರಯತ್ನಗಳು ಖಂಡನೀಯ. ದೇಶದ ವೈವಿಧ್ಯತೆಯನ್ನು ಗೌರವಿಸಬೇಕು. ಆದರೆ, ಹೀಗೆ ಮತ್ತೂಂದು ಭಾಷೆಯನ್ನು ಹೇರುವ ಸಂಸ್ಕೃತಿ ಸರಿ ಅಲ್ಲ. ಆದ್ದರಿಂದ ಈ ಹೋರಾಟಕ್ಕೆ ಕೇರಳ ಸಂಘದ ಸಂಪೂರ್ಣ ಬೆಂಬಲ ಇರಲಿದೆ ಎಂದು ಹೇಳಿದರು.

ಬಂಗಾಳಿ ಮೂಲೆಗುಂಪು: ತಮ್ಮ ಅನುಪಸ್ಥಿತಿಯಲ್ಲಿ ವಿಡಿಯೋ ಸಂದೇಶ ಕಳುಹಿಸಿದ ಪಶ್ಚಿಮ ಬಂಗಾಳ ಲೇಖಕ ಗರಗ್‌ ಚಟರ್ಜಿ, “ಕೊಲ್ಕತ್ತ ಮೆಟ್ರೋದಲ್ಲಿ ಮೂರನೇ ಭಾಷೆಯಾಗಿ ಹಿಂದಿ ಬಂದಿತು. ಆದರೆ, ಇಂದು ಅಲ್ಲಿ ವಿತರಿಸುವ ಮೆಟ್ರೋ ಟಿಕೆಟ್‌ನಲ್ಲಿ ಬಂಗಾಳಿಯೇ ಇಲ್ಲ. ಹಿಂದಿ-ಇಂಗ್ಲಿಷ್‌ ಮಾತ್ರ ಇದೆ. ಈಗ ಇದೇ ಪ್ರಯತ್ನ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ನಡೆಯುತ್ತಿದೆ. ಇದರ ವಿರುದ್ಧ ಈಗಲೇ ಹೋರಾಟ ಕೈಗೆತ್ತಿಕೊಂಡಿರುವುದು ಸ್ವಾಗತಾರ್ಹ ಎಂದರು.
ಡಿಎಂಕೆ ಅಧ್ಯಕ್ಷ ರಾಮಸ್ವಾಮಿ, ಸಾಹಿತಿ ಡಾ.ಕಮಲಾ ಹಂಪನಾ, ಕವಿ ಡಾ.ಸಿದ್ದಲಿಂಗಯ್ಯ, ಕನ್ನಡ ಅಭಿವೃದ್ಧಿ
ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್‌. ದ್ವಾರಕನಾಥ್‌ ಮತ್ತಿತರರು ಮಾತನಾಡಿದರು.

ದೆಹಲಿಯಲ್ಲಿ ಸಮಾವೇಶ: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಮಾತನಾಡಿ, ಹಿಂದಿ ಹೇರಿಕೆ ವಿರುದ್ಧದ ಹೋರಾಟ ಇಷ್ಟಕ್ಕೇ ನಿಲ್ಲುವುದಿಲ್ಲ. ಮುಂದಿನ ದಿನಗಳಲ್ಲಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಬೃಹತ್‌ ಸಮಾವೇಶ ನಡೆಸಲಾಗುವುದು. ನಂತರ ದೆಹಲಿಯಲ್ಲಿ ಕೂಡ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next