Advertisement
ಜಗತ್ತಿನ ಜನರೆಲ್ಲ ಕಂಡ ಕಂಡದ್ದನ್ನೆಲ್ಲ ಅಧ್ಯಾತ್ಮ ಎನ್ನುವಾಗ ನಾನೇಕೆ “ಸೀರೆ ಎಂಬ ಅಧ್ಯಾತ್ಮ’ ಅನ್ನಬಾರದು ಎನ್ನಿಸಿತು. ನನ್ನದು ಮೋಹಭರಿತವಾದದ್ದು! ಬದುಕಿನ ಸಣ್ಣ ಪುಟ್ಟ ಸಂತಸಗಳನ್ನು ಬಿಡದೆ ಅನುಭವಿಸುವ ಹುಚ್ಚಿರುವ ನನಗೆ ಅಧಿಕಾರ, ಹಣ ಇತ್ಯಾದಿ ಮೋಹಗಳೆಲ್ಲ ತೀರಾ ಚಿಕ್ಕ ವಯಸ್ಸಿನಲ್ಲಿ “ಬಾಹುಬಲಿಯ’ ಪಾಠ ಮಾಡಿ ಮಾಡಿ ತೊಲಗಿಹೋದವು. ಅಧಿಕಾರದ ಕುರ್ಚಿ ಮುಳ್ಳಿನ ಸಿಂಹಾಸನದಂತೆ ತೋರುತ್ತಿದ್ದುದರಿಂದ ಅಲ್ಲಿ ಕುಳಿತುಕೊಳ್ಳುವ ಬದಲು ವಿದ್ಯಾರ್ಥಿಗಳ ಜೊತೆ ಕಾರಿಡಾರ್‌ನಲ್ಲಿ ಓಡಾಡುತ್ತ, ತರಗತಿಗೆ ಹೋಗುತ್ತ, ಸ್ಟಾಫ್ರೂಮ್‌ನಲ್ಲಿ ಹರಟುತ್ತ ನಿರಾಳವಾಗಿಬಿಡುತ್ತಿದ್ದೆ. ಯಾರಿಗೋ ಪ್ರಶಸ್ತಿ ಬಂದರೆ, ಯಾರೋ ಏನನ್ನೋ ಸಾಧಿಸಿದರೆ ಒಳಗೆ ಸಣ್ಣದೊಂದು ಪೈಪೋಟಿಯ ಕಿಚ್ಚು ಸಹ ಹುಟ್ಟಿಕೊಳ್ಳದೆ ಆರಾಮವಾಗಿ ಅಭಿನಂದನೆ ಹೇಳಿ ಮುಂದಿನ ಕೆಲಸಕ್ಕೆ ಹೋಗುತ್ತಿದ್ದೆ.
Related Articles
Advertisement
ಇದರ ಜೊತೆಗೆ ಕಾಲೇಜಿಗೆ ಮತ್ತು ಮನೆಗೆ ಬರುತ್ತಿದ್ದ ಬಂಗಾಳಿ ಬಾಬುಗಳು! ಗಾರ್ಡನ್ ಸೀರೆಯನ್ನು ಕೊಳ್ಳಲು ನಡೆಯುತ್ತಿದ್ದ ನೂಕು ನುಗ್ಗಲನ್ನಂತೂ ವರ್ಣಿಸಲು ಸಾಧ್ಯವೇ ಇಲ್ಲ. ಒಬ್ಬೊಬ್ಬರು ಹತ್ತಾರು ಸೀರೆಗಳನ್ನು ಎಳೆದು, ಗುಡ್ಡೆ ಹಾಕಿಕೊಂಡು, ಯಾವುದೇ ಡ್ಯಾಮೇಜ್ ಇಲ್ಲವೆಂದು ನೋಡಿ, ಒಂದು ಕಡೆ ಇಟ್ಟುಕೊಳ್ಳುವುದು. ಅಷ್ಟರಲ್ಲಿ ನಮ್ಮಂತೆ ಬೇರೆ ಯಾರೋ ಹೊತ್ತುಕೊಂಡು ಹೋಗುತ್ತಿದ್ದ ಸೀರೆಗಳನ್ನು ನೋಡಿ ನಾವದನ್ನು ಕೊಳ್ಳಬೇಕಿತ್ತು ಎಂದು ಕರುಬುವುದು, ಅವರು ಎಸೆಯುವುದನ್ನೇ ಕಾದು ಎತ್ತಿಕೊಂಡು ಬಂದು ಮತ್ತೆ ಎಸೆಯುವುದು. ಎಷ್ಟು ಬಣ್ಣಗಳನ್ನು ಕಣ್ಣಿಗೆ ತುಂಬಿಕೊಂಡರೂ ತಣಿವಿಲ್ಲ. ಅಮ್ಮನಂತೂ, “ನಿನಗೇನೆ ಇಷ್ಟು ಸೀರೆ ಬರ?’ ಎಂದು ಬೈಯುತ್ತಿದ್ದಳು. ಪಾಪ, ಅವಳ ಬಳಿ ಇರುತ್ತಿದ್ದುದೇ ಎರಡೋ ಮೂರೋ ಸೀರೆಯಂತೆ. ವಿಶಾಲಿಗೆ ಮೈಮೇಲೊಂದು, ಗಳುವಿನ ಮೇಲೊಂದು ಸೀರೆ ಎಂದು ಜನ ಆಡಿಕೊಳ್ಳುತ್ತಿದ್ದರಂತೆ. ಬಹುಶಃ ಅಮ್ಮನ ಬಳಿ ಸೀರೆಗಳಿರಲಿಲ್ಲ ಎನ್ನುವುದೇ ನನ್ನ ಮನಸ್ಸನ್ನು ಚುಚ್ಚಿ ಈ ಹುಚ್ಚು ಹಿಡಿಸಿತೋ, ತಿಳಿಯದು. ಎಷ್ಟೋ ಮದುವೆ ಮುಂಜಿಗಳಿಗೆ, ಸೀರೆಯಿಲ್ಲ ಎನ್ನುವ ಕಾರಣಕ್ಕೇ ಅಮ್ಮ ಹೋಗುತ್ತಿರಲಿಲ್ಲವಂತೆ. ಅಮ್ಮನಿಗೆ ತಮಿಳುನಾಡಿನ “ಚುಂಗುಡಿ’ ಸೀರೆ ತುಂಬಾ ಇಷ್ಟ. ಹಾಗಾಗಿ ನಾವೆಲ್ಲಾ ಅವಳಿಗೆ ಅದನ್ನೇ ಕೊಡಿಸುತ್ತಿದ್ದೆವು.
“ಬಣ್ಣ ಬಣ್ಣ, ನನ್ನ ಒಲವಿನ ಬಣ್ಣ’ ಅಂತ ಹಾಡು ಬಂತಲ್ಲ! ಆಗ ತೊಗೊಳ್ಳಿ, ಜಾರ್ಜೆಟ್ ಶಿಫಾನ್ ಅಂತ “ಪ್ಲೇನ್’ ಸೀರೆಗಳ ಹುಚ್ಚು ಹಿಡಿದು ಹೋಯಿತು. ಒಂದು ದಿನ ಹಸಿರು, ಮತ್ತೂಂದು ದಿನ ಹಳದಿ, ಆಮೇಲೆ ನೀಲಿ ಅಂತೆಲ್ಲ ಸಾಪ್ತಾಹಿಕ ಶುರುವಾಗಿದ್ದು ಮಾಸಿಕದವರೆಗೂ ವಿಸ್ತರಿಸಿತು. ಆನೇಕಲ… ಕಾಲೇಜಿಗೆ ಹೋಗುವಾಗ ಸೀರೆಯ ಬಣ್ಣದ್ದೇ ಕುಂಕುಮ, ಬಳೆ, ಎರಡು ಜಡೆಗೆ ಅದೇ ಬಣ್ಣದ “ಲವ್ ಇನ್ ಟೋಕಿಯೋ’ ಹೇರ್‌ಬ್ಯಾಂಡ್! “ಶಿವರಂಜಿನಿ’, “ಪ್ರತಿಘಟನ’ ಅಂತೆಲ್ಲ ತೆಲುಗು ಸಿನಿಮಾ ಬಂದ ಮೇಲಂತೂ “ಚಂದೇರಿ ಕಾಟನ್’ ಬದುಕಾಯಿತು! ಚಲನಚಿತ್ರಗಳು ಬದಲಾದಂತೆ ಸೀರೆಗಳ ಬಣ್ಣ, ವೈವಿಧ್ಯ ಎಲ್ಲವೂ ಬದಲಾದವು. ವಿಮಲ್ ಸೀರೆಗಳ ಒಂದು ಟ್ರೆಂಡ್ ಶುರುವಾಗಿ, ಪ್ರತಿಯೊಬ್ಬರೂ ಅದನ್ನು ಉಟ್ಟು, ವಿಶೇಷತೆ ಕಳೆದುಕೊಂಡು ಮೂಲೆಗುಂಪಾಯಿತು. ಚೈನಾ ಸಿಲ್ಕ್ ಎಂದು ಸಿಕ್ಕ ಅಂಗಡಿಗಳಿಗೆಲ್ಲ ಓಡಿದ್ದಾಯಿತು. ಇಳಕಲ್ ಸೀರೆಗೆ ಕಸೂತಿ ಮಾಡಿಸಿದ್ದಾಯಿತು. ಅಪ್ಲಿಕ್ ವರ್ಕ್ ಸೀರೆಗಳು ಮೈಮನವನ್ನು ನಿಜದ ಅರ್ಥದಲ್ಲಿ ಸೂರೆಗೊಂಡಿದ್ದವು. ಕೌದಿ ಹೊಲಿದಂತೆ ಬಣ್ಣ ಬಣ್ಣದ ಬಟ್ಟೆಗಳಿಂದ ವಿನ್ಯಾಸಗಳನ್ನು ಮಾಡಿರುತ್ತಿದ್ದರು. ನಾನಂತೂ ಅದನ್ನು ತಂದು ಬ್ಲೌಸ್‌ಗೆ ಸಹ ಅದೇ ರೀತಿಯಲ್ಲಿ ವಿನ್ಯಾಸ ಮಾಡಿಕೊಳ್ಳುತ್ತಿದ್ದೆ.
