ನಂಜನಗೂಡು: ಹಿಂದೆ ಅಧಿಕಾರದಲ್ಲಿದ್ದವರು ತಪ್ಪು ಮಾಡಿದ್ದಾರೆ ನಿಜ. ಆದರೆ, ಈಗ ಶಿಕ್ಷೆಯಾಗುತ್ತಿರುವುದು ವಿದ್ಯಾರ್ಥಿಗಳಿಗೆ ಎಂಬುದನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಹಾಗೂ ಕೇಂದ್ರ ಸರ್ಕಾರ ತಿಳಿದುಕೊಳ್ಳಬೇಕೆಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮನವಿ ಮಾಡಿದರು.
ಸುತ್ತೂರಿನ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಬಸವರಾಜ ರಾಯರಡ್ಡಿ ಶೈಕ್ಷಣಿಕ ವಸ್ತು ಪ್ರದರ್ಶನ ಹಾಗೂ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿ, ವಿಶ್ವೇಶ್ವರಯ್ಯ ತಾಂತ್ರಿಕ ಸಂಸ್ಥೆಯಲ್ಲಿ ತಪ್ಪಾಗಿರುವುದು ನಿಜ. ಆದರೆ, ಬೇರೆಯವರ ತಪ್ಪಿಗಾಗಿ ವಿದ್ಯಾರ್ಥಿಗಳ 450 ಕೋಟಿ ರೂ.ಗಳನ್ನು ಐಟಿ ಹಿಡಿದುಕೊಂಡಿದೆ.
ಈ ಹಣ ವಿದ್ಯಾರ್ಥಿಗಳಿಗೆ ವಾಪಸಾಗಲು ಕೇಂದ್ರ ಸಚಿವ ಅನಂತ್ ಕುಮಾರ್ ಸಹಕರಿಸಬೇಕೆಂದು ರಾಯರೆಡ್ಡಿ ವೇದಿಕೆಯಲ್ಲಿದ್ದ ಅನಂತ್ ಕುಮಾರ್ ಅವರಿಗೆ ಮನವಿ ಮಾಡಿದರು. ಮುಕ್ತ ವಿಶ್ವ ವಿದ್ಯಾಲಯದ ಕಥೆಯೂ ಹೀಗೆ ಎಂದ ಉನ್ನತ ಶಿಕ್ಷಣ ಸಚಿವರು, ಕೇಂದ್ರ ಹಾಗೂ ರಾಜ್ಯ ಸಚಿವರ ತಿಕ್ಕಾಟಕ್ಕೆ ಮುಕ್ತ ವಿಶ್ವವಿದ್ಯಾಲಯದ ಮೂರು ಲಕ್ಷ ವಿದ್ಯಾರ್ಥಿಗಳು ತೊಂದರೆಗೊಳಗಾಗುತ್ತಿದ್ದಾರೆ ಎಂದರು.
ಶುಲ್ಕ ರಹಿತ ವ್ಯಾಸಂಗಕ್ಕೆ ಬದ್ಧ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಶೈಕ್ಷಣಿಕ ಆದ್ಯತೆಯ ಯೋಜನೆಯ ಫಲವಾಗಿ ಇಂದು ರಾಜ್ಯದ ಪದವೀಧರರ ಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ.
ಯಾದಗಿರಿ ಶೇ.4, ರಾಯಚೂರು ಶೇ.7, ಕೊಪ್ಪಳ ಶೇ.9 ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ನೂರಕ್ಕೆ ಹನ್ನೊಂದರಷ್ಟು ಮಾತ್ರ ಪದವೀಧರರಿದ್ದಾರೆ ಎಂದ ಶಿಕ್ಷಣ ಸಚಿವರು, ಮುಂದಿನ ಶೈಕ್ಷಣಿಕ ವರ್ಷದಿಂದ ಶುಲ್ಕ ರಹಿತ ಕಾಲೇಜು ವ್ಯಾಸಂಗ ನೀಡಲು ರಾಜ್ಯ ಸರ್ಕಾರ ಕಟ್ಟಿಬದ್ಧವಾಗಿದೆ ಎಂದು ನುಡಿದರು.
ಹಂಪಿ ವಿರೂಪಾಕ್ಷ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಶಂಕರಾಚಾರ್ಯ ವಿದ್ಯಾರಣ್ಯಭಾರತಿಗಳು ಹಾಗೂ ಕೆರೆಗೋಡಿ ರಂಗಾಪುರ ಕ್ಷೇತ್ರದ ಗುರುಪರದೇಶಿಕರು ಶುಭಸಂದೇಶ ನೀಡಿದರು. ವೇದಿಕೆಯನ್ನುದ್ದೇಶಿಸಿ ಮಾಜಿ ಸಚಿವ ಎಸ್.ಎ. ರಾಮದಾಸ್ ಶಾಸಕ ನಾಗೇಶ್ ಅಟೋಮೇಟಿವ್ ಆಕ್ಸೆಲ್‌ನ ಮುತ್ತುಕುಮಾರ್ ಮಾತನಾಡಿದರು.
ಸಮಾರಂಭದಲ್ಲಿ ಮಾಜಿ ಶಾಸಕ ಸಿ. ರಮೇಶ್, ರವಿಶಂಕರ್, ತೇಜಸ್ವಿನಿ ಅನಂತ್ ಕುಮಾರ್, ಮಂಗಳೂರು ವಿ.ವಿ.ಯ ಕುಲಪತಿ ಭೈರಪ್ಪ, ಮೈಸೂರಿನ ಭಾರತಿ ಮುಂತಾದವರು ಉಪಸ್ಥಿತರಿದ್ದರು.