Advertisement

ಸ್ಮಾರ್ಟ್‌ ಆಗಲಿವೆ ಕುಕ್ಕೆ ರಸ್ತೆಗಳು: ಕಾಮಗಾರಿಗೆ ಶೀಘ್ರ ಚಾಲನೆ

10:27 AM Sep 21, 2018 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವನ್ನು ಸಂಪರ್ಕಿಸುವ ಕುಮಾರಧಾರಾ-ಕಾಶಿಕಟ್ಟೆ ನಡುವಿನ ರಸ್ತೆ ಅಭಿವೃದ್ಧಿ ಬಹುಕಾಲದ ಬೇಡಿಕೆಯಾಗಿದ್ದು, ನಿರೀಕ್ಷಿತ ಚತುಷ್ಪಥ ರಸ್ತೆ ಕಾಮಗಾರಿಗೆ ಇನ್ನೆರಡು ತಿಂಗಳಲ್ಲಿ ಚಾಲನೆ ದೊರೆಯಲಿದೆ.

Advertisement

ಕ್ಷೇತ್ರದ ಅಭಿವೃದ್ಧಿ ಯೋಜನೆಗೆ 180 ಕೋಟಿ ರೂ. ವೆಚ್ಚದ ಮಾಸ್ಟರ್‌ ಪ್ಲಾನ್‌ ಜಾರಿಯಲ್ಲಿದೆ. ಇದರಲ್ಲಿ ಕುಮಾರಧಾರಾ-ಕಾಶಿಕಟ್ಟೆ ನಡುವೆ ಚತುಷ್ಪಥ ರಸ್ತೆ, ಕಾಶಿಕಟ್ಟೆ-ಇಂಜಾಡಿ, ಕಾಶಿಕಟ್ಟೆ-ಆದಿಸುಬ್ರಹ್ಮಣ್ಯ ಭಾಗಕ್ಕೆ ಸಂಪರ್ಕ ವರ್ತುಲ ರಸ್ತೆಗಳ ವಿಸ್ತರಣೆಯೂ ಸೇರಿವೆ. ಈ ಪೈಕಿ ಚತುಷ್ಪಥ ರಸ್ತೆ ನಿರ್ಮಾಣ ಹಾಗೂ ಇತರ ರಸ್ತೆಗಳ ವಿಸ್ತರಣೆ ಎರಡು ಹಂತದಲ್ಲಿ 68.8 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ.

ಸುಸಜ್ಜಿತವಾಗಿ ನಿರ್ಮಾಣ
ಎರಡನೇ ಹಂತದ 36.1 ಕೋ.ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಯಲ್ಲಿ ಕಾಶಿಕಟ್ಟೆ-ಇಂಜಾಡಿ ತನಕದ ರಸ್ತೆ, ಕಾಶಿಕಟ್ಟೆ- ಆದಿಸುಬ್ರಹ್ಮಣ್ಯ ನಡುವಿನ ನೇರ ಸಂಪರ್ಕ ರಸ್ತೆ. ಮುಖ್ಯ ರಸ್ತೆಯ ಬಸ್‌ನಿಲ್ದಾಣ ಬಳಿಯಾಗಿ ಆದಿ ಸುಬ್ರಹ್ಮಣ್ಯಕ್ಕೆ ತೆರಳುವ ರಸ್ತೆ, ಮುಖ್ಯ ರಸ್ತೆಯಿಂದ ಕಾರ್ತಿಕೇಯ ವಸತಿಗೃಹ ಬಳಿಯಾಗಿ ಆದಿಸುಬ್ರಹ್ಮಣ್ಯಕ್ಕೆ ತೆರಳುವ ಈ ಎಲ್ಲ ವರ್ತುಲ ರಸ್ತೆಗಳು, ಫುಟ್ ಪಾತ್‌, ಡ್ರೈನೇಜ್‌ ವ್ಯವಸ್ಥೆಗಳೊಂದಿಗೆ ಸುಸಜ್ಜಿತವಾಗಿ ನಿರ್ಮಾಣವಾಗಲಿವೆ.

