ನವದೆಹಲಿ: ದೆಹಲಿಯಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಿಂದ ಉತ್ತರ ಪ್ರದೇಶಕ್ಕೆ ಆಗಮಿಸುವ ಎಲ್ಲಾ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ದೆಹಲಿಯಿಂದ ರೈಲು, ಬಸ್ಸು ಹಾಗೂ ವಿಮಾನಗಳ ಮೂಲಕ ಆಗಮಿಸುವ ಜನರನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯ ಕಾರ್ಯದರ್ಶಿ ಆರ್.ಕೆ.ತಿವಾರಿ ಎ.ಎನ್.ಐ ಗೆ ತಿಳಿಸಿದ್ದಾರೆ.
ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಇತ್ತೀಚೆಗಷ್ಟೆ ಮದುವೆ ಮತ್ತು ಇನ್ನಿತರೆ ಸಮಾರಂಭಗಳಲ್ಲಿ ಅತಿಥಿಗಳ ಪಾಲ್ಗೊಳ್ಳುವಿಕೆಯನ್ನು 200 ಜನರಿಂದ 100 ಜನರಿಗೆ ಇಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರದ ಕುರಿತು ಯಾವ ನಿರ್ಧಾರ ಕೈಗೊಳ್ಳಬೇಕು ಎಂಬ ಕುರಿತಾಗಿ ಚರ್ಚೆ ನಡೆಸಲಾಗುತ್ತಿದೆ ಎಂದು ಆರ್.ಕೆ.ತಿವಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ವಿನಯ ಕುಲಕರ್ಣಿಗೆ ಮತ್ತೆ ಹದಿನಾಲ್ಕು ದಿನ ನ್ಯಾಯಾಂಗ ಬಂಧನ!
ಕೆಲ ದಿನಗಳ ಹಿಂದೆ ನೋಯ್ಡಾದ ಗಡಿ ಭಾಗದಲ್ಲಿ ದೆಹಲಿಯಿಂದ ಪ್ರಯಾಣಿಸುವ ಜನರ ಕೋವಿಡ್ ಪರೀಕ್ಷೆ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದೀಗ ಉತ್ತರ ಪ್ರದೇಶ ಸರ್ಕಾರವೂ ಕೂಡ ಇದೇ ನಿರ್ಧಾರವನ್ನು ಕೈಗೊಂಡಿದೆ.
ಭಾನುವಾರ ಉತ್ತರ ಪ್ರದೇಶದಲ್ಲಿ 2,588 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 5,26,780ಕ್ಕೆ ಏರಿಕೆಯಾಗಿದೆ.