Advertisement
“ಹಾಗೆಲ್ಲ ವೇಸ್ಟ್ ಮಾಡಬಾರದಪ್ಪ, ಮನೆಗೆ ತೆಗೆದುಕೊಂಡು ಹೋಗಿ ಅಮ್ಮನಿಗೆ ಕೊಡು’ ಎಂದು ಪಕ್ಕದ ಮನೆಯ ತಾತ ಒಬ್ಬ ಹುಡುಗನಿಗೆ ಹೇಳುತ್ತಿದ್ದರು. ಪಕ್ಕದ ಮನೆಯವರು ಅವರ ಮಗನ ಬರ್ತ್‌ಡೇ ಪಾರ್ಟಿಗೆ ನಮ್ಮನ್ನೆಲ್ಲ ಕರೆದಿದ್ದರು. ಕೇಕ್ ಕಟ್ ಮಾಡಿದ ನಂತರ ಕೇಕು, ಸಮೋಸಾ, ಚಿಪ್ಸ್ ನಿಂದ ತುಂಬಿದ ಪೇಪರ್ ಪ್ಲೇಟನ್ನು ಎಲ್ಲ ಅತಿಥಿಗಳಿಗೂ ನೀಡಿದರು. ಒಬ್ಬ ಹುಡುಗ ಯಾವುದನ್ನೂ ಪೂರ್ತಿ ತಿನ್ನದೆ, ಕಸದ ಬುಟ್ಟಿಗೆ ಎಸೆಯಲು ಹೋದಾಗ, ಅಜ್ಜ ಅವನಿಗೆ ಬುದ್ಧಿ ಹೇಳುತ್ತಿದ್ದರು. ಆದರೆ, ಅವನು ಅಜ್ಜನ ಮಾತನ್ನು ಕಿವಿಗೆ ಹಾಕಿಕೊಳ್ಳದೆ “ನನಗಿದು ಬೇಡವೇ ಬೇಡ’ ಎಂದು ಎಸೆದು ಹೋದ.
ಟಿ.ವಿ., ಸಿನಿಮಾ, ಜಾಹೀರಾತುಗಳಲ್ಲಿ ಆಹಾರ ವ್ಯರ್ಥ ಮಾಡಬೇಡಿ ಎಂಬ ಮನವಿ ಪ್ರಸಾರಗೊಳ್ಳುತ್ತಿರುತ್ತದೆ. ಒಂದು ಗೋಧಿ ಕಾಳನ್ನು ಬೆಳೆಯಲು ರೈತ ಎಷ್ಟು ಬೆವರು ಹರಿಸುತ್ತಾನೆ, ಕಷ್ಟ ಪಡುತ್ತಾನೆ ಎಂದಾಗ ಮರುಕ ವ್ಯಕ್ತಪಡಿಸುವ ನಾವು, ಊಟಕ್ಕೆ ಕುಳಿತಾಗ ಎಲ್ಲವನ್ನೂ ಮರೆಯುತ್ತೇವೆ. ಹೊಟೇಲ್‌ಗಳಲ್ಲಿ, ಮಾಲ್‌ಗಳಲ್ಲಿ ಆಯಾ ದಿನದ ವ್ಯರ್ಥವಾದ ಆಹಾರದ ಪ್ರಮಾಣವನ್ನು ನಮೂದಿಸಿ, ಆಹಾರವೂ ಎಷ್ಟು ಬಡ ಜನರ ಹಸಿವು ನೀಗಿಸುತ್ತಿತ್ತು ಎಂದು ನಮೂದಿಸುತ್ತಾರೆ. ಆದರೆ, ಅವೆಲ್ಲವೂ ಒಂದು ಕ್ಷಣ ನಮ್ಮ ಗಮನ ಸೆಳೆಯುತ್ತದಷ್ಟೆ. ಆದರೆ ಅವ್ಯಾವುದೂ ನಮ್ಮ ಕಣ್ತೆರೆಸುವುದಿಲ್ಲ.
