ಮೊಗಾದಿಶು(ಆಫ್ರಿಕಾ): ಭಾರತೀಯ ಉಪಖಂಡದಾದ್ಯಂತ ಸಮೋಸಾ ಜನಪ್ರಿಯ ತಿಂಡಿಯಾಗಿದೆ. ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನೇಪಾಳದಲ್ಲಿ ಜನರು ಸಮೋಸಾದ ಜತೆ ಟೀಯನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಹೀಗೆ ಅನೇಕ ಭಾರತೀಯ ಖಾದ್ಯಗಳು ವಿದೇಶಗಳಲ್ಲೂ ಹೆಸರುವಾಸಿಯಾಗಿದೆ. ಸಾಮಾನ್ಯವಾಗಿ ತಿಳಿದಿರುವಂತೆ ಪಾಶ್ಚಾತ್ಯ ದೇಶಗಳಲ್ಲಿಯೂ ಸಮೋಸಾ ಅಂಗಡಿಗಳು ಜನಪ್ರಿಯವಾಗಿವೆ.
ಇದನ್ನೂ ಓದಿ:ಒಂದೆಡೆ ಮದುವೆ, ಮತ್ತೊಂದೆಡೆ ಗಲಾಟೆ..: ಏನಿದು ವೈರಲ್ ವಿಡಿಯೋ
ಆಲೂಗಡ್ಡೆ, ವಿವಿಧ ತರಕಾರಿಗಳನ್ನೊಳಗೊಂಡ ಗರಿಗರಿಯಾದ ಸಮೋಸಾ ಹಲವರಿಗೆ ಮೆಚ್ಚಿನ ತಿಂಡಿಯಾಗಿದೆ. ಆದರೆ ಈ ಜನಪ್ರಿಯ ತಿಂಡಿ ಜಗತ್ತಿನ “ಈ” ದೇಶದಲ್ಲಿ ನಿಷೇಧಿಸಲಾಗಿದೆ ಎಂಬ ವಿಚಾರ ನಿಮಗೆ ತಿಳಿದಿದೆಯಾ? ಹೌದು ಈ ದೇಶದ ಕಾನೂನು ಪ್ರಕಾರ ಸಮೋಸಾ ತಯಾರಿಸುವುದಾಗಲಿ ಅಥವಾ ತಿನ್ನುವುದಾಗಲಿ ಅಪರಾಧ! ಒಂದು ವೇಳೆ ನೀವು ಕಾನೂನು ಉಲ್ಲಂಘಿಸಿದರೆ ನಿಮಗೆ ಶಿಕ್ಷೆ ಖಚಿತ ಎಂದು ವರದಿ ತಿಳಿಸಿದೆ.
ಆಫ್ರಿಕಾದ ಸೋಮಾಲಿಯಾದಲ್ಲಿ ಸಮೋಸಾ ನಿಷೇಧಿತ ತಿಂಡಿಯಾಗಿದೆ. ಜನಪ್ರಿಯ ಪಾಶ್ಚಾತ್ಯ ತಿಂಡಿ ಸಮೋಸಾವನ್ನು ಸೋಮಾಲಿಯಾದ ಉಗ್ರಗಾಮಿ ಇಸ್ಲಾಮ್ ಬಂಡುಕೋರರು ನಿಷೇಧಿಸಿ ಫರ್ಮಾನು ಹೊರಡಿಸಿದ್ದಾರೆ. ಸೋಮಾಲಿಯಾದಲ್ಲಿ ನಡೆಯುತ್ತಿರುವ ನಾಗರಿಕ ಯುದ್ಧದಲ್ಲಿ ಅಲ್ ಶಬಾಬ್ ಮೂಲಭೂತವಾದಿ ಗುಂಪು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈ ಗುಂಪು ಸೋಮಾಲಿಯದಲ್ಲಿನ ಅಲ್ ಖೈದಾ ಜೊತೆ ನಿಕಟ ಸಂಪರ್ಕ ಹೊಂದಿದ್ದು, ಸೋಮಾಲಿಯಾದ ಬಹುತೇಕ ಭಾಗ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದು, 2011ರಿಂದ ಸಮೋಸಾವನ್ನು ನಿಷೇಧಿಸಿರುವುದಾಗಿ ವರದಿ ವಿವರಿಸಿದೆ.
ಸಮೋಸಾ ನಿಷೇಧದ ಬಗ್ಗೆ ಉಗ್ರಗಾಮಿ ಗುಂಪು ಅಧಿಕೃತವಾಗಿ ಯಾವುದೇ ವಿವರಣೆಯನ್ನು ನೀಡಿಲ್ಲ. ಆದರೆ ಸಮೋಸಾ ಕ್ರಿಶ್ಚಿಯನ್ ಸಮುದಾಯದ ಶಿಲುಬೆಯಂತೆ ತ್ರಿಕೋನಾಕೃತಿಯಲ್ಲಿರುವುದರಿಂದ ಉಗ್ರಗಾಮಿ ಗುಂಪು ಅದನ್ನು ನಿಷೇಧಿಸಿರುವುದಾಗಿ ಮಾಧ್ಯಮಗಳ ವರದಿ ತಿಳಿಸಿವೆ. ಸ್ಥಳೀಯವಾಗಿ ಸಾಂಬುಸಾಸ್ (ಸಮೋಸಾ) ಎಂದು ಕರೆಯಲಾಗುವ ಈ ತಿಂಡಿಯನ್ನು ಯಾರಾದರೂ ತಿನ್ನುವುದಾಗಲಿ ಅಥವಾ ತಯಾರಿಸುವುದು ಕಂಡುಬಂದಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ವರದಿ ತಿಳಿಸಿದೆ.