Advertisement

ವನ್ಯಜೀವಿ ವಿಭಾಗದ ತಕರಾರು

09:45 AM May 05, 2022 | Team Udayavani |

ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಎಳನೀರಿನ ಬಂಗಾರಪಲ್ಕೆ ಪ್ರದೇಶದಲ್ಲಿ ಕೆಲವು ತಿಂಗಳ ಹಿಂದೆ ಶಿಲಾನ್ಯಾಸಗೊಂಡು ನಿರ್ಮಾಣ ಗೊಳ್ಳುತ್ತಿರುವ ಕಿಂಡಿ ಅಣೆಕಟ್ಟಿನ ತಡೆಗೋಡೆ ಕಾಮಗಾರಿಗೆ ಇದೀಗ ಬೆಳ್ತಂಗಡಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ನಿರಾಪೇಕ್ಷಣ ಪತ್ರ ಪಡೆದಿಲ್ಲ ಎಂಬ ಕಾರಣ ನೀಡಿ ತಕರಾರು ಎತ್ತಿದ್ದರಿಂದ ಪ್ರಸ್ತುತ ಕಾಮಗಾರಿಗೆ ಹಿನ್ನಡೆಯಾಗಿದೆ.

Advertisement

ಬಂಗಾರಪಲ್ಕೆ ಪ್ರದೇಶಕ್ಕೆ 5 ಕೋಟಿ ರೂ.ವೆಚ್ಚದ ಸಂಪರ್ಕ ರಸ್ತೆ ಸಹಿತ ಕಿಂಡಿ ಅಣೆಕಟ್ಟು ಮಂಜೂರಾಗಿತ್ತು. ಈ ಕಾಮಗಾರಿಯಲ್ಲಿ 23.40 ಮೀ. ಉದ್ದ, 3.75 ಮೀ. ಅಗಲ, 3ಮೀ. ನೀರು ಸಂಗ್ರಹ ಸಾಮರ್ಥ್ಯದ 4 ಕಿಂಡಿಗಳಿರುವ ಅಣೆಕಟ್ಟು ಸಹಿತ ಸೇತುವೆ ಆಗಲಿತ್ತು.

ಇಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಬೇಕಾದರೆ ಸುಮಾರು 20ರಿಂದ 30ಮೀ. ಉದ್ದದ ತಡೆ ಗೋಡೆ ರಚಿಸಬೇಕಾದ ಅಗತ್ಯವಿದೆ. ಈಗಾಗಲೇ ಇದರ ಕಾಮಗಾರಿ ಆರಂಭವಾಗಿದೆ. ಈ ಪ್ರದೇಶದ ಸಮೀಪದಲ್ಲಿ ಸಾಕಷ್ಟು ಕೃಷಿ ತೋಟಗಳಿದ್ದು ನದಿ ನೀರು ತೋಟಗಳಿಗೆ ನುಗ್ಗುವುದನ್ನು ತಡೆಗಟ್ಟಲು ತಡೆಗೋಡೆ ಅನಿವಾರ್ಯವಾಗಿದೆ.

ಅರಣ್ಯ ಇಲಾಖೆ ತಕರಾರು

ಕಾಮಗಾರಿ ಆರಂಭವಾದ ಬಳಿಕ ಬೆಳ್ತಂಗಡಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ತಕರಾರು ಎತ್ತಿದೆ. ಎ.26ರಂದು ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಎಇಇಗೆ ನೋಟಿಸ್‌ ನೀಡಲಾಗಿದೆ. ಇದರಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗಡೆ ಇರುವ ಬಂಗಾರಪಲ್ಕೆಗೆ ಹೋಗುವ ಅರಣ್ಯಪ್ರದೇಶದಲ್ಲಿ ನಿರ್ಮಿಸುತ್ತಿರುವ ತಡೆಗೋಡೆ ಕಾಮಗಾರಿ ನಡೆಯುತ್ತಿರುವ ಕೆಲವು ಪ್ರದೇಶವು ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿದ್ದು, ಇಲ್ಲಿ ನಡೆಯುತ್ತಿರುವ ಕಾಮಗಾರಿಗೆ ಇಲಾಖೆಯಿಂದ ನಿರಾಕ್ಷೇಪಣ ಪತ್ರ ಪಡೆಯಲಾಗಿಲ್ಲವಾದ ಕಾರಣ ಇದು ಅನಧಿಕೃತ ಕಾಮಗಾರಿ ಯಾಗಿದೆ. ಈ ಕಾಮಗಾರಿಗೆ ಸರಕಾರ ಅಥವಾ ಇಲಾಖೆಯಿಂದ ಪಡೆದ ಅನುಮತಿಯನ್ನು ಕೂಡಲೇ ಒದಗಿಸಲು ಸೂಚಿಸಲಾಗಿದೆ. ತಪ್ಪಿದಲ್ಲಿ ಅಕ್ರಮ ಕಾಮಗಾರಿ ಎಂದು ಮೇಲಧಿಕಾರಿಗಳಿಗೆ ವರದಿ ಮಾಡುವುದಾಗಿ ತಿಳಿಸಲಾಗಿದೆ. ಇದು 1972ರ ವನ್ಯಜೀವಿ ಕಾಯ್ದೆಯ ಉಲ್ಲಂಘನೆ ಎಂದು ಪ್ರಕರಣ ದಾಖಲಿಸುವ ಕುರಿತು ವಿವರಿಸಲಾಗಿದೆ.

