ಲಾಹೋರ್: ಒಂದು ವೇಳೆ ಸೌರವ್ ಗಂಗೂಲಿ ಐಸಿಸಿ ಅಧ್ಯಕ್ಷರಾಗಿ ನೇಮಕಗೊಂಡರೆ ತನ್ನ ನಿಷೇಧವನ್ನು ಪ್ರಶ್ನಿಸಿ ಕ್ರಿಕೆಟ್ ಆಡಳಿತ ಮಂಡಳಿಗೆ ಮೇಲ್ಮನವಿ ಸಲ್ಲಿಸುವುದಾಗಿ ಪಾಕಿಸ್ಥಾನದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯ ಹೇಳಿದ್ದಾರೆ.
ಇಂಗ್ಲಿಷ್ ಕೌಂಟಿ ಪಂದ್ಯಾವಳಿಯಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದರೆಂಬ ಕಾರಣಕ್ಕಾಗಿ ಕನೇರಿಯ ಅವರನ್ನು ಆಜೀವ ನಿಷೇಧಕ್ಕೊಳಪಡಿಸಲಾಗಿದೆ. “ಸೌರವ್ ಗಂಗೂಲಿ ಐಸಿಸಿ ಅಧ್ಯಕ್ಷರಾದರೆ ಅದರಿಂದ ನನಗೆ ಖಂಡಿತ ಸಹಾಯವಾಗಲಿದೆ ಎಂದು ನಂಬಿದ್ದೇನೆ. ಇದರಿಂದ ನನ್ನ ಆಜೀವ ನಿಷೇಧವನ್ನು ಹಿಂಪಡೆಯಲು ಸಾಧ್ಯವಾಗಬಹುದು. ಹೀಗಾಗಿ ನಾನು ನಿಷೇಧದ ವಿರುದ್ಧ ಖಂಡಿತವಾಗಿಯೂ ಮೇಲ್ಮನವಿ ಸಲ್ಲಿಸಲಿದ್ದೇನೆ’ ಎಂದು ಕನೇರಿಯ ಹೇಳಿದ್ದಾರೆ.
“ಗಂಗೂಲಿ ಅದ್ಭುತ ಆಟಗಾರ. ಅವರು ಭಾರತ ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅವರಿಗೆ ಇಂಥ ಸೂಕ್ಷ್ಮ ವಿಚಾರಗಳು ಚೆನ್ನಾಗಿ ಅರ್ಥವಾಗುತ್ತವೆ. ಐಸಿಸಿ ಅಧ್ಯಕ್ಷರಾಗಲು ಅವರಿಗಿಂತ ಉತ್ತಮ ಅಭ್ಯರ್ಥಿ ಇಲ್ಲ. ಅವರಿಗೆ ಪಿಸಿಬಿ ಬೆಂಬಲ ಕೂಡಬೇಕಾಗದು’ ಎಂದೂ ಕನೇರಿಯ ಹೇಳಿದ್ದಾರೆ.
2012ರಲ್ಲಿ ಎಸೆಕ್ಸ್ ಕೌಂಟಿ ಪರ ಆಡುತ್ತಿದ್ದಾಗ ಕನೇರಿಯ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಕ್ಕಿಬಿದ್ದು ಆಜೀವ ನಿಷೇಧ ಕ್ಕೊಳಗಾಗಿದ್ದಾರೆ.
ಪಾಕಿಸ್ಥಾನ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ 261 ವಿಕೆಟ್ ಹಾರಿಸಿರುವ ಕನೇರಿಯ, ಅಲ್ಲಿನ ಬೌಲಿಂಗ್ ಸಾಧಕರ ಯಾದಿಯಲ್ಲಿ ಅಕ್ರಂ, ವಕಾರ್ ಮತ್ತು ಇಮ್ರಾನ್ ಖಾನ್ ಅವರ ಅನಂತರದ ಸ್ಥಾನದಲ್ಲಿದ್ದಾರೆ.