ಸೀರೆಯೊಂದು ಭೌತಿಕ, ಅಧ್ಯಾತ್ಮ, ಅಸ್ತಿತ್ವದ ಪ್ರತೀಕವಾಗಿ ಭಾರತದಲ್ಲಿ ರೂಪುಗೊಂಡಿದೆ. ಈ ಸೀರೆಯಲ್ಲಿ ಸ್ಥಾನ ಮಾನ- ಶೋಷಣೆ, ಬಂಧನ- ಬಿಡುಗಡೆ, ನೆಮ್ಮದಿ- ಉದ್ವಿಗ್ನತೆ ಎಲ್ಲವೂ ಇವೆ. ಅದು ಸುಟ್ಟಾಗ, ಹರಿದಾಗ, ಕಳುವಾದಾಗ ಸ್ಫೋಟಗೊಳ್ಳುವುದು, ತಾವಿರುವ ಸ್ಥಿತಿಯನ್ನು ಮೀರಲು ಕನಸಿಗೆ ಸೀರೆಯೇ ಮೂಲವಾಗುವುದು, ಕೌದಿಯಾಗಿ, ಜೋಲಿಯಾಗಿ, ಕುಂಚಿಗಿಯಾಗಿ, ತಲೆದಿಂಬಾಗಿ ವಿವಿಧ ಸ್ವರೂಪಗಳಲ್ಲಿ ರೂಪಾಂತರಗಳಾಗಿ ಕವಿಯ ಅನುಭವದಲ್ಲಿ ಹೊಸ ರೂಪಕವಾಗಿ ನೆಲೆಗೊಳ್ಳುವುದು ಹೀಗೆ. ಸೀರೆ ಸಂಸಾರದಂತೆ ಸುತ್ತಿಕೊಳ್ಳುತ್ತ ಬಂಧನವಾಗುತ್ತ ಹೋಗುವ ರೂಪಕ ಒಂದಾದರೆ, ಅಕ್ಕಮಹಾದೇವಿ ಕಳಚಿಟ್ಟ ಬಂಧನದ ಪ್ರತಿಮೆಯ ಸೀರೆ ಇನ್ನೊಂದು ಬಗೆಯದು. ಸೀರೆ, ಹೆಣ್ಣಿನ ಕಲಾ ಅಭಿವ್ಯಕ್ತಿ ಎನ್ನುವ ವ್ಯಾಖ್ಯಾನದ ಜೊತೆಗೆ ಜೀವರಸವನ್ನು ಸೋಸಿ, ಧೂಳು ಕಸವನ್ನೆಲ್ಲ ಕೊಡವುವ, ಅವಮಾನ, ಬೈಗುಳಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಕೆಲಸ ಮಾಡುವ ಜೀವ ಚೈತನ್ಯದ ಸಾರ್ಥಕ ಸಂಕೇತವೂ ಹೌದು. ಹೊಲಿದರೆ ದುಪ್ಪಟಿ, ಹರಿದರೆ ಕೊಳೆ ಒರೆಸುವ ಬಟ್ಟೆ, ಚಿಂದಿಯಾದರೆ ಲಕ್ಷಾಂತರ ದೀಪ ಉರಿಸುವ ಬತ್ತಿ! ಸೀರೆ ನೆಮ್ಮದಿ, ಸೌಂದರ್ಯ, ಸಾರ್ಥಕತೆಯ ಅನುಭವ ನೀಡುತ್ತಲೇ ಅವಮಾನ, ಸಂಕಟ, ನೋವು, ಶೋಷಣೆಗಳಿಗೂ ಕಾರಣವಾಗಿಬಿಡುತ್ತದೆ. ಬರಿಯ ಸುಖ ಲೋಲುಪ “ಇಂದ್ರಿಯ ಬದುಕಿನ’ ಸಂಕೇತ ಮಾತ್ರವಲ್ಲ ಈ ಸೀರೆ, ಬಿಚ್ಚಿದರೆ ಬಯಲಾಗಿ ಅಲೌಕಿಕವಾಗುವ ಸಾಮರ್ಥ್ಯ ಇರುವುದರಿಂದಲೇ ಮಹಾಕಾವ್ಯದಿಂದ ಇಂದಿನವರೆಗೂ ಪ್ರಬಲ ರೂಪಕವಾಗಿದೆ.
ಎಂ.ಆರ್. ಕಮಲಾ