ಚನ್ನಪಟ್ಟಣ: ಪಟ್ಟಣದ ಹೊರವಲಯದಲ್ಲಿರುವ ಅಗ್ನಿಶಾಮಕ ಠಾಣೆ ಆವರಣಕ್ಕೆ ಸೋಮವಾರ ರಾತ್ರಿ ಒಂಟಿ ಸಲಗ ನುಗ್ಗಿ ದಾಂಧಲೆ ನಡೆಸಿದ್ದು, ಸಿಕ್ಕಸಿಕ್ಕ ಕಡೆ ಓಡಾಡಿ, ಸಿಬ್ಬಂದಿಯನ್ನು ಭಯ ಭೀತರನ್ನಾಗಿಸಿದೆ.
ಮಧ್ಯರಾತ್ರಿ ಸುಮಾರು 1 ಗಂಟೆಯಲ್ಲಿ ಆವರಣದೊಳಗೆ ಪವೇಶಿಸಿದ ಆನೆ, 3 ತೆಂಗಿನ ಮರ, ಹಲಸಿನ ಮರವನ್ನು ನಾಶಮಾಡಿದೆ. ಠಾಣೆಯ ಪಂಪ್‌ಹೌಸ್‌ಗೆ ಸಂಪರ್ಕ ಕಲ್ಪಿಸಿದ್ದ ವೈರಿಂಗ್ ಕಿತ್ತುಹಾಕಿದೆ. ಆವರಣದಲ್ಲಿದ್ದ ಸಿಬ್ಬಂದಿ ಬೈಕ್ ಜಖಂಗೊಳಿಸಿದೆ. ಆನೆಯ ಆಟಾಟೋಪ ನೋಡಿ ಸಿಬ್ಬಂದಿ ಕಂಗಾಲಾಗಿದ್ದಾರೆ.
ಎಚ್ಚೆತ್ತುಕೊಂಡ ಸಿಬ್ಬಂದಿ: ಠಾಣೆಯ ಸುತ್ತಲೂ ಇರುವ ಕಾಂಪೌಂಡ್ ಗೋಡೆ ಒಂದು ಭಾಗ ಕುಸಿದು 10 ವರ್ಷ ಕಳೆದರೂ, ಹೊಸದಾಗಿ ಕಾಂಪೌಂಡ್ ನಿರ್ಮಿಸದ ಕಾರಣ ಆನೆ ಸರಾಗ ವಾಗಿ ಆವರಣಕ್ಕೆ ಬಂದಿದೆ. ಚಿಕ್ಕ ಮಣ್ಣು ಗುಡ್ಡೆ ಅರಣ್ಯ ಪ್ರದೇಶದಿಂದ ಆನೆ ಆಗಮಿಸಿರ ಬಹುದು ಎಂದು ಶಂಕಿಸಲಾಗಿದೆ.
ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಅಗ್ನಿಶಾಮಕ ಠಾಣೆ ಹೊಂದಿ ಕೊಂಡಿದ್ದು, ಆನೆ ಹೆದ್ದಾರಿ ಕಡೆಗೆ ಆಗಮಿಸಿದ್ದರೆ ಇನ್ನಷ್ಟು ಅನಾಹುತ ಗಳು ಸಂಭ ವಿಸುತ್ತಿತ್ತು. ಹಾಗೆಯೇ ಠಾಣೆ ಪಕ್ಕದಲ್ಲೇ ಪೊಲೀಸ್ ತರಬೇತಿ ಶಾಲೆ ಸಹ ಇದ್ದು, ತರಬೇತಿ ಶಾಲೆ ಮೂಲಕವೇ ಅಗ್ನಿಶಾಮಕ ಠಾಣೆ ಕಡೆಗೆ ಆನೆ ಆಗಮಿಸಿದೆ. ಆದರೆ, ವಸತಿಗೃಹಗಳ ಕಡೆಗೆ ಆನೆ ಹೋಗದಿರು ವುದು ಆಗಬಹುದಾದ ಅನಾಹುತ ತಪ್ಪಿದೆ.
ಕೂಡಲೇ ಸಿಬ್ಬಂದಿ ಎಚ್ಚೆತ್ತುಕೊಂಡ ಪರಿ ಣಾಮ ಗದ್ದಲಕ್ಕೆ ಆನೆ ವಾಪಸ್ ಕಾಡಿನತ್ತ ಹೆಜ್ಜೆ ಹಾಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರೈತರ ಬೆಳೆ ನಾಶ: ತಾಲೂಕಿನ ಸಿದ್ದೇಗೌಡನ ದೊಡ್ಡಿ ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸಿ, ರೈತರ ಬೆಳೆ ನಾಶ ಮಾಡಿವೆ. ರೈತರ ತೆಂಗು, ಜೋಳ, ಮಾವು ಹಾಗೂ ಸಪೋಟ ಬೆಳೆಯನ್ನು ಆನೆಗಳು ಹಾನಿಮಾಡಿವೆ. ಮಾವು ಫಸಲಿನ ಸಮಯದಲ್ಲಿ ದಾಳಿಯಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಇನ್ನು ಪ್ರಮುಖವಾಗಿ ಬೇಬಿಕಾರ್ನ್ ಬೆಳೆಯನ್ನು ಆನೆಗಳು ತುಳಿದುಹಾಕಿವೆ.
ಅರಣ್ಯ ಇಲಾಖೆ ಆನೆಗಳ ದಾಳಿಯಿಂದ ಹಾನಿಯಾಗಿರುವ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಹಾಗೆಯೇ ಆನೆಗಳು ಮರಳಿ ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.