ಗುಂಡ್ಲುಪೇಟೆ(ಚಾಮರಾಜನಗರ): ಜಮೀನಿನಲ್ಲಿ ಕಾವಲು ಕಾಯಲು ಹೋಗಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ರೈತನ ಎರಡು ಕಾಲಿನ ಮೂಳೆಗಳು ಮುರಿದು ಹೋಗಿರುವ ಘಟನೆ ತಾಲೂಕಿನ ಗೋಪಾಲಪುರ ಗ್ರಾಮದ ಜಮೀನೊಂದರಲ್ಲಿ ನಡೆದಿದೆ.
ಗೋಪಾಲಪುರ ಗ್ರಾಮದ ಮಹದೇವಪ್ಪ (65) ಗಾಯಾಳು ರೈತ.
ಈತ ಜ.26ರ ಗುರುವಾರ ರಾತ್ರಿ ಕಾವಲಿಗೆ ಹೋಗಿದ್ದು, ಶುಕ್ರವಾರ ಬೆಳಗಿನ ಜಾವ ಜಮೀನಿನಲ್ಲಿ ಇದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಪರಿಣಾಮ ರೈತನ ಎರಡು ಕಾಲಿನ ಮೂಳೆಗಳು ಮುರಿದು ಹೋಗಿದೆ.
ಸ್ಥಳೀಯರು ಗಾಯಾಳು ರೈತನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ.
ಮಾಹಿತಿ ಅರಿತ ಬಂಡೀಪುರ ಜಿ.ಎಸ್.ಬೆಟ್ಟ ವಲಯ ಅರಣ್ಯಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸೂಕ್ತ ಪರಿಹಾರಕ್ಕೆ ಒತ್ತಾಯ: ಕಾಡಾನೆ ದಾಳಿಯಿಂದ ರೈತನ ಎರಡು ಕಾಲಿನ ಮೂಳೆ ಮುರಿದು ಹೋಗಿರುವ ಹಿನ್ನಲೆ ಅರಣ್ಯ ಇಲಾಖೆ ಅಧಿಕಾರಿಗಳು ಚಿಕಿತ್ಸೆ ವೆಚ್ಚ ಭರಿಸುವ ಜೊತೆಗೆ ಸೂಕ್ತ ಪರಿಹಾರ ನೀಡಬೇಕು. ಈ ಭಾಗದಲ್ಲಿ ಕಾಡಾನೆ ರೈತರ ಜಮೀನಿನ ಮೇಲೆ ನಿರಂತರವಾಗಿ ಲಗ್ಗೆಯಿಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಕೆಟ್ಟು ನಿಂತಿರುವ ಸೋಲಾರ್ ತೂಗು ಬೇಲಿ ಸರಿಪಡಿಸುವುದರ ಜೊತೆಗೆ ಕುಸಿದಿರುವ ಕಂದಕವನ್ನು ದುರಸ್ತಿ ಪಡಿಸುವಂತೆ ರೈತ ಮುಖಂಡ ಹಂಗಳ ಮಾಧು ಒತ್ತಾಯಿಸಿದ್ದಾರೆ.