ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತರ ಮೇಲೆ ಅಷ್ಟೋಂದು ದ್ವೇಷ ಯಾಕೆ ಎಂದು ದೆಹಲಿ ಮುಖ್ಯಮಂತ್ರಿ, ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಬುಧವಾರ ಪ್ರಶ್ನೆ ಮಾಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಜ್ರಿವಾಲ್ ಅವರು, ಲಖೀಂಪುರದಲ್ಲಿ ನಡೆದ ರೈತರ ಹತ್ಯೆಯನ್ನು ತೀವ್ರವಾಗಿ ಖಂಡಿಸಿ, ರೈತರ ಹತ್ಯೆಯ ಆರೋಪಿಗಳನ್ನು ತಕ್ಷಣ ಬಂಧಿಸಲು ಆಗ್ರಹಿಸಿದರು.
ಘಟನೆಯ ಆರೋಪಿಯನ್ನು ಬಂಧಿಸುವಲ್ಲಿ ಸರಕಾರ ಮನಸ್ಸು ಮಾಡುತ್ತಿಲ್ಲ, ಹಿಂಸಾಚಾರದಲ್ಲಿ ಕೇಂದ್ರ ಸಚಿವರ ಪುತ್ರ ಭಾಗಿಯಾಗಿರುವ ಆರೋಪವಿದೆ, ತಕ್ಷಣ ಪ್ರಧಾನಿ ಮೋದಿ ಅವರು ಆಪಾದಿತ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಕಳೆದೊಂದು ವರ್ಷದಿಂದ ರೈತರು ಧರಣಿ ನಡೆಸುತ್ತಿದ್ದಾರೆ. 600 ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ಹೋರಾಟ ನಿರತ ರೈತರನ್ನು ವಾಹನ ಹರಿಸಿ ಚಕ್ರದ ಅಡಿಯಲ್ಲಿ ಕೊಲ್ಲಲಾಗಿದೆ. ಪ್ರಧಾನಿ ಮೋದಿ ಅವರಿಗೆ ರೈತರ ಮೇಲೆ ಇಷ್ಟೊಂದು ದ್ವೇಷ ಯಾಕೆ ಎಂದು ಪ್ರಶ್ನಿಸಿದರು.
ಪ್ರಧಾನಿ ಅವರು ತಕ್ಷಣ ಮೃತ ಪಟ್ಟಿರುವ ರೈತರ ಮನೆಗಳಿಗೆ ತೆರಳಬೇಕು. ಇಡೀ ದೇಶವೇ ರೈತರಿಗೆ ನ್ಯಾಯ ದೊರಕುವುದನ್ನು ಎದುರು ನೋಡುತ್ತಿದೆ. ನಿರ್ಧಾರ ಪ್ರಧಾನ ಮಂತ್ರಿಗಳ ಕೈಯಲ್ಲಿದೆ ಎಂದರು.