Advertisement

ಕೈಸೇರಿಲ್ಲ 3 ತಿಂಗಳ ದುಡಿಮೆ ಕಾಸು!

01:11 AM Jan 26, 2022 | Team Udayavani |

ಕಾರ್ಕಳ: ಕುದುರೆಮುಖ ವನ್ಯಜೀವಿ ವಿಭಾಗದ 8 ವಿಭಾಗಗಳಲ್ಲಿ ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿರುವ ಚಾಲಕರು, ಕಚೇರಿ ಸಿಬಂದಿ, ರಾತ್ರಿ ಕಾವಲುಗಾರರು 3 ತಿಂಗಳಿನಿಂದ ವೇತನ ಕೈಸೇರದೆ ತುತ್ತಿಗೂ ಪರಿತಪಿಸುತ್ತಿದ್ದಾರೆ. ಇವರ್ಯಾರಿಗೂ ನವೆಂಬರ್‌ನಿಂದ ವೇತನ ಆಗಿಲ್ಲ. ಕುಟುಂಬ ಪೊರೆಯಲು ಅನ್ಯ ದಾರಿ ಕಾಣದೆ ಕೈಸಾಲ, ಮೀಟರ್‌ ಸಾಲದ ಮೊರೆ ಹೊಕ್ಕಿದ್ದು, ಈಗ ಅದುವೇ ಶೂಲವಾಗಿ ಇರಿಯುತ್ತಿದೆ.

Advertisement

ಕಾರ್ಕಳ, ಕೆರೆಕಟ್ಟೆ, ಕುದುರೆಮುಖ, ಬೆಳ್ತಂಗಡಿ, ಹೆಬ್ರಿ (ಸೋಮೇಶ್ವರ), ಕೊಲ್ಲೂರು, ಅಮಾವಸೆಬೈಲು, ಸಿದ್ದಾಪುರ ವಲಯಗಳಲ್ಲಿ 50ಕ್ಕೂ ಅಧಿಕ ಹೊರಗುತ್ತಿಗೆ ನೌಕರರು ಹತ್ತಾರು ವರ್ಷ ಗಳಿಂದ ಇದ್ದಾರೆ. ಶಿವಮೊಗ್ಗ ಮೂಲದ ಪ್ರೈವೆಟ್‌ ಎಂಪ್ಲಾ ಯಿಮೆಂಟ್‌ ಬ್ಯೂರೋ ಸಂಸ್ಥೆ ಅವರನ್ನು ನೇಮಿಸಿಕೊಂಡಿದ್ದು, ಸಕಾಲಕ್ಕೆ ವೇತನ ನೀಡುತ್ತಿಲ್ಲ ಎಂಬುದು ಆರೋಪ.

ನಮ್ಮನ್ನು ನಂಬಿಕೊಂಡು ಕುಟುಂಬ ವರ್ಗವಿದೆ. ಹಿರಿಯರು, ಮಕ್ಕಳು ಜ್ವರ, ಶೀತ ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೂ ತುತ್ತಾಗಿದ್ದಾರೆ. ದಿನದ ತುತ್ತಿಗೇ ಕೈಯಲ್ಲಿ ಕಾಸಿಲ್ಲದಿರುವಾಗ ಸೂಕ್ತ ಚಿಕಿತ್ಸೆ ಕೊಡಿಸುವುದಾದರೂ ಹೇಗೆ? ಮನೆಯಲ್ಲೂ ಇರಲಾಗದೆ, ಆಸ್ಪತ್ರೆಗೂ ತೆರಳಿ ಚಿಕಿತ್ಸೆ ಕೊಡಿಸ ಲಾಗದ ಚಿಂತಾಜನಕ ಸ್ಥಿತಿ ನಮ್ಮದಾಗಿದೆ ಎಂದು ನೌಕರರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಸರಕಾರ ಹಣ ಕೊಟ್ಟಿಲ್ಲ
ಗುತ್ತಿಗೆ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಜಾರಿಯಲ್ಲಿದ್ದರೂ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ. ಗುತ್ತಿಗೆ ಒಪ್ಪಂದದಲ್ಲಿ ಸೂಚಿಸಲಾದ ಸೌಲಭ್ಯ ನೀಡುತ್ತೇವೆ ಎಂದು ಹೇಳುತ್ತಾರಾದರೂ ವಾಸ್ತವದಲ್ಲಿ ಸಿಗುತ್ತಿಲ್ಲ. ವೇತನ ವಿಳಂಬಕ್ಕೆ ಕಾರಣ ಏನು ಎಂದು ವನ್ಯಜೀವಿ ಅಧಿಕಾರಿಗಳಲ್ಲಿ ಪ್ರಶ್ನಿಸಿದರೆ, “ಸರಕಾರದಿಂದ ಹಣ ಬಿಡುಗಡೆಗೊಂಡ ಹಾಗೇ ನಾವು ಗುತ್ತಿಗೆದಾರರಿಗೆ ಬಿಲ್‌ ಪಾವತಿಸುತ್ತೇವೆ. ಸರಕಾರದ ಮಟ್ಟದಲ್ಲಿ ವಿಳಂಬವಾದಲ್ಲಿ ನಾವೇನೂ ಮಾಡಲು ಸಾಧ್ಯವಿಲ್ಲ’ ಎನ್ನುತ್ತಾರವರು.

