ಮುಂಬೈ: ಟೀಂ ಇಂಡಿಯಾದ ಮಿಸ್ಟರ್ ಫಿನಿಶರ್ ಖ್ಯಾತಿಯ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅವರ ಕ್ರಿಕೆಟ್ ಕೆರಿಯರ್ ಅಂತ್ಯವಾಯಿತೆ ಎಂಬ ಪ್ರಶ್ನೆ ಇದೀಗ ಅಭಿಮಾನಿಗಳಿಗೆ ಕಾಡುತ್ತಿದೆ. ಇದಕ್ಕೆ ಕಾರಣ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾದ ತಂಡದಲ್ಲಿ ಕಾರ್ತಿಕ್ ಹೆಸರು ಇಲ್ಲದೆ ಇರುವುದು.
37 ವರ್ಷ ಪ್ರಾಯದ ದಿನೇಶ್ ಕಾರ್ತಿಕ್ ಅವರು ಸದ್ಯ ಭಾರತೀಯ ಟಿ20 ತಂಡದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದಾರೆ. ಕಾರ್ತಿಕ್ ಕಾರಣದಿಂದಾಗಿ ಪಂತ್ ಬೆಂಚ್ ಕಾಯಬೇಕಾಗಿದೆ. ಕಳೆದ ಐಪಿಎಲ್ ನಲ್ಲಿ ಮಿಂಚು ಹರಿಸಿದ್ದ ಕಾರ್ತಿಕ್ ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ದೊಡ್ಡ ಆಟವಾಡುವಲ್ಲಿ ವಿಫಲರಾಗಿದ್ದಾರೆ.
ಸೋಮವಾರ ಸಂಜೆ ಘೋಷಣೆ ಮಾಡಿರುವ ಮುಂಬರುವ ಕಿವೀಸ್ ವಿರುದ್ಧ ಟಿ20 ಸರಣಿಗೆ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಿಲ್ಲ. ಸರಣಿಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಾಹುಲ್ ಗೆ ಕೂಡಾ ವಿಶ್ರಾಂತಿ ನೀಡಲಾಗಿದೆ. ಆದರೆ ಟಿ20 ಮಾತ್ರ ಆಡುವ ಕಾರ್ತಿಕ್ ರ ಹೆಸರು ಇಲ್ಲದಿರುವ ಕಾರಣ ಅಭಿಮಾನಿಗಳು ಅನುಮಾನಗೊಂಡಿದ್ದಾರೆ.
ಇದನ್ನೂ ಓದಿ:ಕಠಿಣ Lockdown:ಬಾಲಿವುಡ್ ನ ಜಿಮ್ಮಿ ಜಿಮ್ಮಿ ಹಾಡನ್ನು ಟಿಕ್‌ಟಾಕ್ ಮಾಡಿ ಚೀನಿಯರ ಪ್ರತಿಭಟನೆ
ಈ ಬಗ್ಗೆ ಮಾತನಾಡಿದ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ, “ಯಾವ ಆಟಗಾರನಿಗೆ ವಿಶ್ರಾಂತಿ ನೀಡಬೇಕು ಅಥವಾ ಬೇಡವೇ ಎಂಬುದನ್ನು ನಾವು ಮುಖ್ಯವಾಗಿ ವರ್ಕ್ ಲೋಡ್ ಮ್ಯಾನೇಜ್ ಮೆಂಟ್ ಮೇಲೆ ನಿರ್ಧರಿಸುತ್ತೇವೆ. ದಿನೇಶ್ ಕಾರ್ತಿಕ್ ಅವರು ತಂಡಕ್ಕೆ ಬಂದ ರೀತಿ, ಅವರ ಪ್ರದರ್ಶನದ ರೀತಿಯಿಂದ ಅವರು ಆಯ್ಕೆದಾರರಿಗೆ ಯಾವಾಗಲೂ ಲಭ್ಯವಿರುತ್ತಾರೆ. ಆದರೆ ನಾವು ಟಿ20 ವಿಶ್ವಕಪ್‌ನ ನಂತರ ವಿಭಿನ್ನ ಆಟಗಾರರನ್ನು ಪ್ರಯತ್ನಿಸಲು ಯೋಚಿಸುತ್ತಿದ್ದೇವೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರಿಷಭ್ ಪಂತ್ (ಉಪನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್