Advertisement

ಜಾಗತಿಕ ಪತ್ರಿಕಾ ಲೋಕದ ಹೆಜ್ಜೆ ಗುರುತು…“ನ್ಯೂಸಿಯಂ”

06:06 PM Jan 01, 2021 | Team Udayavani |

ಪತ್ರಿಕೆ-ಮಾಧ್ಯಮ ಎಂದರೆ ಇಂದು ಎಲ್ಲರಿಗೂ ಗೊತ್ತು. ಇದೀಗ ಆಧುನಿಕ ಬದುಕಿನ ಅವಿಭಾಜ್ಯ ಅಂಗ. ಜಗತ್ತಿನ ಆಗುಹೋಗುಗಳನ್ನು ಅರಿಯಲು ಮಾಧ್ಯಮವೇ ಪ್ರಮುಖ ಸಾಧನ. ಪತ್ರಿಕೆಗಳ ಪರಿಕಲ್ಪನೆ ಹುಟ್ಟಿ ಐದಾರು ಶತಮಾನಗಳೇ ಕಳೆದುಹೋಗಿದೆ. ಇದರ ಬೆಳವಣಿಗೆ ನಾಲ್ಕಾರು ಹಂತಗಳಲ್ಲಿ ಸಾಗಿಬಂದಿದೆ. ಇದು ಈಗಲೂ ನಿಂತಿಲ್ಲ. ಪತ್ರಿಕೆ ಅಥವಾ ಮಾಧ್ಯಮದ ಅಂತಿಮ ಚಿತ್ರವೇ ನಮ್ಮ ಕಣ್ಮುಂದೆ ನಿಲ್ಲುತ್ತದೆ ಅಥವಾ ಕೇಳುತ್ತದೆ. ಕಲ್ಲಚ್ಚಿನಿಂದ ಶುರುವಾಗಿ ತರಂಗಾಂತರ ಮೂಲಕ ಹಾದು ಉಪಗ್ರಹಗಳ ಮುಖೇನ ನಮ್ಮನ್ನು ಮುಟ್ಟುವ ಪ್ರಕ್ರಿಯೆ ಈಗ ಚಾಲ್ತಿಯಲ್ಲಿದೆ. ಆದರೆ ಮುದ್ರಣ ಇರಲಿ, ವಿದ್ಯುನ್ಮಾನ ಆಗಿರಲಿ ಅದು ಹೇಗೆ ಹುಟ್ಟುತ್ತೆ, ಯಾವ ಬಗೆಯಲ್ಲಿ ಕೊನೆ ಹಂತ ತಲುಪಿ ಜನರಿಗೆ ಸಿಗುತ್ತೆ ಎಂಬುದು ಈಗಲೂ ಬಹುತೇಕ ಮಂದಿ
ಅರಿವಿಗೆ ಸಿಕ್ಕಿಲ್ಲ.

Advertisement

ಸುದ್ದಿ ಜಗತ್ತಿನ ಆಳ-ಅಗಲಗಳನ್ನು ಪರಿಚಯಿಸುವ ಸಲುವಾಗಿ ನ್ಯೂಸಿಯಂ ಎಂಬ ಸಂಗ್ರಹಾಲಯವೊಂದು 2008ರಲ್ಲಿ ಶುರುವಾಗಿದೆ. ಪತ್ರಕರ್ತರಿಗೆ ಪತ್ರಿಕೋದ್ಯಮಕ್ಕೆ ಒಟ್ಟಾರೆ ಮಾಧ್ಯಮಕ್ಕೆ ಗೌರವ ಸಲ್ಲಿಸುವ ಮ್ಯೂಸಿಯಂ ಅಲ್ಲಾ ನ್ಯೂಸಿಯಂ ಇರುವುದು ಅಮೆರಿಕದ ವಾಷಿಂಗ್‌ಟನ್‌ ಡಿ.ಸಿ.ಯಲ್ಲಿ. ಇದು “ವಾರ್ತಾ ವಸ್ತು ಸಂಗ್ರಹಾಲಯ’. ಜಾಗತಿಕ ಪತ್ರಿಕಾ ಲೋಕದ ಹೆಜ್ಜೆ ಗುರುತುಗಳನ್ನು ನೋಡುಗರಿಗೆ ದರ್ಶನ ಮಾಡುವ ಹೊತ್ತಿನಲ್ಲಿಯೇ ಮಾಧ್ಯಮ ಜಗತ್ತಿನ ಸಮಕಾಲೀನ ಸ್ಥಿತಿಗತಿಗಳನ್ನು ಕಣ್ಮುಂದೆ ನಿಲ್ಲಿಸುವುದು ನ್ಯೂಸಿಯಂನ ವಿಶೇಷ.

