Advertisement

ಕಾಡಾನೆ ಸಮಸ್ಯೆ: ವಾರದೊಳಗೆ ಸಭೆ ನಿರೀಕ್ಷೆ

03:52 PM May 22, 2022 | Team Udayavani |

ಸಕಲೇಶಪುರ: ಕಾಡಾನೆ ಸಮಸ್ಯೆಗೆ ಅಂತ್ಯ ಕಾಣಿಸಲು ಅರಣ್ಯ ಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಇನ್ನು ಒಂದು ವಾರದೊಳಗೆ ತಾಲೂಕಿನಲ್ಲಿ ಸಭೆ ಕರೆಯುವ ನಿರೀಕ್ಷೆಯಿದೆ ಎಂದು ಶಾಸಕ ಎಚ್‌.ಕೆ ಕುಮಾರಸ್ವಾಮಿ ಹೇಳಿದರು.

Advertisement

ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ತಾಲೂಕಿನಲ್ಲಿ ಕಳೆದ ವಾರ ಪ್ರತಿಭಟನೆ ಮಾಡಿದರು. ನಂತರ ಅರಣ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿಸಚಿವರನ್ನು ಭೇಟಿ ಮಾಡಿ ಸಮಸ್ಯೆ ಕುರಿತು ಮಾಹಿತಿ ನೀಡಿದ್ದೆ. ಈ ಹಿನ್ನೆಲೆ ಅರಣ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಉನ್ನತ ಅರಣ್ಯ ಅಧಿಕಾರಿಗಳ ತಂಡದೊಂದಿಗೆ ತಾಲೂಕಿನಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಸಭೆ ಸೇರುವ ಭರವಸೆ ನೀಡಿದ್ದಾರೆ. ಈ ಸಭೆಯಲ್ಲಿ ಕಾಡಾನೆ ಸಮಸ್ಯೆ ಪರಿಹಾರಕ್ಕೆ ಪರಿಹಾರ ಹುಡುಕಲಾಗುತ್ತದೆ ಎಂದರು.

ಬಿಲ್ಡಪ್‌ ತಗೊಂಡ್ರೆ ಏನ್‌ ಹೇಳ್ಳೋಣ?: ಚುನಾವಣೆ ಹಿನ್ನೆಲೆ ಕಳೆದ ಕೆಲವು ದಿನಗಳ ಹಿಂದೆ ತಾಲೂಕಿಗೆ ಬಂದು ನನ್ನ ಮೇಲೆ ಟೀಕೆ ಮಾಡುತ್ತಿರುವ ಪುಷ್ಪಾ ಅಮರ್‌ನಾಥ್‌ ಆವರಿಗೆ ಈ ಕ್ಷೇತ್ರದ ಕುರಿತು ಏನು ಅರಿವಿದೆ? ಕಾಡಾನೆ ಸಮಸ್ಯೆ ಕುರಿತು ನನ್ನಷ್ಟು ವಿಧಾನಸೌಧದಲ್ಲಿ ಚಕಾರ ಎತ್ತಿದವರು ಬೇರೆ ಯಾರು ಇಲ್ಲ. ಚುನಾವಣೆಗೆ ಇನ್ನೂ 9 ತಿಂಗಳಿ ರುವ ಹಾಗೆ ಬಂದು ಬಿಲ್ಡ…ಅಪ್‌ ತಗೋಳುವವರಿಗೆ ಏನು ಹೇಳ್ಳೋಕಾಗೊತ್ತೆ? ಅವರು ಇಷ್ಟು ವರ್ಷ ಎಲ್ಲಿದ್ದರು ಎಂದು ಪ್ರಶ್ನಿಸಿದರು.

6 ವರ್ಷ ನಿದ್ರೆ ಮಾಡ್ತಿದ್ರಾ?: ಕಾಂಗ್ರೆಸ್‌ ಸರ್ಕಾರ ಸುಮಾರು 6 ವರ್ಷ ಅಧಿಕಾರ ನಡೆಸಿದ್ದು ಆ ಸಮಯದಲ್ಲಿ ಏಕೆ ಕಾಡಾನೆ ಸಮಸ್ಯೆ ಬಗೆಹರಿಸಲಿಲ್ಲ. ಈ ರೀತಿ ಸುಮ್ಮನೆ ಟೀಕೆ ಮಾಡು ವುದನ್ನು ಬಿಟ್ಟು ರಾಜಕೀಯ ಮಾಡಲಿ ಎಂದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ಫ‌ಲಿತಾಂಶದಲ್ಲಿ ತಾಲೂಕು ಜಿ‍ಲ್ಲೆಯಲ್ಲೆ ಅಗ್ರಸ್ಥಾನ ಪಡೆದಿದ್ದು ಆಲೂರು ದ್ವಿತೀಯಾ ಸ್ಥಾನ ಪಡೆದಿದೆ. ಈ ಹಿನ್ನೆಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತೇನೆ.

ಮಳೆಹಾನಿ ಪರಿಹಾರ ಬಿಡುಗಡೆ ಮಾಡಿಲ್ಲ: ಸರ್ಕಾರ ಮಳೆ ಹಾನಿಗೆ ಕಳೆದ ಬಾರಿ ಸಹ ಸರಿಯಾಗಿ ಪರಿಹಾರ ಬಿಡುಗಡೆ ಮಾಡಿಲ್ಲ. ಇತ್ತಿಚೆಗೆ ಸುರಿದ ಮಳೆ ವ್ಯಾಪಕ ಹಾನಿ ಮಾಡಿದ್ದು ಕೂಡಲೆ ಪರಿಹಾರ ಬಿಡುಗಡೆ ಮಾಡಲು ಕ್ರಮಕೈಗೊಳ್ಳಬೇಕು ಎಂದರು.

Advertisement

ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆ ಹಾಗೂ ತಾಲೂಕಿನ ಅಭಿವೃದ್ಧಿ ಮರೆತಿದ್ದು ಕನಿಷ್ಠ ಕೆಡಿಪಿ ಸಭೆಗಳನ್ನು ಸಹ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ತಾಲೂಕಿನಲ್ಲೂ ಸಹ ಜೆಡಿಎಸ್‌ಪದಾಧಿಕಾರಿಗಳ ಬದಲಾವಣೆ ಮಾಡಿ ಘಟಕಗಳ ಪುನರ್‌ ರಚಿಸಿ ಸಂ ಘಟನಾತ್ಮಕವಾಗಿ ಹೆಚ್ಚಿನ ಶಕ್ತಿ ತುಂಬಲಾಗುತ್ತದೆ ಎಂದರು.

ರಾಜಕೀಯ ಲಾಭಕ್ಕಾಗಿ ಶಾಸಕರ ವಿರುದ್ಧ ಟೀಕೆ: ಜಿಪಂ ಮಾಜಿ ಸದಸ್ಯ ಸುಪ್ರದೀಪ್ತ್ ಯಜಮಾನ್‌ಮಾತನಾಡಿ, ಶಾಸಕರು ಮಾಡಿರುವ ಕೆಲಸಗಳ ಕುರಿತು ಕ್ಷೇತ್ರದ ಜನತೆಗೆ ಅರಿವಿದೆ. ಎಲ್ಲಿಂದಲೋ ಚುನಾವಣೆಸಂದರ್ಭದಲ್ಲಿ ಬಂದು ರಾಜಕೀಯ ಲಾಭಕ್ಕಾಗಿ ಶಾಸಕರ ವಿರುದ್ಧ ಧ್ವನಿಯೆತ್ತಿದರೆ ಯಾವುದೆ ಪ್ರಯೋಜನವಾಗುವುದಿಲ್ಲ ಎಂದರು.

ಈ ವೇಳೆ ಪುರಸಭಾ ಅಧ್ಯಕ್ಷ ಕಾಡಪ್ಪ, ಮಾಜಿ ಜಿಪಂ ಸದಸ್ಯ ಸುಪ್ರದೀಪ್ತ್ ಯಜಮಾನ್‌, ಪುರಸಭಾ ಸದಸ್ಯ ಸಮೀರ್‌, ಎಪಿಎಂಸಿ ಮಾಜಿ ಅಧ್ಯಕ್ಷ ಕವನ್‌ ಗೌಡ, ಯುವ ಜೆಡಿಎಸ್‌ ಅಧ್ಯಕ್ಷ ಭಾಸ್ಕರ್‌ ಸೇರಿದಂತೆ ಇತರರು ಹಾಜರಿದ್ದರು.

ವಿವಿಧ ಯೋಜನೆ ಜಾರಿಗೆ ಕ್ರಮ: ಪುರಸಭೆಯ ನಗರೋತ್ಥಾನ ಯೋಜನೆಯಲ್ಲಿ ಸುಮಾರು 4 ಕೋಟಿ ಅನುದಾನ ಬಿಡುಗಡೆಯಾಗಿದ್ದು ಇದರಲ್ಲಿ 1.5ಕೋಟಿ ವೆಚ್ಚದಲ್ಲಿ ಈಜುಕೊಳ ಹಾಗೂ ಸುಮಾರು 1 ಕೋಟಿ ರೂ.ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ಮಾಡುವ ಯೋಜನೆಯಿದೆ. ಹಾಗೂ ಹಳೆ ತಾಲೂಕು ಕಚೇರಿ ಆವರಣದ ಒಂದು ಬದಿಯಲ್ಲಿ ಫ‌ುಡ್‌ಪಾರ್ಕ್‌ ಮಾಡಲಾಗುತ್ತದೆ. ಅಲ್ಲದೆ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನೂತನ ಪ್ರವಾಸಿ ಮಂದಿರ ನಿರ್ಮಾಣ ಮಾಡಲಾಗುತ್ತದೆ ಎಂದರು.

ರಾಷ್ಟ್ರೀಯ ಹೆದ್ದಾರಿ 75 ರ ಕಾಮಗಾರಿ ವಿಳಂಬ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೆ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ನೇರವಾಗಿ ನಿತಿನ್‌ ಗಡ್ಕರಿ ಅವರನ್ನು ಮಾಜಿ ಪ್ರಧಾನಿ ಎಚ್‌.ಡಿ ದೇವೆಗೌಡರ ಮುಖಾಂತರ ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಮನವಿ ಸಲ್ಲಿಸುತ್ತೇನೆ ಎಂದು ಶಾಸಕ ಎಚ್‌.ಕೆ.ಕುಮಾರಸ್ವಾಮಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next