Advertisement

ತ್ರಿಶಂಕು ಸ್ಥಿತಿ

ಬಂಗಾರಪಲ್ಕೆ ಪ್ರದೇಶದ ಸುಮಾರು 20 ಪರಿಶಿಷ್ಟ ವರ್ಗದ ಕುಟುಂಬಗಳಿಗೆ ಇಲ್ಲಿ ಸಂಪರ್ಕರಸ್ತೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಗೊಳ್ಳುವರಿಂದ ಬಹುಕಾಲದ ಬೇಡಿಕೆ ಈಡೇರುವ ಹಂತದಲ್ಲಿತ್ತು. ಆದರೆ ಕಾಮಗಾರಿಗೆ ಈಗ ಅರಣ್ಯ ಇಲಾಖೆಯಿಂದ ತಕರಾರು ಬಂದಿರುವುದರಿಂದ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ. ಬಂಗಾರಪಲ್ಕೆಯ ಕುಟುಂಬಗಳು ಇದುವರೆಗೆ ಮಳೆಗಾಲದಲ್ಲಿ ಕಾಲು ಸಂಕದ ಆಶ್ರಯ ಪಡೆದಿದ್ದರು. ಬೇಸಗೆಯಲ್ಲಿ ನದಿ ಮೂಲಕ ಬೈಕ್‌ ಹಾಗೂ ಜೀಪು ಮಾತ್ರ ಸಾಹಸಪಟ್ಟು ಸಂಚರಿಸಲು ಸಾಧ್ಯವಿತ್ತು. ಮಳೆಗಾಲದಲ್ಲಿ ಅನಾರೋಗ್ಯ ಉಂಟಾದರೆ ಹೊತ್ತುಕೊಂಡು ಬರಬೇಕಿತ್ತು. ಸಂಪರ್ಕರಸ್ತೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಇಲ್ಲಿನ ಜನರಿಗೆ ಅನೇಕ ನಿರೀಕ್ಷೆಗಳನ್ನು ನೀಡಿತ್ತು. ಆದರೆ ಈಗ ಇದರ ಕಾಮಗಾರಿಗೆ ಅಡ್ಡಿ ಉಂಟಾಗಿರುವುದು ಮತ್ತಷ್ಟು ಸಮಸ್ಯೆ ನೀಡಲಿದೆ. ಇಲ್ಲಿ ಸಂಪರ್ಕ ರಸ್ತೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ತಡೆಗೋಡೆ ಅಡಿಪಾಯ. ಇದು ನಿರ್ಮಾಣವಾಗದೆ ಕಿಂಡಿ ಅಣೆಕಟ್ಟು, ಸಂಪರ್ಕ ಸೇತುವೆ, ರಸ್ತೆ ನಿರ್ಮಿಸಿದರೆ ಹೆಚ್ಚಿನ ಪ್ರಯೋಜನ ಸಿಗದು.

ಇನ್ನಷ್ಟು ಸಮಸ್ಯೆ

ಬಂಗಾರಪಲ್ಕೆ ಪ್ರದೇಶದ ಅಭಿವೃದ್ಧಿ ಬಹುವರ್ಷದ ಬೇಡಿಕೆಯಾಗಿದ್ದು, ಶಾಸಕ ಹರೀಶ್‌ ಪೂಂಜ ಮುತುವರ್ಜಿ ವಹಿಸಿ ಈ ಭಾಗದ ಜನರ ಅನೇಕ ಬೇಡಿಕೆಗಳಿಗೆ ಸ್ಪಂದನೆ ನೀಡಿದ್ದಾರೆ. ಇಲ್ಲಿನ ಮುಖ್ಯ ಕಾಮಗಾರಿ ಆರಂಭವಾದ ಬಳಿಕ ಅಡ್ಡಿಯುಂಟಾಗಿದೆ. ಇದರಿಂದ ಈ ಪ್ರದೇಶದ ಜನರು ಇನ್ನಷ್ಟು ಸಮಸ್ಯೆ ಎದುರಿಸುವಂತಾಗಿದೆ. ಇಲ್ಲಿ ನಡೆಯುತ್ತಿರುವ ಕಾಮಗಾರಿ ಯೋಜಿತ ಹಂತದಲ್ಲಿ ಪೂರ್ಣಗೊಂಡರೆ ಮಾತ್ರ ಈ ಪ್ರದೇಶದ ಜನರಿಗೆ ಅನುಕೂಲವಾದೀತು. -ಪ್ರಕಾಶ್‌ ಜೈನ್‌, ಎಳನೀರು ಗ್ರಾ.ಪಂ. ಸದಸ್ಯರು ಮಲವಂತಿಗೆ

ನೋಟಿಸ್‌ ಜಾರಿ

ತಡೆಗೋಡೆ ಕಾಮಗಾರಿ ನಡೆಯುತ್ತಿ ರುವಲ್ಲಿಯ ಕೆಲವು ಜಾಗಗಳು ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿವೆ. ಇಲ್ಲಿನ ಕಾಮಗಾರಿ ಕುರಿತು ನಮ್ಮ ಇಲಾಖೆಯಿಂದ ಅನುಮತಿ ಪಡೆಯಲಾಗದ ಕಾರಣ ಸಣ್ಣ ನೀರಾವರಿ ಇಲಾಖೆಗೆ ನೋಟಿಸ್‌ ನೀಡಲಾಗಿದೆ. ಇಲಾಖೆ ಅಥವಾ ಸರಕಾರದಿಂದ ಅನುಮತಿ ಪಡೆದು ನಡೆಸುವ ಕಾಮಗಾರಿಗಳಿಗೆ ಅಡ್ಡಿ ಇರುವುದಿಲ್ಲ -ಜಯಪ್ರಕಾಶ್‌ ಕೆ.ಕೆ., ಆರ್.ಎಫ್.ಒ., ವನ್ಯಜೀವಿ ವಲಯ, ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next