Advertisement

ಜಗತ್ತಿಗೆ ಅಣು ಪ್ರಳಯ ಭೀತಿ ;  ಮೂರನೇ ಮಹಾಯುದ್ಧ ಅಣ್ವಸ್ತ್ರ ಸಹಿತ: ರಷ್ಯಾ

01:27 AM Mar 03, 2022 | Team Udayavani |

ಕೀವ್‌/ಹೊಸದಿಲ್ಲಿ/ವಾಷಿಂಗ್ಟನ್‌: ಅಣ್ವಸ್ತ್ರ ಸಹಿತವಾಗಿರುವ ಮೂರನೇ ಮಹಾಯುದ್ಧ ಸಂಭವಿಸಲಿದೆಯೇ?
ಅಮೆರಿಕ ಮತ್ತು ರಷ್ಯಾ ನಾಯಕರ ಯುದ್ಧೋತ್ಸಾಹದ ಮಾತುಗಳನ್ನು ಕೇಳಿದರೆ ಅಂಥ ಭೀತಿ ನಿಜವಾಗುವ ಸಾಧ್ಯತೆ ಹೆಚ್ಚಾಗಿದೆ. “ಜಗತ್ತಿನಲ್ಲಿ ಮೂರನೇ ಮಹಾಯುದ್ಧ ನಡೆಯುವುದಿದ್ದರೆ, ಅದು ಅಣ್ವಸ್ತ್ರ ಸಹಿತವೇ ಆಗಬೇಕಾಗುತ್ತದೆ. ಆದರೆ ಅದರಿಂದ ಉಂಟಾಗುವ ದುಷ್ಪರಿಣಾಮ ಭೀಕರವಾಗಿ ರಲಿದೆ’ ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾರ್ವೋ ಎಚ್ಚರಿಸಿದ್ದಾರೆ.

Advertisement

ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ನ್ಯಾಟೋ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಪ್ರತಿಕ್ರಿಯೆ ನೀಡದೆ ಸುಮ್ಮನೆ ಉಳಿದಿವೆ ಎಂದು ರಷ್ಯಾ ಭಾವಿಸುವುದು ಬೇಡ. ಅಗತ್ಯ ಬಿದ್ದರೆ ಎಲ್ಲದಕ್ಕೂ ಸಿದ್ಧವಿವೆ ಎಂದು ಅಮೆರಿಕದ ಸಂಸತ್‌ನಲ್ಲಿ ಅಧ್ಯಕ್ಷ ಜೋ ಬೈಡೆನ್‌ ಹೇಳಿ ದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ ರಷ್ಯಾ ವಿದೇಶಾಂಗ ಸಚಿವ ಲಾರ್ವೋ ಅವರು ಅಣ್ವಸ್ತ್ರ ಯುದ್ಧದ ಮಾತುಗಳನ್ನಾಡಿದ್ದಾರೆ. ಈ ಮೂಲಕ ಸದ್ಯ ಉಕ್ರೇನ್‌ ಮೇಲೆ ತಮ್ಮ ದೇಶ ನಡೆಸುತ್ತಿರುವ ದಾಳಿಯಲ್ಲಿ ಬೇರೆ ದೇಶಗಳು ಭಾಗಿಯಾಗುವುದೇ ಬೇಡ ಎಂದು ಸ್ಪಷ್ಟ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಅಮೆರಿಕ ನೇತೃತ್ವದಲ್ಲಿ ಜಗತ್ತಿನ ರಾಷ್ಟ್ರಗಳು ತಮ್ಮ ದೇಶದ ವಿರುದ್ಧ ವಿಧಿಸಿರುವ ಆರ್ಥಿಕ ದಿಗ್ಬಂಧನಗಳನ್ನು ಸಮರ್ಥವಾಗಿ ಎದುರಿಸಲಾಗುತ್ತದೆ. ಒಂದು ವೇಳೆ, ಮೂರನೇ ವಿಶ್ವಯುದ್ಧ ಅನಿವಾರ್ಯವಾದರೆ ಅದು ಅಣ್ವಸ್ತ್ರಗಳ ಮೂಲಕವೇ ನಡೆಯಲಿದೆ. ಅದರ ಪರಿಣಾಮ ಖಂಡಿತವಾಗಿಯೂ ಕೆಟ್ಟದಾಗಿರುತ್ತದೆ ಎಂದು ಲಾರ್ವೋ ಎಚ್ಚರಿಕೆ ನೀಡಿದ್ದಾರೆ.

