Advertisement

ಯಡಿಯೂರಪ್ಪ ನೇತೃತ್ವದಲ್ಲಿಯೇ ಮುಂದಿನ‌ ಚುನಾವಣೆ: ಬಿ.ಸಿ.ಪಾಟೀಲ್

03:00 PM Nov 02, 2020 | keerthan |

ಹಾವೇರಿ: ಯಡಿಯೂರಪ್ಪ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ನಡೆಯಲಿದೆ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇನ್ನುಳಿದಿರುವ ಎರಡೂವರೆ ವರ್ಷ ಯಾರೂ ಸಹ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

Advertisement

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಮ್ಮನೆ ಪಕ್ಷದಲ್ಲಿ ಗೊಂದಲ ಸೃಷ್ಟಿಸುವುದು, ತಿರುಕನ‌ ಕನಸು, ಹಗಲುಗನಸು ಕಾಣುವುದನ್ನು ಕೆಲವರು ಮಾಡುತ್ತಿದ್ದು,ಅದೆಂದೂ ಸಾಧ್ಯವಿಲ್ಲ. ಯಡಿಯೂರಪ್ಪ ನೇತೃತ್ವದಲ್ಲಿಯೇ ಸ್ಥಳೀಯ ಸಂಸ್ಥೆ ಚುನಾವಣೆಯಿಂದ ಹಿಡಿದು ಎಲ್ಲಾ ಚುನಾವಣೆಗಳು ನಡೆಯಲಿವೆ ಎಂದರು‌.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರಿಂದ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಲು ಸಾಧ್ಯವಾಯಿತು. ಹೆಚ್.ಡಿ.ಕುಮಾರಸ್ವಾಮಿ ಜೊತೆ ಮೈತ್ರಿ ಸರ್ಕಾರದಲ್ಲಿಯೇ ಇದ್ದಿದ್ದರೆ ಸಿದ್ದರಾಮಯ್ಯ ಬಾಡಿಗೆ ಮನೆಯಲ್ಲಿ ಇದ್ದಂತಿರಬೇಕಾಗಿತ್ತು ಎಂದರು.

ಮನುಷ್ಯರನ್ನು ನಾಯಿಗೆ ಹೋಲಿಸುವುದು, ಬಂಡೆಗೆ ಹೋಲಿಸುವುದು, ಹುಲಿ, ಟಗರು ಎನ್ನುವುದು ಸಂಸ್ಕೃತಿಯಿಲ್ಲದ್ದು, ಸಿದ್ದರಾಮಯ್ಯ ಈ ರೀತಿ ಪದಗಳನ್ನು ಬಳುಸುವುದು ಸಂಸ್ಕೃತಿಗೆ ತಕ್ಕದ್ದಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ಓದಿ:ಗಂಗಾವತಿ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ: ತಾ.ಪಂ ಸುತ್ತ ಬಿಗುವಿನ ವಾತಾವರಣ

Advertisement

ಸಿದ್ದರಾಮಯ್ಯಗೆ ತನ್ನ ವಿರೋಧ ಪಕ್ಷದ ಸ್ಥಾನ ಎಲ್ಲಿ ಅಲ್ಲಾಡಿ ಹೋಗುತ್ತದೆಯೋ ಎಂಬ ಭಯವಿದೆ‌. ಮನುಷ್ಯರನ್ನು ರಾಜಕೀಯವಾಗಿ ಸಮಾಧಿ ಮಾಡುವುದು, ನಾಯಿ ಎನ್ನುವುದು ಸಿದ್ದರಾಮಯ್ಯ ಹಾಗೂ ಡಿಕೆಶಿ ಘನತೆಗೆ ಸೂಕ್ತವಲ್ಲ‌. ನಾಯಿಗೆ ನಿಯತ್ತು ಇರುತ್ತದೆ. ಇವರು ಸಾಕಿರುವ ನಾಯಿಗಳೆಲ್ಲ ಬಹುಶಃ ಕಚ್ಚುವ ನಾಯಿಗಳೇ ಇರಬೇಕು. ಒಳ್ಳೆಯ ನಾಯಿಗಳನ್ನು ಸಾಕಿದ್ದರೆ ಈ ರೀತಿ ದುಃಸ್ಥಿತಿ ಇವರಿಗೆ ಬರುತ್ತಿರಲಿಲ್ಲ. ಹದಿನೇಳು ಜನ ರಾಜಕೀಯ ಸಮಾಧಿಯಾಗುತ್ತಾರೆ ಎಂದು ಡಿಕೆಶಿ ಹೇಳಿದ್ದರು. ಆದರೆ ನಿಜವಾಗಿಯೂ ಸಮಾಧಿಯಾಗುತ್ತಿರುವವರು ಯಾರು ಎಂಬುದನ್ನು ಅರಿಯಬೇಕು ಎಂದು ಮಾರ್ಮಿಕವಾಗಿ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next