Related Articles
ಸಣ್ಣವಳಿದ್ದಾಗ, “ಒಂದು ಕಣ ಉಪ್ಪನ್ನೂ, ಅನ್ನದ ಅಗುಳನ್ನೂ ವ್ಯರ್ಥ ಮಾಡದಂತೆ ಊಟ ಮಾಡಬೇಕು. ಇಲ್ಲದಿದ್ದರೆ ದೇವರು ನಿಮಗೆ ಇಳಿ ವಯಸ್ಸಿನಲ್ಲಿ ಹಳಸಿದ ಅನ್ನವನ್ನು ನೀಡುತ್ತಾರೆ’ ಎಂದು ಹೆದರಿಸಿ ಅಮ್ಮ ಊಟ ಮಾಡಿಸುತ್ತಿದ್ದಳು. ಆ ಹೆದರಿಕೆಯೋ, ಅಭ್ಯಾಸವೋ ಇಂದಿಗೂ ನಮ್ಮನೆಯಲ್ಲಿ ಯಾರೂ ಒಂದು ಅಗುಳನ್ನೂ ಚೆಲ್ಲುವುದಿಲ್ಲ. ಕೆಲವರು ಎರಡನೆ ಸಲ ಅನ್ನ ಕೇಳಲು ನಾಚಿಕೆಯೆಂದು, ಮೊದಲನೇ ಸಲವೇ ಜಾಸ್ತಿ ಹಾಕಿಸಿಕೊಳ್ಳುತ್ತಾರೆ. ಆದರೆ ಅನ್ನವನ್ನು ವ್ಯರ್ಥ ಮಾಡುವುದಕ್ಕಿಂತ ಆ ಮುಜುಗರವನ್ನು ತೊರೆಯುವುದು ಮೇಲಲ್ಲವೇ? ಕೆಲ ದೇವಸ್ಥಾನಗಳಲ್ಲಿ, ಹೊಟೇಲುಗಳಲ್ಲಿ ಊಟದ ಮೆನುವನ್ನು ನಮೂದಿಸಿರುತ್ತಾರೆ. ಅದರಲ್ಲಿ ನಮಗೆ ಇಷ್ಟವಾಗದ ಪದಾರ್ಥಗಳಿದ್ದರೆ ಅದನ್ನು ಬಡಿಸಿಕೊಳ್ಳದೆ, ಆಹಾರ ವ್ಯರ್ಥವಾಗುವುದನ್ನು ತಡೆಯಬಹುದು. ಈ ರೀತಿ ಪ್ಲ್ರಾನ್ ಪ್ರಕಾರ ಊಟ ಮಾಡಿದರೆ ಆಹಾರ ಚೆಲ್ಲುವ ಪ್ರಮೇಯವೇ ಬರುವುದಿಲ್ಲ. ಹೋಟೆಲ್ ಬಫೆಯಲ್ಲಿ, ಹೇಗೂ ಅಷ್ಟು ದುಡ್ಡು ಕೊಟ್ಟಿರುವಾಗ ಎಲ್ಲವನ್ನೂ ತಿನ್ನಬೇಕು ಎಂದು ಬೇಕಾದ್ದು, ಬೇಡದ್ದು ಎಲ್ಲವನ್ನೂ ಬಡಿಸಿಕೊಂಡು, ತಿನ್ನಲಾಗದೇ ವ್ಯರ್ಥ ಮಾಡುತ್ತೇವೆ. ದುಡ್ಡು ಕೊಟ್ಟಿದ್ದೇವೆ ಎಂದು ಜಾಸ್ತಿ ಹಾಕಿಸಿಕೊಂಡು ಎಲ್ಲವನ್ನೂ ತಿನ್ನಲು ಹೊರಟರೆ ಹೊಟ್ಟೆ ಕೆಟ್ಟು ಆಸ್ಪತ್ರೆಗೆ ದುಡ್ಡು ಹಾಕಬೇಕಾದೀತು.
Advertisement
ಗೆಳತಿಯೊಬ್ಬಳು ಎಂದಿಗೂ ತಟ್ಟೆಯನ್ನು ಪೂರ್ತಿಯಾಗಿ ಖಾಲಿ ಮಾಡಿದವಳೇ ಅಲ್ಲ. ದಿನವೂ ಏನಾದರೊಂದು ಪದಾರ್ಥವನ್ನು ಚೆಲ್ಲುವುದು ಅವಳಿಗೆ ರೂಢಿ. ಅದನ್ನು ನೋಡಿ ಅವಳ ಮಗಳೂ ಅದನ್ನೇ ರೂಢಿಸಿಕೊಂಡಿದ್ದಾಳೆ. ನಮ್ಮನ್ನು ನೋಡಿ ಮಕ್ಕಳು ಕಲಿಯುತ್ತವೆ ಎಂಬುದನ್ನು ಹಿರಿಯರು ಮರೆಯಬಾರದು.
ಸಾವಿತ್ರಿ ಶ್ಯಾನುಭಾಗ