ಮೈಸೂರು: ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ 63ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಶನಿವಾರ ನಗರದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಜಾಥಾ ನಡೆಸಿದರು.
ನಗರದ ಚಾಮರಾಜೇಂದ್ರ ಮೃಗಾಲಯದ ವತಿಯಿಂದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಜಾಥಾಕ್ಕೆ ಜಿಲ್ಲಾಧಿಕಾರಿ ಡಿ.ರಂದೀಪ್ ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಹುಲಿ, ಸಿಂಹ, ಕರಡಿ, ತೋಳ, ಜಿಂಕೆಯ ಮುಖವಾಡ ಧರಿಸಿ ಜಾಥಾದಲ್ಲಿ ಹೆಜ್ಜೆ ಹಾಕಿದರು.
ಕಾಡಿದ್ದರೆ ನಾಡು, ನಾಡಿದ್ದರೆ ನಾವು, ಕಾಡನ್ನು ಬೆಳಸಿ ನಾಡನ್ನು ಉಳಿಸಿ, ವನ್ಯ ಜೀವಿಗಳನ್ನು ಸಂರಕ್ಷಿಸಿ, ಜೀವ ಜಾತ್ರೆಯಲ್ಲಿ ನಾವೆಲ್ಲಾ ಒಂದೇ ಕುಲ, ಮುಂದಿನ ಮಕ್ಕಳಿಗೂ ಕಾಡು ಉಳಿಸಿ ಎಂಬಿತ್ಯಾದಿ ಘೋಷಣೆ ಕೂಗಿದ ವಿದ್ಯಾರ್ಥಿಗಳು ಜನರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು.
ಮೃಗಾಲಯದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ವನ್ಯಜೀವಿ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಸಪ್ತಾಹ ನಡೆಸಲಾಗುತ್ತಿದೆ. ವನ್ಯಜೀವಿಗಳ ಕುರಿತು ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ. ಪ್ರಮುಖವಾಗಿ ಮಾನವ ಮತ್ತು ಪ್ರಾಣಿಗಳ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸಬೇಕಿದ್ದು ಇತ್ತೀಚಿನ ದಿನಗಳಲ್ಲಿ ವನ್ಯ ಜೀವಿಗಳ ಸಂಖ್ಯೆ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಇದಕ್ಕೂ ಮುನ್ನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಹೊರಟ ಜಾಗೃತಿ ಜಾಥಾ ಹಾರ್ಡಿಂಜ್ ವೃತ್ತದ ಮೂಲಕ ಸಾಗಿ ಚಾಮರಾಜೇಂದ್ರ ಮೃಗಾಲಯ ತಲುಪಿತು. ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರ ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತ ಚಿತ್ರಕಲೆ ಸ್ಪರ್ಧೆ ನಡೆಸಲಾಯಿತು. ಮೇಯರ್ ಎಂ.ಜೆ.ರವಿಕುಮಾರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಕಾರ್ಯನಿರ್ವಾಹಕ ಅಧಿಕಾರಿ ಪಿ.ರವಿಶಂಕರ್ ಸೇರಿದಂತೆ ವಿವಿಧ ಶಾಲೆಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು.