ಹುಣಸೂರು: ದಾರಿತಪ್ಪಿ ಕಾಡಿನಿಂದ ನಾಡಿಗೆ ಬಂದ ಕಾಡಾನೆಯೊಂದು ದಿಕ್ಕು ಕಾಣದೆ ಕಬ್ಬಿನ ಗದ್ದೆಯನ್ನು ಸೇರಿದ್ದು, ಆನೆಯನ್ನು ಕಾಡಿಗಟ್ಟಲು ಜನರು ಹರಸಾಹಸ ಪಡುತ್ತಿದ್ದಾರೆ.
ಅಂತರಸಂತೆ ಸಮೀಪದ ಸೋಗಹಳ್ಳಿ ಗ್ರಾಮದ ಬಳಿ ಕಾಡಾನೆಯೊಂದು ಬೆಳ್ಳಂ ಬೆಳಿಗ್ಗೆ ಪ್ರತ್ಯಕ್ಷವಾಗಿ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು. ಬಳಿಕ ಆನೆ ಕಬ್ಬಿನ ಗದ್ದೆಯೊಂದರಲ್ಲಿ ಬೀಡುಬಿಟ್ಟಿದ್ದು, ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಎ.ಸಿ.ಎಫ್. ಮಹದೇವಪ್ಪ ನೇತೃತ್ವದಲ್ಲಿ 20 ಕ್ಕೂ ಹೆಚ್ಚು ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದು. ಕಾಡಾನೆ ಸೇರಿಕೊಂಡಿರುವ ಕಬ್ಬಿನ ಗದ್ದೆಯನ್ನು ಸುತ್ತುವರಿದಿದ್ದು, ಆನೆ ಗ್ರಾಮದತ್ತ ನುಗ್ಗದಂತೆ ತಡೆದಿದ್ದಾರೆ.
ಆನೆಯನ್ನು ಹಿಮ್ಮೆಟ್ಟಿಸಲು ಪಟಾಕಿ ಸಿಡಿಸಿ ಪ್ರಯತ್ನಿಸಿದಾದರು ಆನೆ ಮಾತ್ರ ಕಬ್ಬಿನ ಗದ್ದೆಯಿಂದ ಕಾಡಿನತ್ತ ತೆರಳದೆ ಅರಣ್ಯ ಸಿಬ್ಬಂದಿಗಳನ್ನು ಕಾಡುತ್ತಿದೆ. ಈ ಆನೆ ಬಂಡೀಪುರ ಕಡೆಯಿಂದ ಕಬಿನಿ ಹಿನ್ನೀರಿನಲ್ಲಿ ಹಾದಿ ತಪ್ಪಿ ಬಂದಿರಬಹುದು ಎಂದು ಶಂಕಿಸಲಾಗಿದ್ದು, ಆನೆಯನ್ನು ಅರಣ್ಯಕ್ಕೆ ಸೇರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ಎಸಿಎಫ್ ಮಹದೇವ್, ವಲಯ ಅರಣ್ಯಾಧಿಕಾರಿಗಳಾದ ಸಿದ್ಧರಾಜು, ಮಧು, ಪಿಎಸ್‍ಐ ಜಯಪ್ರಕಾಶ್ ಸೇರಿದಂತೆ ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಬೀಡು ಬಿಟ್ಟು ಆನೆಯನ್ನು ಕಾಡು ಸೇರಿಸಲು ಹರಸಾಹಸ ಪಡುತ್ತಿದ್ದಾರೆ.