ಕೊರಗಿನಿಂದ ಪ್ರಾಣಬಿಟ್ಟ ನೌಕರ
ಹೊರಗುತ್ತಿಗೆಯಡಿ 15 ವರ್ಷಗಳಿಂದ ಕಾರ್ಕಳ ವಿಭಾಗದಲ್ಲಿ ಚಾಲಕನಾಗಿದ್ದ ಸತೀಶ್‌ ಪೂಜಾರಿ ಜ. 22ರಂದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದರು.

Advertisement

ಸಂಬಳ ಆಗದೆ ಜೀವನ ನಿರ್ವಹಣೆಯೇ ಕಷ್ಟವಾಗಿದೆ ಎಂದು ಸ್ನೇಹಿತರಲ್ಲಿ ಆಗಾಗ ಸಂಕಷ್ಟ ಹೇಳಿಕೊಳ್ಳುತ್ತಿದ್ದರು. ಕೆಲವು ದಿನಗಳ ಬಳಿಕ ಇದೇ ಕೊರಗಿನಿಂದ ಸಾವಿಗೆ ಶರಣಾಗಿದ್ದರು. ಪತ್ನಿ, 2 ವರ್ಷಗಳ ಹೆಣ್ಣು ಮಗು, ಅನಾರೋಗ್ಯ ಪೀಡಿತ ಸಹೋದರ, ವೃದ್ಧೆ ತಾಯಿ ಮನೆಯಲ್ಲಿದ್ದು, ಏಕೈಕ ಆಶ್ರಯದಾತ ಇವರಾಗಿದ್ದರು. ಹಣಕಾಸಿನ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣ ಎಂದು ಪೊಲೀಸರು ಕೂಡ ಶಂಕಿಸಿದ್ದಾರೆ.

ಆಧಾರವನ್ನು ಕಳೆದುಕೊಂಡ ಕುಟುಂಬವೀಗ ಕಣ್ಣೀರಿಡುತ್ತಿದೆ. ಇತರ ಹೊರಗುತ್ತಿಗೆ ನೌಕರರ ಕುಟುಂಬಗಳ ಸಮಸ್ಯೆಯೂ ಇದಕ್ಕಿಂತ ಭಿನ್ನವೇನಲ್ಲ.

ಸರಕಾರದಿಂದ ಇಲಾಖೆಗೆ ನಿಗದಿತ ಸಮಯಕ್ಕೆ ಹಣ ಬಿಡುಗೆಯಾಗುತ್ತಿಲ್ಲ. ಬಂದ ಬಳಿಕವೂ ನಮ್ಮಿಂದ ಗುತ್ತಿಗೆದಾರರಿಗೆ ಪಾವತಿಗೆ ಬಾಕಿಯಾಗಿಲ್ಲ. ಗುತ್ತಿಗೆದಾರರಿಗೆ ನೌಕರರ ಸಮಸ್ಯೆ ತಿಳಿದಿದ್ದರೂ ಕೋಟಿಗಟ್ಟಲೆ ರೂ. ಮುಂಗಡ ಭರಿಸುವುದು ಕಷ್ಟ ಎನ್ನುತ್ತಿದ್ದಾರೆ.
– ಹರಿಪ್ರಸಾದ್‌, ಕುದುರೆಮುಖ ವನ್ಯಜೀವಿ ವಿಭಾಗದ ಸೂಪರಿಂಟೆಂಡೆಂಟ್‌

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next