ರಾಜ ಮಹಾರಾಜರ ಆಳ್ವಿಕೆಯ ಕಾಲದಲ್ಲಿ ಚಾಲ್ತಿಗೆ ಬಂದು ನವ ಪರಿಕಲ್ಪನೆಯ ಆಡಳಿತ ಪದ್ಧತಿಯಲ್ಲಿ ವಿಶೇಷವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಾಮುಖ್ಯತೆಯನ್ನು ಗಳಿಸಿಕೊಂಡಿರುವ ಪತ್ರಿಕೆ-ಮಾಧ್ಯಮಗಳ ಏಳು-ಬೀಳುಗಳನ್ನು ಸೋದಾಹರಣವಾಗಿ ವಿವರಿಸುವ ನ್ಯೂಸಿಯಂ ನೆಲೆಗೊಂಡಿರುವುದು ಏಳು ಅಂತಸ್ತಿನ ವಿಶಾಲ ಕಟ್ಟಡದಲ್ಲಿ. ಸುದ್ದಿ ಹುಟ್ಟಿಕೊಳ್ಳುವ ಕ್ಷಣದಿಂದ ಅದರ ರವಾನೆ, ಸಂಸ್ಕರಣೆ,  ಸಂಕಲನ, ಸಂಪಾದನೆ ಬಳಿಕ ಓದುಗ-ಕೇಳುಗ-ನೋಡುಗರನ್ನು ತಲುಪುವವರೆಗೆ ಎಲ್ಲಾ ಮಗ್ಗಲುಗಳನ್ನು ಸವಿಸ್ತಾರವಾಗಿ ಕಟ್ಟಿಕೊಡುವ ನ್ಯೂಸಿಯಂ ಇದಕ್ಕೆ ಅಗತ್ಯವಾದ ಮತ್ತು ಉಪಯೋಗಿಸಲ್ಪಡುವ ಪರಿಕರಗಳನ್ನು ತನ್ನಲ್ಲಿಟ್ಟುಕೊಂಡಿದೆ.

ಬಾತ್ಮೀದಾರರು, ಛಾಯಾಗ್ರಾಹಕರು, ಮೊಳೆ ಜೋಡಿಸುವವರು, ಬೆರಳಚ್ಚು ಮಾಡುವವರು, ಸುದ್ದಿ ಸಂಸ್ಕರಿಸಿ ತಿದ್ದಿ ತೀಡುವವರು, ವಿನ್ಯಾಸಕಾರರು, ಛಾಯಾಗ್ರಾಹಕರು, ಮುದ್ರಕರು, ಇವರಿಗೆ ಪೂರಕವಾಗಿರುವ ಉಪಕರಣಗಳನ್ನು ಒಪ್ಪ ಓರಣವಾಗಿ ಜೋಡಿಸಿಟ್ಟಿರುವುದರ ಜೊತೆಗೆ ಅವುಗಳನ್ನು ಅಲ್ಲಿಗೆ ಭೇಟಿ
ನೀಡುವವರೂ ಬಳಸುವಂತೆಯೂ ವಿನ್ಯಾಸ ಮಾಡಲಾಗಿದೆ. ನ್ಯೂಸಿಯಂನಲ್ಲಿ ಹದಿನೈದು ಪ್ರದರ್ಶನ ಅಂಗಳಗಳಿವೆ. ಈ ಅಂಗಳಗಳಲ್ಲಿ (ಗ್ಯಾಲರಿ) ಪತ್ರಿಕೆ-ಮಾಧ್ಯಮಗಳಿಗೆ ಅಗತ್ಯವಾದ ವಸ್ತುಗಳು, ಪತ್ರಿಕೆಗಳು, ನಿಘಂಟುಗಳು, ಆಧಾರಿತ ಹೊತ್ತಿಗೆಗಳು, ಛಾಯಾಚಿತ್ರಗಳು, ಇನ್ನಿತರ ಪೂರಕ ವಸ್ತುಗಳನ್ನು ನೋಡುವುದು ಮಾತ್ರವಲ್ಲ ಸಾಂದರ್ಭಿಕವಾಗಿ ಅಲ್ಲಿಯೇ ಉಪಯೋಗಿಸುವ ಅವಕಾಶ ಕೂಡ ಲಭ್ಯವಿದೆ.