ಉಕ್ರೇನ್‌ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡ ಲಾರ್ವೋ, ಬಿಕ್ಕಟ್ಟು ಪರಿಹಾರಕ್ಕಾಗಿ ಮಾತುಕತೆ ನಡೆಸಲು ತಮ್ಮ ದೇಶ ಉಕ್ರೇನ್‌ ಜತೆಗೆ ಮಾತುಕತೆಗೆ ಸಿದ್ಧವಿದೆ ಎಂದು ಹೇಳಿದ್ದಾರೆ. ಉಕ್ರೇನ್‌ನಲ್ಲಿ ಅಣ್ವಸ್ತ್ರಗಳಿಲ್ಲ ಎನ್ನುವುದು ಖಚಿತ. ಅಂಥ ವಿನಾಶಕಾರಿ ಅಸ್ತ್ರಗಳನ್ನು ಆ ದೇಶ ಪಡೆಯದಂತೆ ಮಾಡುವುದಕ್ಕಾಗಿಯೇ ದಾಳಿ ನಡೆಸಲಾಗುತ್ತಿದೆ ಎಂದಿದ್ದಾರೆ. ರಷ್ಯಾ ಮೇಲೆ ಹೇರಿರುವ ದಿಗ್ಬಂಧನಗಳಿಂದ ಕ್ರೀಡಾಪಟುಗಳು, ಪತ್ರಕರ್ತರು, ಬುದ್ಧಿಜೀವಿಗಳು, ನಟರು ಮತ್ತು ಪತ್ರಕರ್ತರನ್ನು ಹೊರಗೆ ಇರಿಸಬಹುದಿತ್ತು. ಇಂಥ ಕಠಿನ ಕ್ರಮಗಳಿಂದ ಅವರೇಕೆ ಕಷ್ಟಪಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ದಿನಗಳ ಹಿಂದಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುತಿನ್‌ ಅಣ್ವಸ್ತ್ರ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸುವ ಬಗ್ಗೆ ಆದೇಶ ನೀಡಿದ ಬೆನ್ನಲ್ಲಿಯೇ ಮತ್ತೂಂದು ಎಚ್ಚರಿಕೆಯನ್ನು ರಷ್ಯಾ ವಿದೇಶಾಂಗ ಸಚಿವರು ನೀಡಿದ್ದಾರೆ.

ಏಳು ದಿನಗಳಲ್ಲಿ 2 ಸಾವಿರ ಮಂದಿ ಸಾವು
ಫೆ.26ರಂದು ರಷ್ಯಾ ಉಕ್ರೇನ್‌ ವಿರುದ್ಧ ದಾಳಿಗೆ ಆದೇಶಿಸಿದ ದಿನದಿಂದ ಇದುವರೆಗೆ 2 ಸಾವಿರ ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಉಕ್ರೇನ್‌ನ ತುರ್ತು ಸೇವೆಗಳ ವಿಭಾಗ ಹೇಳಿದೆ. ಪ್ರತಿ ಗಂಟೆಗೂ ಮಹಿಳೆಯರು, ಮಕ್ಕಳು ಮತ್ತು ಯೋಧರು ರಷ್ಯಾದ ಕ್ಷಿಪಣಿ ದಾಳಿಯಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆಗಳು, ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದ ಕಟ್ಟಡಗಳು, ಕಿಂಡರ್‌ಗಾರ್ಟನ್‌ಗಳು, ಮನೆಗಳು ಧ್ವಂಸವಾಗಿವೆ ಎಂದು ಉಕ್ರೇನ್‌ ತಿಳಿಸಿದೆ.

