ಬೆಂಗಳೂರು: ವನ್ಯಜೀವಿಗಳ ದಂತ, ಕೋಡು, ಚರ್ಮ, ಮಾಂಸ, ಮೂಳೆ, ತುಪ್ಪಳ, ಕೊಂಬುಗಳ ಕಳ್ಳಸಾಗಣೆ ಹಾಗೂ ಬೇಟೆಯಾಡಿ ಸಿಕ್ಕಿ ಬಿದ್ದಾಗ ಇದು ಇಂತಹುದೇ ಪ್ರಾಣಿಯ ಅಂಗಾಗ ಎಂದು ದೃಢೀಕರಿಸುವ ನೂತನ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್) ಶೀಘ್ರದಲ್ಲೇ ರಾಜ್ಯದಲ್ಲಿ ಪ್ರಾರಂಭವಾಗಲಿದೆ.
ರಾಜ್ಯದಲ್ಲಿ ವನ್ಯಜೀವಿಗಳ ಫೋರೆನ್ಸಿಕ್ ಲ್ಯಾಬ್‌ನ ಕೊರತೆಯಿತ್ತು. ಇದರ ಅಗತ್ಯತೆ ಮನಗಂಡಿರುವ ಪೊಲೀಸ್ ಇಲಾಖೆಯು ವನ್ಯಜೀವಿಗಳಿಗೆ ಸಂಬಂಧಿ ಸಿದ ನೂತನ ಎಫ್ಎಸ್‌ಎಲ್ ಸ್ಥಾಪನೆಗೆ ಸಿದ್ಧತೆ ನಡೆಸುತ್ತಿದೆ. ಈ ಪ್ರಯೋಗಾಲಯಕ್ಕೆ ಬೇಕಾಗಿರುವ ಆಧುನಿಕ ಸಲಕರಣೆಗಳ ಖರೀದಿ ಹಾಗೂ ನಿರ್ವಹಣೆಗಾಗಿ 4 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ನೂತನ ವೈಲ್ಡ್‌ಲೈಫ್ ಫೋರೆನ್ಸಿಕ್‌ಲ್ಯಾಬ್‌ನ ಕಾರ್ಯ ಆರಂಭವಾಗಲಿದೆ. ಈ ಲ್ಯಾಬ್‌ನಲ್ಲಿ ವನ್ಯ ಜೀವಿಗಳ ಅವಯವಗಳನ್ನು ಪರೀಕ್ಷಿಸುವ ಎಫ್ಎಸ್‌ಎಲ್‌ನ ಇಬ್ಬರು ಸಿಬ್ಬಂದಿಗಳಿಗೆ ಡೆಹ್ರಾಡೂನ್‌ನ ವೈಲ್ಡ್ ಲೈಫ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ವನ್ಯಜೀವಿ ಅವಯವಗಳ ಪರೀಕ್ಷೆಗೆ ಸಂಬಂಧಿಸಿದ ವಿಶೇಷ ತರಬೇತಿಯನ್ನೂ ಕೊಡಿಸಲಾಗಿದೆ ಎಂದು ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕ ಧರ್ಮೇಂದ್ರ ಕುಮಾರ್ ಮೀನ “ಉದಯವಾಣಿ’ಗೆ ತಿಳಿಸಿದ್ದಾರೆ.
ಲ್ಯಾಬ್‌ನಿಂದ ಏನು ಲಾಭ?: ವನ್ಯಜೀವಿಗಳ ಅಂಗಾಂಗಗಳನ್ನು ಪರೀಕ್ಷಿಸಿ ಇಂತಹುದೇ ಪ್ರಾಣಿ ಎಂದು ಪ್ರಮಾಣೀಕರಿಸುವ ಎಫ್ಎಸ್‌ಎಲ್ ಲ್ಯಾಬ್ ಇದಾಗಿದ್ದು, ರಾಜ್ಯ ರಾಜಧಾನಿಯ ಎಫ್ ಎಸ್‌ಎಲ್ ವಿಭಾಗದಲ್ಲೇ ಈ ನೂತನ ಲ್ಯಾಬ್ ಕಾರ್ಯ ನಿರ್ವಹಿಸಲಿದೆ. ವನ್ಯಜೀವಿಗಳ ಮಾಂಸ, ಮೂಳೆ, ದಂತ, ಕೋಡು, ಚರ್ಮ, ಚಿಪ್ಪು, ತುಪ್ಪಳ, ಗರಿ, ರೆಕ್ಕೆ ಸೇರಿ ಇತರ ಅಂಗಾಂಗಗಳನ್ನು ಪರೀಕ್ಷಿಸಿ ಅದು ಇಂತಹ ಪ್ರಾಣಿ ಅಥವಾ ಪಕ್ಷಿಯ ಅವಯವಗಳೆಂದು ಈ ಲ್ಯಾಬ್‌ನಲ್ಲಿ ವೈಜ್ಞಾನಿಕವಾಗಿ ದೃಢೀಕರಿಸಲಾಗುತ್ತದೆ. ವೈಜ್ಞಾನಿಕವಾಗಿ ಸಾಬೀತುಪಡಿಸಿದ ದಾಖಲೆಗಳ ಮೂಲಕ ಪೊಲೀಸರಿಗೆ ವರದಿ ನೀಡಲಾಗುತ್ತದೆ.
ವನ್ಯ ಜೀವಿಗಳ ಬೇಟೆ, ಮಾಂಸ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಈ ವರದಿಗಳು ಸಹಕಾರಿಯಾಗಿದೆ. ಕಳ್ಳಸಾಗಣೆ ವೇಳೆ ಸಿಕ್ಕಿ ಬಿದ್ದಿರುವುದು ಇಂತಹದ್ದೇ ಪ್ರಾಣಿಯ ಅವಯವ ಎಂದು ವೈಜ್ಞಾನಿಕವಾಗಿ ದೃಢೀಕರಿಸುವ ಪ್ರಾಣಿಗಳ ಫೋರೆನ್ಸಿಕ್ ಲ್ಯಾಬ್ಸ್ ಗಳು ರಾಜ್ಯದಲ್ಲಿ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಸದ್ಯ ಕಳ್ಳಸಾಗಣೆ ವೇಳೆ ಪತ್ತೆಯಾಗುವ ಪ್ರಾಣಿಗಳ ಅವಯವಗಳನ್ನು ಡೆಹ್ರಾಡೂನ್ ನಲ್ಲಿರುವ ವೈಲ್ಡ್‌ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿ ಯಾ ಅಥವಾ ಹೈದರಾಬಾದ್‌ನಲ್ಲಿರುವ ಸಿಸಿಎಂಬಿ ಲ್ಯಾಬ್‌ಗಳಿಗೆ ಕಳುಹಿಸಬೇಕಾಗಿತ್ತು. ಇವುಗಳ ವರದಿ ತರಿಸಿಕೊಳ್ಳಲು ವರ್ಷಗಳೇ ಉರುಳುತ್ತಿದ್ದವು. ಇದಕ್ಕೆ ಹೆಚ್ಚಿನ ವೆಚ್ಚವೂ ತಗುಲುತ್ತಿತ್ತು. ಈ ಎಲ್ಲ ಕಾರಣಗಳಿಂದ ಪ್ರಾಣಿಗಳ ಅಂಗಾಂಗಗಳ ಕಳ್ಳಸಾಗಣೆ ಕೇಸ್ ದಾಖಲಿಸಿಕೊಳ್ಳುವುದೇ ಪೊಲೀಸರಿಗೆ ತಲೆನೋವಾಗಿತ್ತು. ಇದೀಗ ವನ್ಯಜೀವಿಗಳ ಕಳ್ಳಸಾಗಣೆಗೂ ಬ್ರೇಕ್ ಬೀಳುವ ಸಾಧ್ಯತೆಗಳಿವೆ.
ಕಳೆದ 2 ವರ್ಷಗಳಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಯಡಿ ರಾಜ್ಯದಲ್ಲಿ 620 ಕೇಸ್‌ಗಳು ದಾಖಲಾಗಿವೆ. ಈ ಕಾಯ್ದೆಯಡಿ ಕಠಿಣ ಕಾನೂನುಗಳಿದ್ದರೂ, ಚಾರ್ಜ್ ಶೀಟ್‌ನಲ್ಲಿ ಸೂಕ್ತ ವೈಜ್ಞಾನಿಕ ಸಾಕ್ಷ್ಯ ಸಲ್ಲಿಸದ ಹಿನ್ನೆಲೆಯಲ್ಲಿ ಬೆರಳೆಣಿಕೆಯಷ್ಟು ಆರೋಪಿಗಳಿಗೆ ಶಿಕ್ಷೆಯಾಗಿದೆ.
ಅವಯವಗಳ ಮೂಲಕ ಇಂತ ಹುದ್ದೇ ಪ್ರಾಣಿ ಎಂದು ವೈಜ್ಞಾನಿಕ ವಾಗಿ ದೃಢೀಕರಿಸಲು ಈ ಫೋರೆನ್ಸಿಕ್ ಲ್ಯಾಬ್ ಸಹಕಾರಿಯಾಗಿದೆ. ಸರ್ಕಾರದಿಂದ ಅನುದಾನ ದೊರೆತರೆ ಮುಂದಿನ ದಿನಗಳಲ್ಲಿ ಇಂತಹ ಲ್ಯಾಬ್ ಗಳನ್ನು ಮತ್ತಷ್ಟು ಮೇಲ್ದರ್ಜೆಗೇರಿಸಲು ಪ್ರಯತ್ನಿಸಲಾಗುವುದು
. -ಧರ್ಮೇಂದ್ರ ಕುಮಾರ್ ಮೀನ, ನಿರ್ದೇಶಕ, ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯ.
-ಅವಿನಾಶ್‌ಮೂಡಂಬಿಕಾನ