ಮಾಧ್ಯಮ-ಪತ್ರಿಕೆಗಳನ್ನು ಸಾರ್ವಜನಿಕರು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ರೂಪಿಸಲಾದ ಈ ಸಂಗ್ರಹಾಲಯ ಪ್ರಪಂಚದ ಪ್ರಮುಖ ಘಟನೆಗಳನ್ನು ಪ್ರಕಟಿಸಿದ ಪತ್ರಿಕೆಗಳನ್ನು ಇಲ್ಲಿ ಕಾಯ್ದಿಟ್ಟು ಆಸಕ್ತರಿಗೆ ಕ್ಷಣಮಾತ್ರದಲ್ಲಿ ಅವುಗಳನ್ನು ಪ್ರದರ್ಶಿಸುವ ಸೌಲಭ್ಯವನ್ನು ನೀಡುತ್ತಿದೆ. ಕ್ರೀಡಾಕ್ಷೇತ್ರದ ಮುಖ್ಯ ಸಂಗತಿ, ಉದಾಹರಣೆಗೆ ಒಲಿಂಪಿಕ್ಸ್‌ ಉದ್ಘಾಟನೆ, ವಿಶ್ವ ಮಹಾಯುದ್ಧಗಳ ಆರಂಭ. ಪ್ರಮುಖ ರಾಜಕೀಯ ಬೆಳವಣಿಗೆಗೆ, ಚಂದ್ರಯಾನ ದಿಗ್ವಿಜಯ, ವಿಮಾನಗಳ ಅವಘಡ ಹೀಗೆ ಹತ್ತುಹಲವು ಘಟನೆಗಳನ್ನು ಪತ್ರಿಕೆಗಳು ಹೊತ್ತು ತಂದ ಪರಿಯನ್ನು ಇಲ್ಲಿ ವೀಕ್ಷಿಸುವ ಅವಕಾಶವುಂಟು. ಪತ್ರಿಕೆ, ಬಾನುಲಿ, ಟೆಲಿವಿಷನ್‌, ಇಂಟರ್‌ನೆಟ್‌- ಈ ಮಾಧ್ಯಮಗಳ ಅರಿವು ಮೂಡಿಸುವುದನ್ನೇ ಉದ್ದೇಶವಾಗಿಟ್ಟುಕೊಂಡು ಸ್ಥಾಪಿಸಲಾಗಿರುವ  ನ್ಯೂಸಿಯಂಗೆ ಭೇಟಿ ನೀಡಿದವರೆ ಸ್ವತಹ ಮಾಧ್ಯಮಗಳಲ್ಲಿ ಪಾಲ್ಗೊಂಡು ತಾವೇ ಸುದ್ದಿಯಾಗುವಂತಹ ವಿಧಾನಗಳೂ ಇವೆ. ನಮ್ಮ ಆಸಕ್ತಿಯ ವಿಚಾರಗಳನ್ನು, ಸಾಧ್ಯಂತವನ್ನು ತಿಳಿಯುವ ಬಗೆಯೂ ಇನ್ನೊಂದು.

Advertisement

ಪ್ರತಿದಿನವೂ ಪ್ರಕಟವಾಗುವ ಪ್ರಪಂಚದ ಪ್ರಮುಖ ದಿನಪತ್ರಿಕೆಗಳ ಮುಖಪುಟಗಳ ಪ್ರದರ್ಶನ ಲಭ್ಯವಿರುವ ಇಲ್ಲಿ ವಿವಿಧ ಟೆಲಿವಿಷನ್‌ ಜಾಲಗಳ ಪ್ರತಿಕ್ಷಣದ ಸುದ್ದಿ ವೈವಿಧ್ಯತೆಯನ್ನು ವೀಕ್ಷಿಸಲು ಅವಕಾಶ. ಪತ್ರಿಕಾ ಸ್ವಾತಂತ್ರ್ಯವನ್ನು ಅದರ ಅಗತ್ಯಗಳನ್ನು  ನೋಡುಗರಿಗೆ ತಿಳಿಹೇಳುವ ಉದ್ದೇಶವನ್ನು ಹೊಂದಿರುವ
ನ್ಯೂಸಿಯಂ ಪತ್ರಿಕಾ ಸ್ವಾತಂತ್ರ್ಯಕ್ಕೆ ಎದುರಾಗುವ ಸವಾಲುಗಳ ಬಗ್ಗೆ ವಿಶ್ಲೇಷಿಸಿ ಅದನ್ನು ಪರಿಹರಿಸುವ ಮಾರ್ಗಗಳನ್ನು ಕಂಡುಕೊಳ್ಳಲು ಯತ್ನಿಸುತ್ತದೆ. ಇದಕ್ಕಾಗಿ ಮಾಧ್ಯಮ ಜಗತ್ತಿನ ಸಮಕಾಲೀನ ವಸ್ತು ಸ್ಥಿತಿಯನ್ನು ತಿಳಿಯಲು ಹಿರಿಯ ಮಾಧ್ಯಮ ತಜ್ಞರಿಂದ ಚಿಂತನ-ಮಂಥನ ಏರ್ಪಡಿಸುವುದು ನ್ಯೂಸಿಯಂನ ಮತ್ತೂಂದು ಉದ್ದೇಶ.