ಚತುಷ್ಪಥ ರಸ್ತೆ ವಿಸ್ತರಣೆಗೆ ಸಂಬಂಧಿಸಿ ಸರಕಾರದ ಅನುಮೋದನೆ ಈ ಹಿಂದೆಯೇ ದೊರೆತಿದೆ. ಫೈನಾನ್ಶಿಯಲ್‌ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಮಗಾರಿಯ ಟೆಕ್ನಿಕಲ್‌ ಟೆಂಡರ್‌ ಕೂಡ ಪೂರ್ತಿಗೊಂಡಿದ್ದು, ವಾರದೊಳಗೆ ಅಂತಿಮಗೊಳ್ಳಲಿದೆ. ಐದು ಮಂದಿ ಗುತ್ತಿಗೆದಾರರಲ್ಲಿ ಓರ್ವ ಗುತ್ತಿಗೆದಾರನಿಗೆ ಕಾಮಗಾರಿ ನಡೆಸಲು ಅವಕಾಶ ದೊರಕಿದೆ. ಪರಿಶೀಲನೆ ಅಂತಿಮವಾದ ಬಳಿಕ ಕೆಲಸ ಆರಂಬಿಸಲು ಅಧಿಕೃತ ಪರವಾನಿಗೆ ಸಿಗಲಿದೆ. ಮುಂದಿನ ನವೆಂಬರ್‌ ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳುವುದು ಬಹುತೇಕ ಖಚಿತವಾಗಿದೆ.

ತೊಡಕುಗಳಿಂದಾಗಿ ಹಿನ್ನಡೆ
ಮಾಸ್ಟರ್‌ ಪ್ಲಾನ್‌ ಜಾರಿಯಲ್ಲಿದ್ದರೂ, ರಸ್ತೆ ವಿಸ್ತರಣೆಗೆ ಸಂಬಂಧಿಸಿ ಸರಕಾರದ ಅನುಮೋದನೆ ಸಿಗುವಲ್ಲಿ ವಿಳಂಬವಾಗಿತ್ತು. ರಸ್ತೆ ವಿಚಾರವಾಗಿ ಕೆಲ ಖಾಸಗಿ ವ್ಯಕ್ತಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೆಲ್ಲ ಆಡಳಿತ ಮಂಡಳಿಗೆ ದೊಡ್ಡ ತಲೆನೋವಾಗಿತ್ತು. ತೊಡಕುಗಳಿಂದ ರಸ್ತೆ ಅಭಿವೃದ್ಧಿಗೆ ಹಿನ್ನಡೆ ಆಗಿತ್ತು. ದೇಗುಲದ ವ್ಯವಸ್ಥಾಪನ ಸಮಿತಿಯವರು ಭಾರಿ ಮುಜುಗರ ಅನುಭವಿಸಿದ್ದರು. ಈ ರಸ್ತೆ ಅಭಿವೃದ್ಧಿ ಈಗಿನ ಆಡಳಿತ ಮಂಡಳಿ ಅಧ್ಯಕ್ಷರ ದೊಡ್ಡ ಕನಸಾಗಿತ್ತು.

