ಹುಬ್ಬಳ್ಳಿ: ಪಶ್ಚಾತಾಪ ಪಡುವ ಕೆಲಸವನ್ನು ನಾನು ಯಾವತ್ತೂ ಮಾಡಿಲ್ಲ. ಬಿಜೆಪಿ ವರಿಷ್ಠರ ನಿರ್ಧಾರಕ್ಕೆ ನಾನು ಬದ್ದ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಧಾರವಾಡ ಮತ್ತು ಹಾವೇರಿ ಕ್ಷೇತ್ರಗಳ ಬಗ್ಗೆ ಆಸಕ್ತಿಯಿತ್ತು. ಆದರೆ ಎರಡೂ ಕ್ಷೇತ್ರದ ಟಿಕೆಟ್ ಘೋಷಣೆಯಾಗಿವೆ. ಹೀಗಾಗಿ ಘೋಷಣೆಯಾದ ಕ್ಷೇತ್ರಗಳ ಬಗ್ಗೆ ನಾನು ಮಾತಾಡಲ್ಲ. ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆಯಾಗಿಲ್ಲ. ನಾನು ಸಂಜೆವರೆಗೂ ಒಂದು ನಿರ್ಧಾರಕ್ಕೆ ಬರುತ್ತೇನೆ ಎಂದರು.
ಬೆಳಗಾವಿಯಲ್ಲಿ ಗೋ ಬ್ಯಾಕ್ ಅಭಿಯಾನ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಅಲ್ಲಿನ ನಾಯಕರು, ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ. ತುಮಕೂರು ಅಲ್ಲೂ ಹಾಗೆಯಾಯ್ತು. ಕೊನೆಗೆ ಸೋಮಣ್ಣ ಟಿಕೆಟ್ ಕೊಡಲಿಲ್ಲವೇ? ನಾನು ಬೆಳಗಾವಿಗೆ ಹೋಗುವ ನಿರ್ಧಾರ ಮಾಡಿಲ್ಲ. ಇನ್ನು ಚರ್ಚೆಯ ಹಂತದಲ್ಲಿದೆ. ಕೆಲವು ಆಂತರಿಕ ಬೆಳವಣಿಗೆ ನಾನು ಇಲ್ಲಿ ಹೇಳಲ್ಲ ಎಂದರು.
ಟಿಕೆಟ್ ಘೋಷಣೆಯಾದ ಬಳಿಕ ಯಡಿಯೂರಪ್ಪ, ವಿಜಯೇಂದ್ರ ಮಾತನಾಡಿದ್ದಾರೆ. ಪಕ್ಷ ಯಾರಿಗೆ ಟಿಕೆಟ್ ಕೊಡಲಿ ನಾನು ಪ್ರಚಾರ ಮಾಡುತ್ತೇನೆ. ಜೋಶಿ ಪರ ಪ್ರಚಾರ ಮಾಡುತ್ತೀರಾ ಎಂದರೆ ಯಾರೇ ಇರಲಿ ನಾನು ಪ್ರಚಾರ ಮಾಡುತ್ತೇನೆ ಎಂದರು.
ಬಿಜೆಪಿಗೆ ಹೋಗಿದ್ದಕ್ಕೆ ಪಶ್ಚಾತಾಪ ಪಡುತ್ತಾರೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶೆಟ್ಟರ್, ನಾನು ಕಾಂಗ್ರೆಸ್ ಗೆ ಹೋದಾಗಲೂ ಪಶ್ಚಾತಾಪಪಟ್ಟಿಲ್ಲ. ಬಿಜೆಪಿಗೆ ಘರ್ ವಾಪ್ಸಿ ಆದಾಗಲೂ ಪಶ್ಚಾತಾಪ ಪಟ್ಟಿಲ್ಲ. ನಾನು ಎಂದು ಪಶ್ಚಾತಾಪ ಪಡುವು ಕೆಲಸ ಮಾಡಿಲ್ಲ ಎಂದರು.