ವಿಶ್ವ ಪ್ರಸಿದ್ಧ ಪತ್ರಿಕೋದ್ಯಮ ಪುರಸ್ಕಾರ ಪುಲಿಟ್ಜರ್‌ ಕುರಿತ ಸಮಗ್ರ ಮಾಹಿತಿಯುಳ್ಳ ಗ್ಯಾಲರಿ ನ್ಯೂಸಿಯಂನ ಬಹು ಬೇಡಿಕೆಯ ತಾಣ. ಪುಲಿಟ್ಜರ್‌ 1942ರಲ್ಲಿ
ಪ್ರಾರಂಭವಾದಾಗಿನಿಂದ ಈವರೆಗೆ ಪುರಸ್ಕೃತರಾದ ಪತ್ರಕರ್ತರು, ಛಾಯಾ ಗ್ರಾಹಕರ ವಿವರಗಳು ಅವರ ವರದಿ/ಛಾಯಾ ಚಿತ್ರಗಳು ಈ ಗ್ಯಾಲರಿಯ ಆಕರ್ಷಣೆ. ಇಲ್ಲಿರುವ ಕೆಲವು ಗ್ಯಾಲರಿಗಳು ಖಾಯಂ ಪ್ರದರ್ಶನ ಗಳನ್ನು ಹೊಂದಿದ್ದು ಮುದ್ರಣ ಮಾಧ್ಯಮದಿಂದ ಅಂತರ್ಜಾಲದವರೆಗೆ
ಪತ್ರಿಕೋದ್ಯಮ ನಡೆದುಬಂದ ದಾರಿಯನ್ನು ಪರಿಚಯಿಸಿದರೆ ಇನ್ನೂ ಕೆಲವು ಗ್ಯಾಲರಿಗಳಲ್ಲಿನ ಪ್ರದರ್ಶಿಕೆಗಳು ನಿಯತವಾಗಿ ಬದಲಾ ಗುತ್ತಲೇ ಇರುತ್ತವೆ. ನ್ಯೂಸಿಯಂನಲ್ಲಿರುವ 11 ಥಿಯೇಟರ್‌ಗಳು ಪತ್ರಿಕೋದ್ಯಮವನ್ನು ಅನಾವರಣಗೊಳಿಸುವ ಚಿತ್ರಗಳು, ವಿಡಿಯೋ ತುಣುಕುಗಳು, ಧ್ವನಿಮುದ್ರಿಕೆಗಳನ್ನು ನಿಯತವಾಗಿ ಪ್ರದರ್ಶಿಸುತ್ತವೆ.

ವಿವಿಧ ದೇಶಗಳ ಚುನಾವಣೆ ಗಳು, ಸಾಂಸ್ಕೃತಿಕ (ಚಿತ್ರೋತ್ಸವ ಇತ್ಯಾದಿ) ಕ್ರೀಡಾ ಸ್ಪರ್ಧೆ (ಒಲಿಂಪಿಕ್ಸ್‌-ಪುಟ್ಬಾಲ್‌ ವಿಶ್ವಕಪ್‌ ಮತ್ತಿತರ ಟೂರ್ನಿಗಳು)
ವಿಖ್ಯಾತರ ಸ್ಮರಣೆ- ಮೊದಲಾದ ವಿಷಯಗಳನ್ನು ಕುರಿತ ಛಾಯಾಚಿತ್ರ ಪ್ರದರ್ಶನಗಳು ಇಲ್ಲಿ ಆಗಾಗ ಬದಲಾಗುವ ಕಾರ್ಯಕ್ರಮಗಳು. ಈ ವರ್ಷ ಅಮೆರಿಕದ ಜನಪ್ರಿಯ ಅಧ್ಯಕ್ಷರಾಗಿದ್ದ ಜಾನ್‌ ಎಫ್. ಕೆನಡಿ ಅವರ ಜನ್ಮ ಶತಮಾನೋತ್ಸವ, ಅಧಿಕಾರದಲ್ಲಿರುವಾಗಲೇ ಹತ್ಯೆಯಾದ ಕೆನಡಿ ಅವರ ಕೌಟುಂಬಿಕ ಛಾಯಾಚಿತ್ರಗಳ ಪ್ರದರ್ಶನ ನ್ಯೂಸಿಯಂನ ಸದ್ಯದ ವಿಶೇಷ. ಮಾಧ್ಯಮ ಜಗತ್ತಿನ ಬಗ್ಗೆ ಗೌರವ ಹೆಚ್ಚಿಸುವ ಮತ್ತು ಪತ್ರಿಕೋದ್ಯಮಿಗಳಿಗೆ ವಿಶಿಷ್ಟ ಅನುಭವ ದೊರಕಿಸಿ ಕೊಡುವ ಸುದ್ದಿ ವಸ್ತು ಸಂಗ್ರಹಾಲಯ ನ್ಯೂಸಿಯಂ.

*ಎನ್‌. ಜಗನ್ನಾಥ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next