Advertisement

ಏನೇನು ಕಾಮಗಾರಿ?
ಪ್ರಥಮ ಹಂತದ 32.5 ಕೋಟಿ ರೂ ವೆಚ್ಚದ ಯೋಜನೆಯಲ್ಲಿ ಕುಮಾರಧಾರಾ-ಕಾಶಿಕಟ್ಟೆ, ಸರ್ಕಲ್‌, ಕಾಶಿಕಟ್ಟೆ-ಪೊಲೀಸ್‌ ಚೌಕಿ ತನಕ ಚತುಷ್ಪಥ ರಸ್ತೆ ವಿಸ್ತರಣೆ 1.8 ಕಿ.ಮೀ. ದೂರ ನಡೆಯಲಿದೆ. ರಸ್ತೆ 30 ಮೀ. ಅಗಲವಿರಲಿದೆ. ಎರಡೂ ಬದಿಗೆ ತಲಾ 7 ಮೀ.ನಷ್ಟು ಅಂತರವಿರಲಿದೆ. ಈ ರಸ್ತೆಯಲ್ಲಿ ಪಾದಚಾರಿಗಳಿಗೆ ಸಾಗಲು ಫ‌ುಟ್‌ಪಾತ್‌ ಹಾಗೂ ಡ್ರೈನೇಜ್‌ ವ್ಯವಸ್ಥೆ ಇರಲಿದೆ. ಎರಡು ಪಥಗಳ ರಸ್ತೆಯ ನಡುವೆ 1 ಮೀ. ಸ್ಥಳದಲ್ಲಿ ಡಿವೈಡರ್‌ ನಿರ್ಮಿಸಲಾಗುತ್ತಿದೆ. ಇದರ ಮೇಲೆ ಟ್ರೀ ಪಾರ್ಕ್‌ ನಿರ್ಮಿಸುವ ಯೋಜನೆ ಇದರಲ್ಲಿ ಸೇರಿದೆ. ರಥಬೀದಿಯ ರಸ್ತೆ ಅಭಿವೃದ್ಧಿ ವೇಳೆ 28 ಮೀ.ನಲ್ಲಿ 18 ಮೀ. ಕಾಂಕ್ರೀಟ್‌ ಕಾಮಗಾರಿ ನಡೆದು ರಸ್ತೆ ಅಭಿವೃದ್ಧಿಯಾಗಲಿದೆ. ಇಲ್ಲಿ ಕೂಡ ಡ್ರೈನೇಜ್‌, ಪಾದಚಾರಿಗಳ ಅನುಕೂಲಕ್ಕೆ ಫ‌ುಟ್‌ಪಾತ್‌ ಇರಲಿದೆ.

ಜಾತ್ರೆ ವೇಳೆ ಸ್ಥಗಿತವಿಲ್ಲ
ರಸ್ತೆ ವಿಸ್ತರಣೆಗೆ ಸಂಬಂಧಿಸಿ ಟೆಂಡರ್‌ ಕೆಲಸಗಳು ಅಂತಿಮಗೊಂಡಿವೆ. ನವಂಬರ್‌ ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಡಿಸೆಂಬರ್‌ ಮಾಸದಲ್ಲಿ ಕ್ಷೇತ್ರದಲ್ಲಿ ಚಂಪಾ ಷಷ್ಠಿ ನಡೆಯಲಿದ್ದು, ಈ ವೇಳೆ ಕಾಮಗಾರಿ ನಿಲ್ಲಿಸದೆ ಬೇಗ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು.
– ಯಶವಂತ್‌,
ಮುಖ್ಯಅಭಿಯಂತರ, ಪಿಡಬ್ಲ್ಯೂಡಿ ಮಂಗಳೂರು

ರಸ್ತೆ ಅಭಿವೃದ್ಧಿ ಕನಸಾಗಿತ್ತು
ರಸ್ತೆ ಅಭಿವೃದ್ಧಿ ತೀರಾ ಅಗತ್ಯವಿತ್ತು. ಇದು ನಮ್ಮ ಬಹು ದಿನಗಳ ಕನಸು. ಬಹಳಷ್ಟು ಶ್ರಮ ಕೂಡ ಪಟ್ಟಿದ್ದೇವೆ. ಅದು ಈಗ ಈಡೇರುವ ಹಂತಕ್ಕೆ ತಲುಪಿದೆ. ಎಲ್ಲರ ಸಹಕಾರದಿಂದ ಉತ್ತಮ ರಸ್ತೆ ನಿರ್ಮಾಣಗೊಂಡು ಸಾರ್ವಜನಿಕರ ಅನುಕೂಲತೆಗೆ ದೊರೆಯಲಿದೆ.
 - ನಿತ್ಯಾನಂದ ಮುಂಡೋಡಿ, 
    ಕುಕ್ಕೆ ಶ್ರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next