Advertisement

ಚುನಾವಣೆಗಾಗಿ ಸಿದ್ದು ಪುತ್ರನ ತಯಾರು ಮಾಡ್ತಿರೋದೇಕೆ?

03:45 AM Jun 25, 2017 | Team Udayavani |

ನಾಗಮಂಗಲ: “ಜಾತ್ಯತೀತ ಜನತಾದಳದಿಂದ ನಾನು ಮತ್ತು ಎಚ್‌.ಡಿ.ರೇವಣ್ಣ ಬಿಟ್ಟರೆ ಬೇರಾರೂ ನಮ್ಮ ಕುಟುಂಬದಿಂದ ಸ್ಪರ್ಧಿಸುವುದಿಲ್ಲ’ ಎಂದು ಹೇಳುತ್ತಲೇ ಬಂದಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಭವಾನಿ ರೇವಣ್ಣ ಮತ್ತು ಪ್ರಜ್ವಲ್‌ ರೇವಣ್ಣ ಸ್ಪರ್ಧೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟಂತೆ ಕಾಣುತ್ತಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಭವಾನಿ ಮತ್ತು ಪ್ರಜ್ವಲ್‌ ಸ್ಪರ್ಧೆಯ ವಿಚಾರವಾಗಿ ಪಕ್ಷದ ರಾಷ್ಟ್ರಾಧ್ಯಕ್ಷ ಎಚ್‌.ಡಿ. ದೇವೇಗೌಡ ಮತ್ತು ಆಯಾ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಕುಮಾರಸ್ವಾಮಿ ತಿಳಿಸಿದರು.

Advertisement

ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀ ಕಾಲಭೈರವೇಶ್ವರಸ್ವಾಮಿಗೆ ಅಮಾವಾಸ್ಯೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಜೆಡಿಎಸ್‌ ಪಕ್ಷವನ್ನು ಅಪ್ಪ, ಮಕ್ಕಳ ಪಕ್ಷ ಎಂದು ಜರಿಯುತ್ತಾರೆ.

ಅದೇ ಪಕ್ಷದಿಂದಲೇ ಅವರು ಉಪ ಮುಖ್ಯಮಂತ್ರಿಯಾಗಿದ್ದು, ಅದೇ ಕಾರಣಕ್ಕೆ ಕಾಂಗ್ರೆಸ್‌ನವರು ಕರೆತಂದು ಮುಖ್ಯಮಂತ್ರಿ ಮಾಡಿದ್ದಾರೆ ಎಂದು ಹೇಳಿದರು. ನಮ್ಮದು ಅಪ್ಪ, ಮಕ್ಕಳ ಪಕ್ಷವೇ, ತನ್ನ ಮಗನನ್ನು ಚುನಾವಣೆಗೆ ನಿಲ್ಲಿಸಲು ಸಿದ್ದರಾಮಯ್ಯ ಈಗಾಗಲೇ ಕಾರ್ಯತಂತ್ರ ರೂಪಿಸಿದ್ದಾರೆ. ಹಾಗಿದ್ದರೆ ಅದು ಏನು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ನನ್ನ ಗ್ರಾಮ ವಾಸ್ತವ್ಯದ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯನವರಿಗಿಲ್ಲ. ನಾನು ಜಮೀನಿನಲ್ಲಿ ಉಳುಮೆ ಮಾಡಿದ್ದು, ಕೃಷಿ ಬಗ್ಗೆ ನನಗೂ ಅನುಭವ ಇದೆ. ಅವರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.

ಎಚ್‌ಡಿಕೆ ಜತೆ ವಿಶೇಷ ಪೂಜೇಲಿ ಪಾಲ್ಗೊಂಡ ಎಚ್‌.ವಿಶ್ವನಾಥ್‌
ನಾಗಮಂಗಲ
: ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಅಮಾವಾಸ್ಯೆ ಪ್ರಯುಕ್ತ ಶ್ರೀ ಕಾಲಭೈರವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುದ ವೇಳೆ ಆಗಮಿಸಿದ ಮಾಜಿ ಸಂಸದ ಎಚ್‌. ವಿಶ್ವನಾಥ್‌, ತಾವೂ ಸಹ ಪೂಜೆಯಲ್ಲಿ ಪಾಲ್ಗೊಂಡರು. ಕುಮಾರಸ್ವಾಮಿ ಹಾಗೂ ವಿಶ್ವನಾಥ್‌ ಅವರ ಭೇಟಿ ತೀವ್ರ ಕುತೂಹಲ ಕೆರಳಿಸಿದ್ದು, ಆಷಾಢ ನಂತರ ಅವರು ಜೆಡಿಎಸ್‌ ಸೇರ್ಪಡೆಗೊಳ್ಳಲಿರುವುದು ನಿಶ್ಚಿತವಾಗಿದೆ. ಈ ವೇಳೆ ಮಾತನಾಡಿದ ವಿಶ್ವನಾಥ್‌, ಇದು ಸೌಜನ್ಯದ ಭೇಟಿಯಷ್ಟೆ. ನನ್ನ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಪಡೆದು ಯಾವ ಪಕ್ಷ ಸೇರಬೇಕೆನ್ನುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ ಹೇಳಿದರು.

ಗೌಡರ ಮನೆಯಲ್ಲಿನ ಶಾಸಕರ ಸಂಖ್ಯೆಯೆಷ್ಟು?
ಮೈಸೂರು:
ಮುಖ್ಯಮಂತ್ರಿ ಅವರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ದೇವೇಗೌಡರ ಮನೆಯಲ್ಲಿರುವ ಶಾಸಕರೆಷ್ಟು ಎಂದು ಪ್ರಶ್ನಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿ, “ನಾನು ರಾಜಕಾರಣಕ್ಕೆ ಬಂದು 40 ವರ್ಷವಾಯಿತು. ನನ್ನ ಮಕ್ಕಳು ಯಾರಾದರೂ ಶಾಸಕರಾಗಿದ್ದಾರಾ?. ದೇವೇಗೌಡರ ಮನೆಯಲ್ಲಿ ಎಷ್ಟು ಜನ ಶಾಸಕರಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಇವರೇನು ನನಗೆ ಕುಟುಂಬ ರಾಜಕಾರಣದ ಬಗ್ಗೆ ಹೇಳಿಕೊಡುವುದು’ ಎಂದು ಟೀಕಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next