ಹುಬ್ಬಳ್ಳಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ಕುರಿತಾಗಿ ಸಿಎಂ ಸಿದ್ದರಾಮಯ್ಯ ಅವರು ಅ.18 ರಂದು ಆಡಳಿತಾತ್ಮಕ ಸಭೆ ಕರೆಸಿದ್ದು, ಉತ್ತಮ ಸ್ಪಂದನೆ ವಿಶ್ವಾಸವಿದೆ. ನಿರೀಕ್ಷೆ ಹುಸಿಯಾದರೆ ಮಹಾರಾಷ್ಟ್ರದಲ್ಲಿ ಮರಾಠ ಮೀಸಲು ಮಾದರಿ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಅ.18 ರಂದು ಮಧ್ಯಾಹ್ನ 12:00 ಗಂಟೆಗೆ ವಿಧಾನಸೌಧದಲ್ಲಿ ಸಿಎಂ ಅವರು ಕರೆದ ಸಭೆಯಲ್ಲಿ ತಾವು ಸೇರಿದಂತೆ 11 ಜನ ಸಮಾಜದ ಹಿರಿಯ ವಕೀಲರು ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಸಾಮಾಜಿಕ ನ್ಯಾಯ, ಮೀಸಲಾತಿ ಬಗ್ಗೆ ಒಲವು ಇರುವ ಸಿಎಂ ನಮ್ಮ ಬೇಡಿಕೆಗೆ ಸ್ಪಂದಿಸುವ ವಿಶ್ವಾಸವಿದೆ. ಸ್ಪಂದನೆ ದೊರೆಯದಿದ್ದರೆ ಮುಂದಿನ ಹೋರಾಟ ಬಗ್ಗೆ ತೀರ್ಮಾನಿಸುತ್ತೇವೆ ಎಂದರು.
ಮೀಸಲು ವಿಚಾರದಲ್ಲಿ ಸಿಎಂ ಎರಡು ಬಾರಿ ಮಾತು ತಪ್ಪಿದ್ದರು. ಇದೀಗ ಸಭೆ ಕರೆದಿದ್ದು, ಆಶಾಭವನೆಯೊಂದಿಗೆ ಸಭೆಗೆ ಹೋಗುತ್ತಿದ್ದೇವೆ. ಸ್ಪಂದನೆ ದೊರೆಯದಿದ್ದರೆ ಬೆಳಗಾವಿ ಅಧಿವೇಶನ ವೇಳೆ ಟ್ರ್ಯಾಕ್ಟರ್ ರ್ಯಾಲಿ ಸೇರಿದಂತೆ ತೀವ್ರ ಸ್ವರೂಪದ ಹೋರಾಟ ಅನಿವಾರ್ಯವಾಗಲಿದೆ ಎಂದು ಸ್ವಾಮೀಜಿ ಹೇಳಿದರು.
ಪಂಚಮಸಾಲಿ ಸಮಾಜಕ್ಕೆ ಮೀಸಲು ವಿಚಾರದಲ್ಲಿ ತಾವು ಬದ್ದರಾಗಿ ನಿಂತಿದ್ದು, ತಾರ್ಕಿಕ ಅಂತ್ಯ ಕಾಣುವವರೆಗೂ ಹೋರಾಟ ಮಾಡುವೆ. ಸಮಾಜದ ಉಳಿದ ಎರಡು ಪೀಠಗಳ ಬಗ್ಗೆ ನಾನೇನು ಮಾತನಾಡುವುದಿಲ್ಲ. ಸಮಾಜದ ಹಿತಕ್ಕಾಗಿ ಹೋರಾಟ ಬೆಂಬಲಿಸಬೇಕೆ ಬೇಡವೇ ಎಂಬ ತೀರ್ಮಾನ ಅವರಿಗೆ ಬಿಟ್ಟಿದ್ದು ಎಂದರು.
ಜಾತಿ ಗಣತಿಗೆ ವಿರೋಧವಿಲ್ಲ. ಆದರೆ, ಸರ್ಕಾರ ಮಂಡಿಸಲು ಹೊರಟಿರುವ ಜಾತಿಗಣತಿ ವರದಿ ಒಪ್ಪಲು ಸಾಧ್ಯವಿಲ್ಲ. ಹೆದ್ದಾರಿಯಲ್ಲಿ ಕುಳಿತುಕೊಂಡು ವರದಿ ತಯಾರಿಸಿದ್ದನ್ನು ಜಾತಿಗಣತಿ ವರದಿ ಎಂದು ಒಪ್ಪಿಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.