ಪಂಜಾಬ್‌ ವಿದ್ಯಾರ್ಥಿ ಅನಾರೋಗ್ಯದಿಂದ ಸಾವು
ಉಕ್ರೇನ್‌ನಲ್ಲಿ ಹಾವೇರಿಯ ವೈದ್ಯ ವಿದ್ಯಾರ್ಥಿ ನವೀನ್‌ ಶೇಖರಪ್ಪ ಗ್ಯಾನ ಗೌಡ್ರ (22) ಅಸುನೀಗಿದ ಬೆನ್ನಲ್ಲೇ, ಪಂಜಾಬ್‌ನ ಬರ್ನಾಲ ಮೂಲದ ಚಂದನ್‌ ಜಿಂದಾಲ್‌ (21) ಎಂಬ ವಿದ್ಯಾರ್ಥಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಅವರು ಉಕ್ರೇನ್‌ನ ಪಶ್ಚಿಮ ಕೇಂದ್ರ ಭಾಗದ ನಗರ ನಿನಿಟ್ಸೆಯಾ ಎಂಬಲ್ಲಿ ನಿನಿಟ್ಸೆಯಾ ನ್ಯಾಷನಲ್‌ ಪಿರಗೋವ್‌, ಮೆಮೋರಿಯಲ್‌ ಮೆಡಿಕಲ್‌ ಯುನಿವರ್ಸಿಟಿಯಲ್ಲಿ ನಾಲ್ಕನೇ ವರ್ಷದ ಎಂಬಿಬಿಎಸ್‌ ಕಲಿಯುತ್ತಿದ್ದರು. ಫೆ.2ರಂದು ಅವರಿಗೆ ಲಕ್ವ ಹೊಡೆದಿದ್ದ ಕಾರಣ ನಿನಿಟ್ಸೆಯಾ ನಗರದಲ್ಲಿ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು. ಫೆ.7ರಂದು ಅವರ ಹೆತ್ತವರು ಅನುಮತಿ ನೀಡಿದ್ದರಿಂದ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ವಿದ್ಯಾರ್ಥಿಯ ತಂದೆ ಶಿಶಾನ್‌ ಕುಮಾರ್‌ ಮತ್ತು ಸಹೋದರ ಕೃಷ್ಣಗೋಪಾಲ್‌ ಉಕ್ರೇನ್‌ಗೆ ಭೇಟಿ ನೀಡಿದ್ದರು. ತಂದೆ ಇನ್ನೂ ಉಕ್ರೇನ್‌ನಲ್ಲಿಯೇ ಇದ್ದಾರೆ. ಚಂದನ್‌ ಅವರನ್ನು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾಗ ಮೆದುಳಿನಲ್ಲಿ ರಕ್ತಹೆಪ್ಪುಗಟ್ಟಿದ್ದು ದೃಢಪಟ್ಟಿತ್ತು. ಹೊಸದಿಲ್ಲಿಯಲ್ಲಿ ಕೇಂದ್ರ ವಿದೇಶಾಂಗ ಸಚಿವಾಲಯ ಕೂಡ ಇದನ್ನು ದೃಢಪಡಿಸಿದೆ. ಕರ್ನಾಟಕದ ನವೀನ್‌ ಮತ್ತು ಪಂಜಾಬ್‌ನ ಚಂದನ್‌ ಅವರ ಮೃತದೇಹಗಳನ್ನು ಶೀಘ್ರವಾಗಿ ಭಾರತಕ್ಕೆ ತರಲು ಪ್ರಕ್ರಿಯೆಗಳು ನಡೆದಿವೆ ಎಂದೂ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಖಾರ್ಕಿವ್‌ನಿಂದ ಹೊರಟ 20 ವಿದ್ಯಾರ್ಥಿನಿಯರು
ಉಕ್ರೇನ್‌ನ 2ನೇ ಅತಿದೊಡ್ಡ ನಗರ ಖಾರ್ಕಿವ್‌ ಮೇಲೆ ರಷ್ಯಾ ಪಡೆಗಳು ಭಾರೀ ಪ್ರಮಾಣದ ದಾಳಿ ನಡೆಸುತ್ತಿದ್ದು, ಭಾರತದ ವಿದ್ಯಾರ್ಥಿಗಳಲ್ಲಿ ಆತಂಕದ ಕಾರ್ಮೋಡ ಕವಿದಿದೆ. ಅಲ್ಲದೆ, ಮಂಗಳವಾರವಷ್ಟೇ ಹಾವೇರಿಯ ನವೀನ್‌ ಖಾರ್ಕಿವ್‌ನಲ್ಲೇ ರಷ್ಯಾ ದಾಳಿಯಿಂದಾಗಿ ಮೃತಪಟ್ಟಿದ್ದು, ಇವರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಹೀಗಾಗಿ ಬುಧವಾರ ಬೆಳಗ್ಗೆ ಖಾರ್ಕಿವ್‌ನಿಂದ ಕರ್ನಾಟಕದ 20 ಎಂಬಿಬಿಎಸ್‌ ವಿದ್ಯಾರ್ಥಿನಿಯರು ರೈಲಿನಲ್ಲಿ ಗಡಿಯತ್ತ ತೆರಳಿದ್ದಾರೆ. ಹರಸಾಹಸಪಟ್ಟು ರೈಲು ಹಿಡಿಯುವಲ್ಲಿ ಇವರು ಯಶಸ್ವಿಯಾಗಿದ್ದಾರೆ. ಆದರೆ ಇವರ ಜತೆಗಿದ್ದ ಇತರ 28 ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ರೈಲು ಹತ್ತಲು ಅವಕಾಶ ಕೊಟ್ಟಿಲ್ಲ. ಇವರು ಬೇರೆ ವ್ಯವಸ್ಥೆ ಮೂಲಕ ಗಡಿಯತ್ತ ತೆರಳುತ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌ ಅವರು ಟ್ವಿಟರ್‌ ಮೂಲಕ ಮಾಹಿತಿ ನೀಡಿದ್ದಾರೆ.

