ಶಿರ್ವ: ಇಲ್ಲಿಗೆ ಸಮೀಪದ ಪಿಲಾರುಕಾನ ರಕ್ಷಿತಾರಣ್ಯದ ಪ್ರದೇಶ ಮತ್ತು ಸೂಡ ಗ್ರಾಮದಲ್ಲಿ ಕಾಡುಕೋಣಗಳ ಹಾವಳಿ ವಿಪರೀತವಾಗಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಕಾಡಿನಂಚಿನ ಬಳಿಯ ಕೃಷಿ ಭೂಮಿಗೆ ಕಾಡುಕೋಣಗಳು ದಾಳಿ ನಡೆಸುತ್ತಿದ್ದು ಕೃಷಿಕರು ಕಂಗಾಲಾಗಿದ್ದಾರೆ. ಪಿಲಾರುಕಾನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬಳಿ ಸೋಮವಾರ 3 ಭಾರೀ ಗಾತ್ರದ ಕಾಡುಕೋಣಗಳು ಮತ್ತು ಸುಮಾರು ನಾಲ್ಕೈದು ಮರಿ ಕೋಣಗಳು ಕಂಡು ಬಂದಿದ್ದು ದೇವಸ್ಥಾನಕ್ಕೆ ಬರುತ್ತಿದ್ದ ಭಕ್ತರು ಭಯಭೀತರಾಗಿದ್ದಾರೆ.
ಸುಮಾರು ಏಳೆಂಟು ಕಾಡುಕೋಣಗಳ ಹಿಂಡು ಕೃಷಿ ಭೂಮಿಗೆ ಲಗ್ಗೆ ಇಡುತ್ತಿದ್ದು, ಪಿಲಾರು ಗ್ರಾಮದ ಮಜಲಬೆಟ್ಟು, ಮಿತ್ತಬೆಟ್ಟು, ಕುದ್ರೆಬೆಟ್ಟು, ಗುಂಡುಪಾದೆ ಬಳಿ ಮತ್ತು ಸೂಡ ಗ್ರಾಮದ ಕಾಡಿನಂಚಿನಲ್ಲಿ ಬೆಳೆದ ಭತ್ತದ ಗದ್ದೆ, ತರಕಾರಿ, ಬಾಳೆ, ಅಡಿಕೆ ಮತ್ತಿತರ ಕೃಷಿಯನ್ನು ಹಾಳುಗೆಡವುತ್ತಿವೆ.
ಅರಣ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಭಯಭೀತರಾಗಿದ್ದ ಜನರು ಮತ್ತು ಕೃಷಿಕರ ಹಿತ ಕಾಯಬೇಕೆಂದು ಪ್ರಗತಿಪರ ಕೃಷಿಕ ಪಿಲಾರು ಮಿತ್ತಬೆಟ್ಟು ಅರುಣ್ ಡಿಸೋಜಾ ಮತ್ತು ಪಿಲಾರುಕಾನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪಿಲಾರು ವಾದಿರಾಜ ಉಡುಪ ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆ ಕಾಡುಕೋಣಗಳ ಹಾವಳಿಗೆ ಕ್ರಮಕೈಗೊಳ್ಳಲು ಪ್ರಯತ್ನಿಸುತ್ತಿದ್ದು, ಅರಣ್ಯ ಪ್ರದೇಶದಲ್ಲಿ ಅಡ್ಡಾಡುವ ಜನರು ಜಾಗರೂಕರಾಗಿರಬೇಕೆಂದು ಸ್ಥಳೀಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.