ಬೆಂಗಳೂರು: ‘ರಾಜ್ಯಸಭಾ ಸದಸ್ಯ ಸುಬ್ರಮಣ್ಯಂ ಸ್ವಾಮಿ ಅವರು 2016ರಲ್ಲೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಡ್ರಗ್ಸ್ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದರು. ಅದು ಮಾಧ್ಯಮಗಳಲ್ಲಿ ಪ್ರಕಟವೂ ಆಗಿತ್ತು. ಆಗ ಯಾಕೆ ಚಕಾರ ಎತ್ತಲಿಲ್ಲ’ ಎಂದು ಬುಧವಾರ ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ , ‘ಇದ್ದದ್ದು ಇದ್ದಂಗೆ ಹೇಳಿದ್ರೆ, ಎದ್ದು ಬಂದು ಎದೆಗೆ ಒದ್ದಂತೆ ಇದೆ ಎಂದು ಪ್ರತಿಕ್ರಿಯೆ ನೀಡಿದರು.
ರಾಹುಲ್‌ಗೆ “ಮಾದಕ ಲೋಕದ ನಂಟು’ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಕ್ಕೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದ ವಿಚಾರವಾಗಿ ತಿರುಗೇಟು ನೀಡಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಮಾತನಾಡಿ,’ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಬೇಜವಾಬ್ದರಿ ಹೇಳಿಕೆಗಳನ್ನ ಕೊಡುತ್ತಿದ್ದಾರೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳು ಎಂಬ ಪರಿ ಇಲ್ಲದೆ ಮಾತನಾಡುತ್ತಿದ್ದಾರೆ. ಮೈಮೇಲೆ ಕೂಗುಮಾರಿ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಆರ್ ಎಸ್ ಎಸ್ ಬಗ್ಗೆ ಅವಹೇಳನ, ಟೀಕೆ ಸರಿ ಅಲ್ಲ. ಕೂಡಲೇ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.