ನಗರ ವಶ ಬಗ್ಗೆ ಗೊಂದಲ
ರಷ್ಯಾ ಪಡೆಗಳು ಉಕ್ರೇನ್‌ನ ಪ್ರಮುಖ ನಗರಗಳನ್ನು ವಶಪಡಿಸಿ ಕೊಳ್ಳುವ ನಿಟ್ಟಿನಲ್ಲಿ ಹೋರಾಟ ಮುಂದುವರಿಸಿವೆ. ಅದಕ್ಕೆ ಅಷ್ಟೇ ಪ್ರಬಲವಾಗಿ ಉಕ್ರೇನ್‌ ಪ್ರತ್ಯುತ್ತರ ನೀಡುತ್ತಿವೆ. ಪುತಿನ್‌ ಸೇನೆ ಝಪೋರಿಝಾಹಿಯಾ ನಗರವನ್ನು ವಶಪಡಿಸಿಕೊಂಡಿದೆ. ಈ ಪ್ರದೇಶ ಅಣ್ವಸ್ತ್ರಗಳಿರುವ ಸ್ಥಳ ಎಂದು ವಿಶ್ವಸಂಸ್ಥೆ ಪ್ರಕಟಿಸಿದೆ. ಅಲ್ಲಿ ಒಟ್ಟು ಆರು ಪರಮಾಣು ಸ್ಥಾವರಗಳಿವೆ. ಖಾರ್ಕಿವ್‌ ನಗರ ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಬುಧವಾರ ಭಾರೀ ಹೋರಾಟ ನಡೆದಿತ್ತು. ಒಂದು ಹಂತದಲ್ಲಿ ಆ ನಗರ ರಷ್ಯಾ ವಶವಾಯಿತು ಎಂದು ವರದಿಯಾಗಿತ್ತು. ಆದರೆ ನಗರದ ಆಡಳಿತ ಅದನ್ನು ನಿರಾಕರಿಸಿದೆ. ಬಂದರು ನಗರ ಮರಿಯುಪೋಲ್‌ ಮೇಲೂ ಮತ್ತೂಮ್ಮೆ ದಾಳಿ ನಡೆದಿದೆ. ಈ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಸಾವುನೋವು ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next