Advertisement

CWC2023: ಪ್ಲ್ಯಾನ್ ಮಾಡಿದ್ದು ಒಂದು, ಆಗಿದ್ದು ಮತ್ತೊಂದು; ರಾಹುಲ್ ಈ ಅಚ್ಚರಿಯ ಕಾರಣ ಬಹಿರಂಗ

11:17 AM Oct 09, 2023 | Team Udayavani |

ಚೆನ್ನೈ: 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಕೂಟದಲ್ಲಿ ಭಾರತ ಶುಭಾರಂಭ ಮಾಡಿದೆ. ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಭಾರತ ತಂಡವು ಆರು ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಆರಂಭಿಕ ಕುಸಿತ ಕಂಡಿದ್ದ ಭಾರತಕ್ಕೆ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ತಮ್ಮ ಅಮೋಘ ಆಟದಿಂದ ತಂಡವನ್ನು ಗೆಲುವಿನ ಗುರಿ ತಲುಪಿಸಿದರು.

Advertisement

ಕೇವಲ ಎರಡು ರನ್ ಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವೇಳೆ ಕ್ರೀಸ್ ಗೆ ಬಂದ ರಾಹುಲ್ ಅತ್ಯುತ್ತಮ ಇನ್ನಿಂಗ್ ಆಡಿದರು. ವಿರಾಟ್ ಕೊಹ್ಲಿ ಜೊತೆಗೆ 164 ರನ್ ಜೊತೆಯಾಟವಾಡಿದರು. ಅಲ್ಲದೆ 115 ಎಸೆತಗಳಲ್ಲಿ 97 ರನ್ ಗಳಿಸಿ ಅಜೇಯರಾಗಿ ಉಳಿದರು.

ಕೊನೆಯಲ್ಲಿ ಭಾರತದ ಗೆಲುವಿಗೆ ಐದು ರನ್ ಅಗತ್ಯವಿತ್ತು. ರಾಹುಲ್ 91 ರನ್ ಗಳಿಸಿ ಆಡುತ್ತಿದ್ದರು. ಈ ವೇಳೆ ಪ್ಯಾಟ್ ಕಮಿನ್ಸ್ ಎಸೆತಕ್ಕೆ ಲಾಂಗ್ ಆನ್ ಕಡೆಗೆ ಸಿಕ್ಸರ್ ಬಾರಿಸಿ ತಂಡಕ್ಕೆ ಜಯ ತಂದಿತ್ತರು. ಚೆಂಡು ಸಿಕ್ಸರ್ ಗೆರೆ ದಾಟುತ್ತಿದ್ದಂತೆ ಅಲ್ಲೇ ಕುಳಿತ ರಾಹುಲ್ ಒಮ್ಮೆ ಅಚ್ಚರಿ ವ್ಯಕ್ತಪಡಿಸಿದರು. ಬಳಿಕ ನಗು ಚೆಲ್ಲಿದರು. ರಾಹುಲ್ ರ ಈ ಪ್ರತಿಕ್ರಿಯೆಯ ಕಂಡು ಹಲವರು ಅಚ್ಚರಿಗೊಂಡರು. ಇದರ ಬಗ್ಗೆ ಕೊನೆಗೆ ರಾಹುಲ್ ಮಾತನಾಡಿದ್ದಾರೆ.

“ಕೊನೆಯಲ್ಲಿ ನಾನು ಹೇಗೆ ಶತಕ ಬಾರಿಸುವುದು ಎಂದು ಯೋಚಿಸುತ್ತಿದ್ದೆ. ಗೆಲುವಿಗೆ ಐದು ರನ್, ಶತಕಕ್ಕೆ ಒಂಬತ್ತು ರನ್ ಅಗತ್ಯವಿತ್ತು. ಆಗ ಒಂದು ಬೌಂಡರಿ ಮತ್ತೊಂದು ಸಿಕ್ಸರ್ ಬಾರಿಸುವ ಎಂದು ಯೋಚಿಸಿದೆ. ಆದರೆ ನಾನು ಫೋರ್ ಗೆ ಎಂದು ಹೊಡೆದ ಚೆಂಡು ಸಿಕ್ಸರ್ ಗೆ ಹೋಯಿತು” ಎಂದರು.

ರಾಹುಲ್ 97 ರನ್ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತೀಯ ವಿಕೆಟ್ ಕೀಪರ್ ಒಬ್ಬರು ಗಳಿಸಿದ ಎರಡನೇ ಅತಿ ಹೆಚ್ಚು ರನ್ ಇದಾಗಿದೆ. ಈ ಹಿಂದೆ 1999ರಲ್ಲಿ ಶ್ರೀಲಂಕಾ ವಿರುದ್ಧ 145 ರನ್ ಗಳಿಸಿದ್ದು ಇದುವರೆಗಿನ ದಾಖಲೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next