Advertisement

ಒಂದು ವಿಕೆಟ್‌ನಿಂದ ಗೆದ್ದ ವಿಂಡೀಸ್‌

09:51 PM Aug 16, 2021 | Team Udayavani |

ಕಿಂಗ್‌ಸ್ಟನ್‌ (ಜಮೈಕಾ): ಅದೃಷ್ಟದ ಗಟ್ಟಿ ಬಲವನ್ನು ಹೊಂದಿದ್ದ ವೆಸ್ಟ್‌ ಇಂಡೀಸ್‌ ಪ್ರವಾಸಿ ಪಾಕಿಸ್ಥಾನದೆದುರಿನ ಕಿಂಗ್‌ಸ್ಟನ್‌ ಟೆಸ್ಟ್‌ ಪಂದ್ಯವನ್ನು ಒಂದು ವಿಕೆಟ್‌ನಿಂದ ರೋಚಕವಾಗಿ ಗೆದ್ದು ಸರಣಿ ಮುನ್ನಡೆ ಸಾಧಿಸಿದೆ.

Advertisement

ಗೆಲುವಿಗೆ 168 ರನ್ನುಗಳ ಸಾಮಾನ್ಯ ಗುರಿ ಪಡೆದ ಕೆರಿಬಿಯನ್‌ ಪಡೆ ಪಾಕ್‌ ಬೌಲಿಂಗ್‌ ಆಕ್ರಮಣಕ್ಕೆ ತತ್ತರಿಸಿ ಸೋಲುವ ಹಂತಕ್ಕೆ ಬಂದಿತ್ತು. 151ಕ್ಕೆ 9ನೇ ವಿಕೆಟ್‌ ಬಿದ್ದಾಗ ವಿಂಡೀಸಿಗೆ ಸೋಲು ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ಕೆಮರ್‌ ರೋಚ್‌ (52 ಎಸೆತಗಳಿಂದ ಔಟಾಗದೆ 30) ಮತ್ತು ಅಂತಿಮ ಆಟಗಾರ ಜೇಡನ್‌ ಸೀಲ್ಸ್‌ (13 ಎಸೆತ, ಔಟಾಗದೆ 2) 4.1 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿ, ಉಳಿದ 17 ರನ್‌ ಬಾರಿಸಿ ತಂಡವನ್ನು ದಡ ಮುಟ್ಟಿಸಿಯೇ ಬಿಟ್ಟರು!

36 ರನ್ನುಗಳ ಹಿನ್ನಡೆಗೆ ಸಿಲುಕಿದ್ದ ಪಾಕಿಸ್ಥಾನ ದ್ವಿತೀಯ ಸರದಿಯಲ್ಲಿ 203ಕ್ಕೆ ಕುಸಿಯಿತು. ಸೀಲ್ಸ್‌ 55 ರನ್ನಿತ್ತು 5 ವಿಕೆಟ್‌ ಉರುಳಿಸಿದರೆ, ರೋಚ್‌ 30 ರನ್ನಿಗೆ 3 ವಿಕೆಟ್‌ ಕಿತ್ತರು. ಬಳಿಕ ಈ ಬೌಲಿಂಗ್‌ ಜೋಡಿಯೇ ಅಂತಿಮ ವಿಕೆಟಿಗೆ ಅಂಟಿಕೊಂಡು ತಂಡದ ಗೆಲುವನ್ನು ಸಾರಿದ್ದು ವಿಶೇಷ.

ಪಾಕ್‌ ಪರ ನಾಯಕ ಬಾಬರ್‌ ಆಜಂ 55, ಆರಂಭಕಾರ ಅಬಿದ್‌ ಅಲಿ 34, ಕೀಪರ್‌ ಮೊಹಮ್ಮದ್‌ ರಿಜ್ವಾನ್‌ 30 ರನ್‌ ಹೊಡೆದರು.

ಚೇಸಿಂಗ್‌ ಆಘಾತ :

Advertisement

ಚೇಸಿಂಗ್‌ ವೇಳೆ ವಿಂಡೀಸ್‌ 16 ರನ್‌ ಆಗುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡು ಆಘಾತಕ್ಕೊಳಗಾಯಿತು. ಈ ಹಂತದಲ್ಲಿ ಜರ್ಮೈನ್‌ ಬ್ಲ್ಯಾಕ್‌ವುಡ್‌ (55) ಮತ್ತು ರೋಸ್ಟನ್‌ ಚೇಸ್‌ (22) 68 ರನ್‌ ಜತೆಯಾಟ ನಡೆಸಿ ತಂಡವನ್ನು ಹಳಿಗೆ ತಂದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಪಾಕ್‌ ಬೌಲಿಂಗ್‌ ಮತ್ತೆ ಘಾತಕವಾಗಿ ಪರಿಣಮಿಸಿತು. 114 ರನ್‌ ಆಗುವಷ್ಟರಲ್ಲಿ ಆತಿಥೇಯರ 7 ವಿಕೆಟ್‌ ಹಾರಿ ಹೋಯಿತು. ಪಂದ್ಯ ತೀವ್ರ ಕುತೂಹಲ ಘಟ್ಟ ತಲುಪಿತು. ಆದರೆ ಪಾಕಿಗೆ ಅಂತಿಮ ವಿಕೆಟ್‌ ಮರೀಚಿಕೆಯೇ ಆಗುಳಿಯಿತು.

ಪಾಕಿಸ್ಥಾನ ಪರ ಶಾಹೀನ್‌ ಅಫ್ರಿದಿ 4, ಹಸನ್‌ ಅಲಿ 3, ಫಾಹಿಮ್‌ ಅಶ್ರಫ್ 2 ವಿಕೆಟ್‌ ಕೆಡವಿದರು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-217 ಮತ್ತು 203. ವೆಸ್ಟ್‌ ಇಂಡೀಸ್‌-253 ಮತ್ತು 9 ವಿಕೆಟಿಗೆ 168. ಪಂದ್ಯಶ್ರೇಷ್ಠ: ಜೇಡನ್‌ ಸೀಲ್ಸ್‌.

Advertisement

Udayavani is now on Telegram. Click here to join our channel and stay updated with the latest news.

Next